ಚಿಕ್ಕಬಳ್ಳಾಪುರ: ನಿತ್ಯ ಶಾಲೆ, ಕಾಲೇಜಿನ ಉಡುಗೆ ತೊಟ್ಟು ಬರುತ್ತಿದ್ದ ಆ ವಿದ್ಯಾರ್ಥಿಗಳು ಏಕಾಏಕಿ ಪಂಚೆ, ಸೀರೆ ತೊಟ್ಟು ಶುದ್ಧ ಸಂಪ್ರದಾಯಸ್ಥರಂತೆ ಬಂದಿದ್ದರು. ಯಾವಾಗಲೂ ಪಾಠ, ಪ್ರವಚನದ ಸದ್ದು ಕೇಳುತ್ತಿದ್ದ ಆ ಶಾಲೆ ಮತ್ತು ಕಾಲೇಜಿನ ಅಂಗಳಗಳಲ್ಲಿ ಸೋಮವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ವಿವಿಧ ವೇಷ ತೊಟ್ಟವರ ಮೋಜಿನ ಕೇಕೆ ಮುಗಿಲು ಮುಟ್ಟಿತ್ತು.

ನಗರದ ಹೊರವಲಯದಲ್ಲಿರುವ ಅಗಲಗುರ್ಕಿ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಬಿಜಿಎಸ್ ವಿಜ್ಞಾನ ಪಿಯು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಸಂಪ್ರದಾಯ ಮತ್ತು ಸಾಂಸ್ಕೃತಿಕ ದಿನ’ ಕಾರ್ಯಕ್ರಮಗಳಲ್ಲಿ ಕಂಡುಬಂದ ದೃಶ್ಯವಿದು.

ಕಾಲೇಜಿನ ವಿದ್ಯಾರ್ಥಿಗಳು ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಎನಿಸಿಕೊಂಡ ಧೋತರ, ಪಂಚೆ, ಜುಬ್ಬಾ, ಲಂಗ ದಾವಣಿ, ಸೀರೆ ತೊಟ್ಟು ಬಂದಿದ್ದರು. ಹುಡುಗಿಯರು ಕಾಲೇಜಿನ ಆವರಣದೊಳಗೆ ಬಣ್ಣ ಬಣ್ಣದ ರಂಗೋಲಿ ಬಿಡಿಸುವ ಜತೆಗೆ ಸಹಪಾಠಿಗಳ ಕೈಗಳ ಮೇಲೆ ಮೆಹಂದಿ ಚಿತ್ತಾರ ಬಿಡಿಸಿ, ಜನಪದ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಜತೆಗೆ ಆಲಂಕಾರಿಕ ವಸ್ತುಗಳನ್ನು ತಯಾರಿಸಿದರು. ಕೃತಕವಾಗಿ ನಿರ್ಮಿಸಿದ್ದ ಹಳ್ಳಿಯ ಮನೆ ಎದುರು ನಿಂತು ಫೋಟೊ ತೆಗೆಸಿಕೊಂಡು ಸಂತಸಪಟ್ಟರು.

ಹುಡುಗರು ಸಹ ನಾವೇನೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ವಿವಿಧ ವೇಷಗಳಲ್ಲಿ ಮಿಂಚಿದರು. ವಿಚಿತ್ರವಾಗಿ ಮುಖವರ್ಣ ಬಳೆದುಕೊಂಡು ಗಮನ ಸೆಳೆದರು. ಇನ್ನು ಕೆಲವರು ಭಜನೆ ಮಾಡಿ ಹಬ್ಬದ ಕಳೆಗೆ ರಂಗು ತುಂಬಿದರು. ಕಾಲೇಜಿನ ಆವರಣದ ಮೂಲೆ ಮೂಲೆಯಲ್ಲಿ ವಿದ್ಯಾರ್ಥಿಗಳಿಗೆ ಎಷ್ಟು ‘ಸೆಲ್ಫಿ’ ತೆಗೆದುಕೊಂಡರೂ ತೀರದ ಆಸೆ.

ಇನ್ನೊಂದೆಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ವಿವಿಧ ವೇಷ ತೊಟ್ಟು ಊರ ಜಾತ್ರೆಯ ಸಡಗರ ಹುಟ್ಟು ಹಾಕಿದ್ದರು. ವಿದ್ಯಾರ್ಥಿಗಳೇ ಪ್ರದರ್ಶಿಸಿದ ಹುಲಿವೇಷದ ಕುಣಿತ, ಗೊರವಯ್ಯ, ಕೀಲು ಕುದುರೆ, ಡೊಳ್ಳು ಕುಣಿತ, ಸೋಮನ ಕುಣಿತ, ಯಕ್ಷಗಾನ, ನವಿಲು ನೃತ್ಯ, ದಾಸರು, ಪಾಳೆಗಾರ, ಕರಡಿ ಕುಣಿತ, ಮೋಜಿನ ಬೊಂಬೆಗಳ ನಟನೆ ಪೋಷಕರ ಮನಮುದಗೊಳಿಸಿತು.

ಕಾರ್ಯಕ್ರಮದ ಅತಿಯಾಗಿ ಬಂದಿದ್ದ ನಟಿ ಅಮೂಲ್ಯ ಅವರು ಇವೆಲ್ಲಕ್ಕೂ ಕಳಸವಿಟ್ಟಂತೆ ಎರಡು ಕಡೆ ಕಾರ್ಯಕ್ರಮಗಳಿಗೆ ತಾರಾ ಮೆರಗು ನೀಡುವ ಜತೆಗೆ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರಲ್ಲಿ ಮತ್ತಷ್ಟು ಪ್ರೋತ್ಸಾಹ ತುಂಬಿದರು.

ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ವಿದ್ಯಾರ್ಥಿ ಜೀವನದಲ್ಲಿ ಸದಾ ಸಂಭ್ರಮವಿರಬೇಕು. ಅದು ಉತ್ತಮ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಯಾವುದನ್ನೂ ಬೇಜಾಬ್ದಾರಿತನದಿಂದ ನೋಡಬಾರದು. ಎಲ್ಲವನ್ನೂ ಖುಷಿಯಾಗಿ ತೆಗೆದುಕೊಂಡು ಹೋಗುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ವಿಜ್ಞಾನ ವಿದ್ಯಾರ್ಥಿಗಳು ಅನೇಕ ವಿಜ್ಞಾನಿಗಳನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಅವರಂತೆ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸಾಧನೆಗೆ ಭಯ ಪಡಬಾರದು. ಯಾವ ಸಮಸ್ಯೆ ಎದುರಾದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ವಿದ್ಯಾರ್ಥಿಗಳಲ್ಲಿರಬೇಕು. ಶುದ್ಧ ಮನಸ್ಸಿನಿಂದ ವಿದ್ಯಾಭ್ಯಾಸ ಮಾಡಿದರೆ ಜ್ಞಾನ ಹೆಚ್ಚುತ್ತದೆ’ ಎಂದು ತಿಳಿಸಿದರು.

ನಟಿ ಅಮೂಲ್ಯ ಮಾತನಾಡಿ, ‘ನಾನು ಎಲ್ಲದರಲ್ಲೂ ಹಿಂದೆ ಇದ್ದೆ. ನಾನು ಇವತ್ತು ಇಷ್ಟು ಎತ್ತರಕ್ಕೆ ಬೆಳೆದಿರುವುದಕ್ಕೆ ನನ್ನ ತಾಯಿಯೇ ಕಾರಣ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಯಾರು ಕೂಡ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಮರೆಯಬಾರದು. ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು’ ಎಂದು ಹೇಳಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಂ ರೆಡ್ಡಿ, ಅಮೂಲ್ಯ ಪತಿ ಜಗದೀಶ್‌ಗೌಡ, ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.