ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ದಬ್ಬಾಳಿಕೆ ವಿರುದ್ಧ ಒಗ್ಗೂಡಿ: ಸಂಸದ ಡಾ.ಕೆ.ಸುಧಾಕರ್

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಸಂಸದ ಡಾ.ಕೆ.ಸುಧಾಕರ್ ಸಲಹೆ
Published : 10 ಸೆಪ್ಟೆಂಬರ್ 2024, 14:31 IST
Last Updated : 10 ಸೆಪ್ಟೆಂಬರ್ 2024, 14:31 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್ ಕಾರ್ಯಕರ್ತರು ಅನ್ಯಾಯವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ಅದನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರು ಒಗ್ಗೂಡಬೇಕು’ ಎಂದು ಸಂಸದ ಡಾ.ಕೆ.ಸುಧಾಕರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಮತ್ತು ಮಂಡಲ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಗಂಭೀರ ಸ್ವರೂಪದ ಘಟನೆಗಳು ನಡೆದರೆ ನಾನೇ ಬರುತ್ತೇನೆ. ಬಿಜೆಪಿಗೆ ಬರಡು ಭೂಮಿ ಎನಿಸಿದ್ದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿಯೇ ಕಟ್ಟುತ್ತಿದ್ದೇವೆ’ ಎಂದರು. 

‘ಪಕ್ಷದ ಹಿರಿಯ ಮುಖಂಡರು ನಿಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಬೂತ್ ಮಟ್ಟದ ಮುಖಂಡರು ಮನೆ ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಮಾಡಿಸಬೇಕು. ಮೂರು ತಿಂಗಳಿಗೆ ಒಮ್ಮೆ ಬೂತ್ ಸಮಿತಿ ಸದಸ್ಯರನ್ನು ನಾನು ಭೇಟಿ ಮಾಡಿ ಮಾಹಿತಿ ಪಡೆಯುವೆ’ ಎಂದು ಹೇಳಿದರು.

‘ಸದಸ್ಯತ್ವ ಅಭಿಯಾನದಡಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಜನರ ಹೆಸರು ನೋಂದಾಯಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಸಂಸದ ಡಾ.ಕೆ.ಸುಧಾಕರ್‌ ಕರೆ ನೀಡಿದರು.

‘ಪಕ್ಷಕ್ಕೆ ಆಧಾರವೇ ಸಕ್ರಿಯ ಕಾರ್ಯಕರ್ತರು. ಬಿಜೆಪಿ ಜಗತ್ತಿನಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷ. 20 ಕೋಟಿ ಸದಸ್ಯರು ಪಕ್ಷದಲ್ಲಿ ಇದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2.10 ಲಕ್ಷ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ 1 ಲಕ್ಷ ಸದಸ್ಯರನ್ನು ನೋಂದಾಯಿಸಬೇಕು ಎಂಬ ಗುರಿ ನೀಡುತ್ತಿದ್ದೇವೆ. ಎಲ್ಲ ಕಾರ್ಯಕರ್ತರು ಇದಕ್ಕಾಗಿ ಶ್ರಮಿಸಬೇಕು. ಒಂದು ಬೂತ್‌ ವ್ಯಾಪ್ತಿಯಲ್ಲಿ ಶೇ 50ರಷ್ಟು ಜನರನ್ನು ಸದಸ್ಯರನ್ನಾಗಿಸಿದರೆ, ಮುಂದಿನ ಚುನಾವಣೆಗೆ ಅನುಕೂಲ ಆಗುತ್ತದೆ’ ಎಂದರು.

‘ಕೃಷಿ ಸಮ್ಮಾನ್‌, ಫಸಲ್‌ ಬಿಮಾ, ಜಲಜೀವನ್‌ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಹಲವು ಜನಪರ ಕಾರ್ಯಕ್ರಮಗಳು ಜಾರಿಯಾಗಿವೆ. ಆದ ಕಾರಣ ಬಿಜೆಪಿ ಮೇಲೆ ಜನರಿಗೆ ಹೆಚ್ಚು ವಿಶ್ವಾಸವಿದೆ. ಇತ್ತೀಚೆಗೆ ₹ 121ಕೋಟಿ ವೆಚ್ಚದ ವಿವಿಧ ಯೋಜನೆಗಳನ್ನು ಜಿಲ್ಲೆಗೆ ನೀಡಲಾಗಿದೆ. ಆದರೆ ಬಿಜೆಪಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ನಾಯಕರು ಟೇಪ್‌ ಕತ್ತರಿಸಿ ಹೆಸರು ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವರು ಈ ಕಡೆಗೆ ಬಂದಿದ್ದರೆ, ನಮ್ಮಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಹೇಗೆ ನಿರ್ಮಿಸಲಾಗಿದೆ ಎಂದು ತೋರಿಸುತ್ತಿದ್ದೆ’ ಎಂದರು.

‘ಜಿಲ್ಲೆಯಲ್ಲಿ ಮೇಗಾ ಡೇರಿ ಮಾತ್ರ ಆಗಿದೆ. ಆದರೆ ಪ್ಯಾಕೆಟ್‌, ಪನ್ನೀರ್ ಘಟಕ ಆಗಿಲ್ಲ. ಐಸ್‌ಕ್ರೀಮ್‌ ಘಟಕವನ್ನು ಚಿಂತಾಮಣಿಗೆ ತೆಗೆದುಕೊಂಡು ಹೋಗಲಾಗಿದೆ. ರಾಜಕೀಯ ದೃಷ್ಟಿಯಿಂದ ಎಲ್ಲವನ್ನೂ ನೋಡುತ್ತಿರುವುದರಿಂದ ಹೀಗಾಗಿದೆ. ಶಿಡ್ಲಘಟ್ಟದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆಯನ್ನು ಬಿಜೆಪಿ ಸರ್ಕಾರ ಮಂಜೂರು ಮಾಡಿತು. ಕಾಂಗ್ರೆಸ್‌ ನಾಯಕರು ಹೆಸರು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಎತ್ತಿನಹೊಳೆ ಯೋಜನೆಯಡಿ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರಕ್ಕೆ ನೀರು ಬಂದಿಲ್ಲ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ₹ 9,200 ಕೋಟಿ ಅನುದಾನ ನೀಡಿದೆ. ಮನಸ್ಸು ಮಾಡಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಯೋಜನೆ ಉದ್ಘಾಟನೆ ಮಾಡಬಹುದಿತ್ತು. ಎತ್ತಿನಹೊಳೆ ಕೀರ್ತಿಯನ್ನು ಕಾಂಗ್ರೆಸ್‌ ಸರ್ಕಾರ ಪಡೆದುಕೊಳ್ಳಲಿ. ಆದರೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಿ ಮೂರು ಜಿಲ್ಲೆಗಳಿಗೆ ನೀರು ಹರಿಸಲಿ’ ಎಂದರು. 

ಮುಖಂಡ ಕೆ.ವಿ.ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ, ರಂಗಪ್ಪ, ಕೃಷ್ಣಮೂರ್ತಿ, ಬಿ.ವಿ.ಆನಂದ್ ಮಾತನಾಡಿದರು. 

ರಾಜಣ್ಣ ಆವುಲಕೊಂಡರಾಯಪ್ಪ, ಲೀಲಾವತಿ ಶ್ರೀನಿವಾಸ್, ಪ್ರಸಾದ್, ಬಾಲಕುಂಟಹಳ್ಳಿ ಗಂಗಾಧರ್ ಇದ್ದರು.

ನಗರಸಭೆ ಚುನಾವಣೆ: ಹೈಕೋರ್ಟ್ ಮೊರೆ

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆಲ್ಲಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿದೆ. ಈ ಬಗ್ಗೆ ಬುಧವಾರ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಎಂ.ಆರ್.ಸೀತಾರಾಮ್ ಅವರ ಪುತ್ರ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರು ಮತ ಹಾಕಿರಲಿಲ್ಲ. ಅವರ ಮತ ಬೆಂಗಳೂರಿನಲ್ಲಿ ಇತ್ತು. ಆದರೆ ಈಗ ಆರು ತಿಂಗಳಿನಿಂದ ಚಿಕ್ಕಬಳ್ಳಾಪುರದಲ್ಲಿ ವಾಸಿಸುತ್ತಿರುವುದಾಗಿ ಹೇಳಿ ಮತದಾರರ ಪಟ್ಟಿ ಸೇರಿದ್ದಾರೆ. ಹೈಕೋರ್ಟ್‌ಗೆ ಈ ಬಗ್ಗೆ ವಸ್ತು ಸ್ಥಿತಿ ತಿಳಿಸುತ್ತೇವೆ ಎಂದರು. ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಅವರ ಮತ ಹಾಕಿಸಿಕೊಳ್ಳಲಿ ನಮ್ಮ ತಕರಾರು ಇಲ್ಲ. ನಗರಸಭೆ ಚುನಾವಣೆಯ ದಿನ ಗ್ರಾಮೀಣ ಮತ್ತು ನಗರ ಪ್ರದೇಶದ ನಮ್ಮ ಪಕ್ಷದ ಎಲ್ಲ ಮುಖಂಡರು ನಗರಸಭೆಗೆ ಬರಬೇಕು ಎಂದು ಹೇಳಿದರು.

ಸಿಪಿಐ ವಿರುದ್ಧ ಆಕ್ರೋಶ

ಕೌರನಹಳ್ಳಿಯಲ್ಲಿ 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್ ವಿರುದ್ಧ ಭಾಷಣದಲ್ಲಿ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು. ಈ ಸಭೆಯ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದೇ ಗುಡುಗಿದರು. ‘ಬಾಲಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಆರೋಪಿಗಳಿಗೆ ನಿಮ್ಮ ನೇರ ಕುಮ್ಮಕ್ಕು ಇದೆ. ಆ ಕುಟುಂಬ ನೋವಿನಲ್ಲಿದೆ. ಅವರ ಮನೆಯ ಮೇಲೆ ಕಲ್ಲು ಎಸೆಯುತ್ತಾರೆ. ಮಂಜುನಾಥ್ ನಿಮ್ಮನ್ನು ಯಾರು ರಕ್ಷಿಸುತ್ತಾರೆ ಕುಮ್ಮಕ್ಕು ಕೊಡುತ್ತಾರೆ ನೋಡುತ್ತೇನೆ ಎಂದರು. ನಾವು ಅನ್ಯಾಯವಾಗಿ ಯಾರ ಮೇಲೂ ಜಗಳ ಮಾಡುವುದಿಲ್ಲ. ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT