ಶನಿವಾರ, ಮೇ 28, 2022
26 °C
ಉಬ್ಬು ಸ್ಥಳದಲ್ಲಿ ಜಲ್ಲಿ ಕಲ್ಲು, ಕಬ್ಬಿಣದ ಚೂರು

ಸವಾರರಿಗೆ ಕಂಟಕವಾದ ರಸ್ತೆ ಉಬ್ಬು

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕಿನ ಬೆಂಗಳೂರು ಹಿಂದೂಪುರ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರಸ್ತೆಉಬ್ಬು (ರೋಡ್ ಹಂಪ್ಸ್) ಗಳಿಂದಾಗಿ ಬೈಕ್ ಹಾಗೂ ಕಾರು ಸವಾರರಿಗೆ ಕಂಟಕವಾಗಿವೆ.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯದಲ್ಲಿ ರಸ್ತೆ ದಿಬ್ಬಗಳ ಅಳವಡಿಕೆ ಅತಿ ವಿರಳ. ಇದರ‌ ಬದಲಾಗಿ ಸಾಕಷ್ಟು ಸೂಚನಾ ಫಲಕಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಸಂಚಾರ ನಿಯಮಗಳ ಬಗ್ಗೆ ನಿಖರವಾದ ಮಾಹಿತಿ ನೀಡುತ್ತಾರೆ.

ಆದರೆ ತಾಲ್ಲೂಕಿನ ತಿಪ್ಪಗಾನಗಳ್ಳಿಯಿಂದ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿಯ ನೆರೆಯ ಆಂಧ್ರದ ಗಡಿ ಭಾಗದವರೆಗೆ ನಿರ್ಮಾಣ ಮಾಡಿರುವ ಹೆದ್ದಾರಿಯಲ್ಲಿ ಸಿಗುವ ಪ್ರತೀ ಗ್ರಾಮದ ಬಳಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರಸ್ತೆ ದಿಬ್ಬಗಳಿಂದಾಗಿ ನಾಗರೀಕರಿಗೆ ನಿತ್ಯ ಕಿರಿಕಿರಿ ಉಂಟು ಮಾಡುವಂತಿವೆ. ಪ್ರತಿ ಗ್ರಾಮದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಅಳವಡಿಸಿರುವ ದಿಬ್ಬಗಳು ಪ್ರಯಾಣಿಕರಿಗೆ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚಾಗಿದೆ.

ನಿತ್ಯ ಈ ರಸ್ತೆಯ ಮಾರ್ಗವಾಗಿ ನೂರಾರು ಕಬ್ಬಿಣ ತುಂಬಿದ ಬಾರಿ ಗಾತ್ರದ ಲಾರಿಗಳು ಹಾಗೂ ಜೆಲ್ಲಿ ಕಲ್ಲುಗಳನ್ನು ತುಂಬಿದ ಟಿಪ್ಪರ್‌ಗಳ ಸಂಚಾರವಿದೆ. ಇದರಿಂದಾಗಿ ರಸ್ತೆಯಲ್ಲಿ ಸಾಗುವ ವೇಳೆ ಹಂಪ್ಸ್‌ಗಳಿರುವ ಸ್ಥಳದಲ್ಲಿ ಜಲ್ಲಿ ಕಲ್ಲುಗಳು ಹಾಗೂ ಕಬ್ಬಿಣದ ಚೂರುಗಳು ಎಲ್ಲೆಂದರಲ್ಲೆ ಬಿದ್ದಿರುತ್ತವೆ. ಯಾವುದೇ ವೇಗಮಿತಿಯಿಲ್ಲದೆ ಸಾಗುವ ಲಾರಿಗಳು ಮತ್ತು ಟಿಪ್ಪರ್‌ಗಳಲ್ಲಿನ ಜಲ್ಲಿ ಮತ್ತು ಕಬ್ಬಿಣದ ಅವಶೇಷಗಳು ಹಿಂಬದಿ ಬರುವ ದ್ವಿಚಕ್ರ‌, ತ್ರಿಚಕ್ರ ಹಾಗೂ ಕಾರು ಸವಾರರಿಗೆ ಸಂಚಕಾರ ತಂದೊಡ್ಡುತ್ತವೆ.

ತಾಲ್ಲೂಕಿನ ಗಡಿ‌ಭಾಗದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ ಸ್ಕ್ರಾಪ್ ಕೈಗಾರಿಕೆಗೆ ಕಚ್ಚಾ ವಸ್ತುಗಳನ್ನು ಬೆಂಗಳೂರು, ಯಲಹಂಕ ಹಾಗೂ ದೊಡ್ಡಬಳ್ಳಾಪುರ ಕಡೆಯಿಂದ ಸರಬರಾಜಾಗುತ್ತವೆ. ಈ ಎಲ್ಲಾ ಲಾರಿಗಳು ಗೌರಿಬಿದನೂರು ‌ಮೂಲಕ ಪ್ರಯಾಣಿಸುತ್ತವೆ. ಈ ವೇಳೆ ತಿಪ್ಪಗಾನಹಳ್ಳಿಯಿಂದ ಆರಂಭಗೊಂಡು ಕುಡುಮಲಕುಂಟೆಯ ವರೆಗೆ ಇರುವ ಪ್ರತೀ ಹಂಪ್ಸ್ ಬಳಿ ಸ್ಕ್ರಾಪ್‌ನ ಅವಶೇಷಗಳು ಬಿದ್ದಿರುತ್ತವೆ. ಇವುಗಳ ಜತೆಗೆ ಓವರ್ ಲೋಡೆಡ್ ಟಿಪ್ಪರ್‌ಗಳಿಂದ ಬೀಳುವ ಜಲ್ಲಿಕಲ್ಲುಗಳೂ ಸೇರಿ ಸಾಕಷ್ಟು ಅವಘಡ ಮತ್ತು ಅನಾಹುತಕ್ಕೆ ಕಾರಣವಾಗುತ್ತವೆ ಎನ್ನುತ್ತಾರೆ ಸ್ಥಳೀಯರು.

ಎಚ್ಚೆತ್ತುಕೊಳ್ಳದ ಪೊಲೀಸರು: ನಿತ್ಯ ನಗರ ವ್ಯಾಪ್ತಿಯಲ್ಲಿ ನೂರಾರು ಬಾರಿ ಗಾತ್ರದ ಲಾರಿಗಳು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದಲ್ಲದೆ ವಾಹನ ಸವಾರರಿಗೆ ಕಂಟಕವಾಗುವಂತೆ ಮಿತಿಮೀರಿದ ಮಟ್ಟದಲ್ಲಿ ಕಬ್ಬಣ, ಸಿಮೆಂಟ್ ‌ಹಾಗೂ ಇನ್ನಿತರ ವಸ್ತುಗಳನ್ನು ನಗರದ ಮುಖ್ಯ ರಸ್ತೆಯಲ್ಲೆ ಸಾಗುತ್ತಿದ್ದರೂ ಕೂಡ ಇವರ ವಿರುದ್ದ ಕ್ರಮ ವಹಿಸಲು ಸ್ಥಳೀಯ ‌ಪೊಲೀಸರು ಮೀನಾಮೇಷ ಎಣಿಸುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಡುವಂತಿವೆ. ಬಾರಿ ಗಾತ್ರದ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸುವ ಮೂಲಕ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮೃತ್ಯಕೂಪಗಳಾಗಿದ್ದರೆ. ಆದರೂ ಕೂಡ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂಬುದು ನಾಗರಿಕರ ಅಳಲು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು