ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ: ಗಲ್ಲಿಗಲ್ಲಿಗಳಲ್ಲಿ ಜೈಕಾರ

ಸೋಮವಾರ ಒಂದೇ ದಿನ 84 ನಾಮಪತ್ರಗಳು ಸಲ್ಲಿಕೆ, ಉಮೇದುವಾರಿಕೆ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನ
Last Updated 27 ಜನವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ನಗರಸಭೆ ಚುನಾವಣೆ ಚಟುವಟಿಕೆ ಬಿರುಸು ಪಡೆದಿದ್ದು, ಮಂಗಳವಾರ (ಜ.28) ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಕಳೆದ ಏಳು ದಿನಗಳಿಂದ ಮಂದಗತಿಯಲ್ಲಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ದಿಢೀರ್ ರಂಗುಪಡೆದಿತ್ತು.

ನಗರ ಗಲ್ಲಿಗಲ್ಲಿಗಳಲ್ಲಿ ಆಕಾಂಕ್ಷಿಗಳ ಹಿಂದೆ ಹಿಂಡುಗಟ್ಟಿ ಜನರು ಜೈಕಾರ ಹಾಕುತ್ತ ಚುನಾವಣಾಧಿಕಾರಿ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಗೋಚರಿಸಿದವು.

ನಾಮಪತ್ರ ಸಲ್ಲಿಕೆ ಆರಂಭವಾದ ದಿನದಿಂದ ನಾಲ್ಕು ದಿನಗಳಲ್ಲಿ ಬರೀ 12 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆದರೆ ಸೋಮವಾರ ಒಂದೇ ದಿನ ನಗರದ 31 ವಾರ್ಡ್‌ಗಳ ಪೈಕಿ 84 ನಾಮಪತ್ರಗಳು ಸಲ್ಲಿಕೆಯಾದವು. ಈವರೆಗೆ ಒಟ್ಟು 96 ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.

ನಾಮಪತ್ರ ಸ್ವೀಕಾರಕ್ಕೆ ವಾರ್ಡ್‌ವಾರು ವಿಂಗಡನೆ ಮಾಡಿ ನಾಲ್ಕು ಚುನಾವಣೆ ಅಧಿಕಾರಿಗಳನ್ನು ನಿಯೋಜಿಸಿ, ನಗರದಲ್ಲಿ ಪ್ರತ್ಯೇಕ ಕಾರ್ಯಾಲಯಗಳನ್ನು ತೆರೆಯಲಾಗಿದೆ.

1 ರಿಂದ 8 ವಾರ್ಡ್ ಉಮೇದುವಾರರು ನಗರದ ಹಳೆಯ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿ, 9 ರಿಂದ 16ನೇ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ನಗರದ ಎಂ.ಜಿ.ರಸ್ತೆಯಲ್ಲಿರುವ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಜಿಲ್ಲಾ ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು.

17 ರಿಂದ 24ರ ವಾರ್ಡ್‌ಗಳ ಉಮೇದುವಾರರು ನಗರಸಭೆ ಕಚೇರಿ, 25 ರಿಂದ 31ರ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು. ಎಲ್ಲ ಚುನಾವಣಾಧಿಕಾರಿಗಳ ಕಚೇರಿ ಎದುರು ಸೋಮವಾರ ಜನಸಂದಣಿ ಕಂಡುಬಂತು. ಆಕಾಂಕ್ಷಿಗಳು ಪೈಪೋಟಿಯಲ್ಲಿ ಬೆಂಬಲಿಗರನ್ನು ಕರೆತರುವ ಮೂಲಕ ತಮ್ಮ ಬಲ ಪ್ರದರ್ಶನಕ್ಕೆ ಮುಂದಾದ ದೃಶ್ಯಗಳು ಕಂಡುಬಂದವು.

ಬುಧವಾರ (ಜ.29) ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜ.31 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಫೆ.9 ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯ ಬಿದ್ದರೆ ಫೆ.10 ರಂದು ನಡೆಸಬೇಕಾಗುತ್ತದೆ. ಫೆ.11 ರಂದು ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಘೋಷಣೆಯಾಗಲಿದೆ.

ನಾಮಪತ್ರ ಸಲ್ಲಿಸಿದವರ ಪೈಕಿ ಪಕ್ಷೇತರರೇ ಹೆಚ್ಚಿನ ಸಂಖ್ಯೆಯಲ್ಲಿ (33) ಇದ್ದಾರೆ. ಪಕ್ಷವಾರು ನೋಡಿದಾಗ ಕಾಂಗ್ರೆಸ್‌ ಅಭ್ಯರ್ಥಿಗಳೇ (28) ಹೆಚ್ಚು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ (22), ಜೆಡಿಎಸ್‌ನಿಂದ 13 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಸಿಪಿಎಂ, ಬಿಎಸ್‌ಪಿ ಪಕ್ಷಗಳಿಂದ ಒಬ್ಬೇ ಒಬ್ಬ ಉಮೇದುವಾರಿಕೆ ಸಲ್ಲಿಸಿಲ್ಲ.

ಮಂಗಳವಾರ ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿರುವುದರಿಂದ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸು ಪಡೆಯಲಿವೆ. ಅನೇಕ ವಾರ್ಡ್‌ಗಳಲ್ಲಿ ಟಿಕೆಟ್‌ಗೆ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿರುವ ಕಾರಣ ಪಕ್ಷಗಳ ವರಿಷ್ಟರು, ನಾಯಕರಿಗೆ ಯಾರಿಗೆ ಟಿಕೆಟ್‌ ನೀಡುವುದು ಎನ್ನುವು ಪೀಕಲಾಟ ಶುರುವಿಟ್ಟುಕೊಂಡಿದೆ. ಗೆಲ್ಲುವ ಕುದುರೆಯಂತಹ ಆಕಾಂಕ್ಷಿಗೆ ಮಣೆ ಹಾಕಿ, ಅತೃಪ್ತರನ್ನು ಸಮಾಧಾನಪಡಿಸುವ ಕೆಲಸಗಳು ಜೋರಾಗಿ ನಡೆಯುತ್ತಿವೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ಬಲ್ಲವರು.

ಪಕ್ಷವಾರು ನಾಮಪತ್ರ ಸಲ್ಲಿಕೆ

28–ಕಾಂಗ್ರೆಸ್
22–ಬಿಜೆಪಿ
13–ಜೆಡಿಎಸ್‌
33–ಪಕ್ಷೇತರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT