ಶುಕ್ರವಾರ, ಏಪ್ರಿಲ್ 3, 2020
19 °C
ಲಾಕ್‌ಡೌನ್‌ ನಡುವೆ ಜಿಲ್ಲೆಯಲ್ಲಿ ಹೆಚ್ಚಿದ ಕೋವಿಡ್‌ ನರ್ತನ, ತಲ್ಲಣಗೊಂಡ ಜನಜೀವನ

ಹೂವು, ತರಕಾರಿ ಮಾರಾಟಕ್ಕೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಸೋಂಕು ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಲಾಕ್‌ಡೌನ್‌ ನಡುವೆಯೂ, ಪ್ರಾಣ ಭಯ ತೊರೆದು ಜನರು ಯುಗಾದಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿಗೆ ಮುಗಿಬಿದಿದ್ದರು.

ನಗರದಾದ್ಯಂತ ಪೊಲೀಸರು, ನಗರಸಭೆ ಅಧಿಕಾರಿಗಳು ಆಟೊ ಪ್ರಚಾರದ ಮೂಲಕ ಜನರಿಗೆ ಮನೆ ಬಿಟ್ಟು ಹೊರಗೆ ಬರದೆ ಸರ್ಕಾರದ ಸೂಚನೆಗಳನ್ನು ಪಾಲಿಸುವಂತೆ ವಿನಂತಿಸಿದರೂ ನಗರದ ಅನೇಕ ಕಡೆಗಳಲ್ಲಿ ಮಂಗಳವಾರ ಜನದಟ್ಟಣೆ ಕಂಡುಬಂತು.

ನಗರದ ಸಂತೆ ಮಾರುಕಟ್ಟೆಯಲ್ಲಿ ಜನರು ಹಬ್ಬದ ಖರೀದಿಗೆ ಮುಗಿಬಿದ್ದರೆ, ಇನ್ನೊಂದೆಡೆ ಹಬ್ಬದ ಕಾರಣಕ್ಕೆ ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂವು, ತರಕಾರಿ ತಂದಿದ್ದ ರೈತರು ಮಾರಾಟ ಮಾಡಲು ಪರದಾಡುತ್ತಿದ್ದ ದೃಶ್ಯಗಳು ಗೋಚರಿಸಿದವು.

ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಂತರರಾಜ್ಯ ವಾಹನಗಳ ಸಂಚಾರ ನಿರ್ಬಂಧ ಮತ್ತು ಲಾಕ್‌ಡೌನ್‌ನಿಂದಾಗಿ ನಗರದ ಎಪಿಎಂಸಿಯಿಂದ ಹೂವು ಮತ್ತು ತರಕಾರಿ ಹೊರಗಡೆ ರವಾನೆಯಾಗುವುದು ಸ್ಥಗಿತಗೊಂಡ ಪರಿಣಾಮ ಮಂಗಳವಾರ ಹೂವಿನ ಬೆಲೆ ಪಾತಾಳಕ್ಕೆ ಕುಸಿದಿತ್ತು.

ಮಂಗಳವಾರ ಬೆಳಿಗ್ಗೆ ಎಪಿಎಂಸಿ ಹೂವಿನ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಗೆ ₹5 ರಿಂದ ₹10ರ ಆಸುಪಾಸು ಮಾರಿದ ಗುಲಾಬಿ, ಸೇವಂತಿಗೆ ಮತ್ತು ಚೆಂಡು ಹೂವುಗಳು ಮಧ್ಯಾಹ್ನದ ಹೊತ್ತಿಗೆ ಕೇಳುವವರೇ ಇಲ್ಲದಂತಹ ಸ್ಥಿತಿ ತಲೆದೋರಿತ್ತು. ಪರಿಣಾಮ, ಬೇಸತ್ತ ರೈತರು ಮಾರುಕಟ್ಟೆಯಲ್ಲೇ ಹೂವು ಸುರಿದು ಬರಿಗೈಯಲ್ಲಿ ಬೇಸರದಿಂದ ಹಿಂದಿರುಗುತ್ತಿದ್ದ ದೃಶ್ಯಗಳು ಗೋಚರಿಸಿದವು.

ಇನ್ನೊಂದೆಡೆ ಎಪಿಎಂಸಿಯ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಎಂದಿನಂತೆ ವಾಹನ, ಜನದಟ್ಟಣೆ ಕಂಡುಬಂತು. ಲಾಕ್‌ಡೌನ್‌ ಕಾರಣಕ್ಕೆ ತರಕಾರಿಗಳು ಹೊರರಾಜ್ಯ, ಜಿಲ್ಲೆಗಳಿಗೆ ಕಳುಹಿಸಲಾಗದ ಕಾರಣಕ್ಕೆ ವರ್ತಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ, ತರಕಾರಿ ಬೆಲೆಗಳು ಕೂಡ ನೆಲಕಚ್ಚಿದ್ದವು.

ಲಾಕ್‌ಡೌನ್‌ ಅನುಷ್ಠಾನದಿಂದಾಗಿ ಜಿಲ್ಲೆಯಾದ್ಯಂತ ಜೀವನಾವಶ್ಯಕ ವಸ್ತುಗಳ ಮಾರಾಟ ಮಳಿಗೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳು ಕಳೆದ ಮೂರು ದಿನಗಳಿಂದ ಸಂಪೂರ್ಣ ಸ್ತಬ್ಧಗೊಂಡಿವೆ.

ನಗರ, ಪಟ್ಟಣಗಳಲ್ಲಿ ಪ್ರಸ್ತುತ ದಿನಸಿ, ತರಕಾರಿ, ಹಾಲು, ಔಷಧಿ, ಕೃಷಿಗೆ ಸಂಬಂಧಿತ ಮಳಿಗೆಗಳು, ಬಂಕ್‌ಗಳು, ಸರ್ಕಾರಿ ಕಚೇರಿಗಳು ಮಾತ್ರ ಬಾಗಿಲು ತೆರೆಯುತ್ತಿವೆ. ನಗರದ ಮಾರುಕಟ್ಟೆ ಪ್ರದೇಶಗಳನ್ನು ಹೊರತುಪಡಿಸಿದಂತೆ ಇನ್ನುಳಿದೆಡೆ ಜನ ಸಂಚಾರವೂ ಅತಿ ವಿರಳವಾಗಿ ಕಂಡುಬರುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು