ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ನಿಯಮಗಳಲ್ಲಿ ಅಸ್ಪಷ್ಟತೆ, ಉಪಾಧ್ಯಕ್ಷೆ ನಿರಾಳ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ವಿರುದ್ಧದ ಅವಿಶ್ವಾಸ ಗೊತ್ತುವಳಿ ಸಭೆ ಮುಂದೂಡಿಕೆ
Last Updated 20 ಮೇ 2020, 15:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಅವರ ವಿರುದ್ಧ ಬುಧವಾರ ನಡೆಯಬೇಕಿದ್ದ ಅವಿಶ್ವಾಸ ಗೊತ್ತುವಳಿ ಸಭೆ ಪಂಚಾಯತ್ ರಾಜ್ ಕಾಯ್ದೆಯ ಕೆಲ ಅಧಿನಿಯಮಗಳ ತಿದ್ದುಪಡಿಯಿಂದ ಉಂಟಾಗಿರುವ ಗೊಂದಲದ ಕಾರಣಕ್ಕೆ ಮುಂದೂಡಿಕೆಯಾಗಿದೆ.

ಇದರಿಂದಾಗಿ ನಿರ್ಮಲಾ ಅವರನ್ನು ಉಪಾಧ್ಯಕ್ಷೆ ಸ್ಥಾನದಿಂದ ಕೆಳಗಿಸಲು ಪಕ್ಷಾತೀತವಾಗಿ ಸದಸ್ಯರು ಧ್ವನಿ ಎತ್ತಿದ್ದ ಸದಸ್ಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ನಿರ್ಮಲಾ ಅವರು ತಾತ್ಕಾಲಿಕವಾಗಿ ಉಪಾಧ್ಯಕ್ಷೆ ಹುದ್ದೆಯಿಂದ ತಿರಸ್ಕೃತಗೊಳ್ಳುವ ತೂಗುಗತ್ತಿಯಿಂದ ಬಚಾವಾಗಿದ್ಧಾರೆ.

28 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ 21 ಕಾಂಗ್ರೆಸ್‌ ಸದಸ್ಯರು, 5 ಜೆಡಿಎಸ್‌, ಬಿಜೆಪಿ ಮತ್ತು ಸಿಪಿಎಂ ತಲಾ ಒಬ್ಬ ಸದಸ್ಯರು ಇದ್ದಾರೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರ ನಡುವಿನ ಬಣ ಜಗಳ ನಾಲ್ಕು ವರ್ಷಗಳಲ್ಲಿ ಮೂರು ಅಧ್ಯಕ್ಷರನ್ನು ಕಾಣುವಂತಾಗಿದೆ.

ಶಾಸಕರುಗಳ ’ಹಸ್ತಕ್ಷೇಪ‘ದಿಂದಾಗಿ ಕೈ ಸದಸ್ಯರ ನಡುವಿನ ಕಿತ್ತಾಟದಲ್ಲಿ ನಾಲ್ಕು ವರ್ಷ ಉಪಾಧ್ಯಕ್ಷೆ ಸ್ಥಾನದಲ್ಲಿ ಕುಳಿತಿರುವ ನಿರ್ಮಲಾ ಅವರತ್ತ ಅಧಿಕಾರಾವಧಿಯ ಕೊನೆಯ ಚರಣದಲ್ಲಿ ಪಕ್ಷಾತೀತವಾಗಿ ಸದಸ್ಯರ ಚಿತ್ತ ಹರಿದಿತ್ತು. ಇತ್ತೀಚೆಗೆ ನಿರ್ಮಲಾ ಅವರ ವಿರುದ್ಧ ಸ್ವಪಕ್ಷೀಯರೇ ಕೊಟ್ಟು ಮಾತು ಉಲ್ಲಂಘಿಸಿದ ಆರೋಪ ಮಾಡಿ, ತಲೆದಂಡಕ್ಕೆ ಮುಂದಾಗಿದ್ದರು.

ಆರಂಭದಲ್ಲಿಯೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಧಿಕಾರಗಳನ್ನು ಹಂಚಿಕೆ ಮಾಡಲಾಗಿತ್ತು. ಅದರಂತೆ ನಿರ್ಮಲಾ ಅವರು ಎರಡೂವರೆ ವರ್ಷ ಅಧಿಕಾರದಲ್ಲಿದ್ದು, ಉಳಿದ ಅವಧಿಯನ್ನು ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಕ್ಷೇತ್ರದ ಸದಸ್ಯೆ ಸರಸ್ವಮ್ಮ ಅಶ್ವತ್ಥನಾರಾಯಣಗೌಡ ಅವರಿಗೆ ಬಿಟ್ಟು ಕೊಡಬೇಕಿತ್ತು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕುರ್ಚಿಗೆ ಅಂಟಿಕೊಂಡಿದ್ದಾರೆ ಎನ್ನುವುದು ಅನೇಕ ಸದಸ್ಯರ ಆರೋಪವಾಗಿದೆ.

ಆದರೆ, ಇದನ್ನು ಅಲ್ಲಗಳೆದಿದ್ದ ನಿರ್ಮಲಾ ಅವರು, ’ಉಪಾಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ಮಾಡಿದ್ದರು ಎನ್ನುವುದೇ ಶುದ್ಧ ಸುಳ್ಳು. ಹಾಗಿದ್ದರೆ, ನಾಲ್ಕು ವರ್ಷ ಏಕೆ ಸುಮ್ಮನಿದ್ದರು? ಸದಸ್ಯರು, ಶಾಸಕರು ಕಿತ್ತಾಡಿಕೊಳ್ಳುತ್ತ ಅವರಿಗೆ ಬೇಕು ಅಂದಾಗಲೆಲ್ಲ ನನ್ನನ್ನು ಬಳಸಿಕೊಂಡರು. ಇದೀಗ ವಿರುದ್ಧವೇ ತಿರುಗಿ ಬಿದ್ದಿದ್ದಾರೆ‘ ಎಂದು ಪ್ರತ್ಯಾರೋಪ ಮಾಡಿದ್ದರು.

ಉಪಾಧ್ಯಕ್ಷೆ ಸ್ಥಾನ ಸರಸ್ವತಮ್ಮ ಅವರಿಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್‌ ಹೈಕಮಾಂಡ್, ಸಚಿವ ಡಾ.ಕೆ.ಸುಧಾಕರ್, ಅನೇಕ ಶಾಸಕರು ಹೇಳಿದರೂ ನಿರ್ಮಲಾ ಅವರು ಸೊಪ್ಪು ಹಾಕದೆ, ಸ್ವಪಕ್ಷೀಯರೇ ಸೆಡ್ಡು ಹೊಡೆದು ಅಧಿಕಾರದಲ್ಲಿ ಮುಂದುವರಿದಿದ್ದರು.

ಇದರಿಂದಾಗಿ ಕೆರಳಿದ ಸದಸ್ಯರು ಪಕ್ಷಾತೀತವಾಗಿ ನಿರ್ಮಲಾ ಅವರನ್ನು ಉಪಾಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಲು ಒಮ್ಮತಕ್ಕೆ ಬಂದು, ಮೇ ಮೊದಲ ವಾರದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಮನವಿ ಮಾಡಿದ್ದರು.

ಆ ಮನವಿಯ ಮೆರೆಗೆ ಪ್ರಾದೇಶಿಕ ಆಯುಕ್ತರು ಬುಧವಾರ (ಮೇ 20) ಅವಿಶ್ವಾಸ ಗೊತ್ತುವಳಿ ಸಭೆ ನಿಗದಿಪಡಿಸಿದ್ದರು. ಇದು ರಾಜಕೀಯ ವಲಯದಲ್ಲಿ ಮತ್ತೆ ಸಂಚಲನ ಮೂಡಿಸಿ, ಅನೇಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.

ಆದರೆ, ಸರ್ಕಾರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 179(3) ಹಾಗೂ 180(6) ಪ್ರಕರಣಗಳಿಗೆ ತಂದಿರುವ ತಿದ್ದುಪಡಿಯಲ್ಲಿ ಪ್ರಾದೇಶಿಕ ಆಯುಕ್ತರು ಅವಿಶ್ವಾಸ ಮಂಡನೆ ಅರ್ಜಿಯನ್ನು ಸ್ವೀಕರಿಸುವ ವಿಧಾನ, ದಿನಾಂಕ ನಿಗದಿಗೊಳಿಸುವ ವಿಚಾರ, ನೋಟಿಸ್‌ ಹೊರಡಿಸಬೇಕಾದ ನಮೂನೆ, ಸಭೆಯಲ್ಲಿ ಅವಿಶ್ವಾಸ ಮಂಡನೆ ವಿಧಾನ ಹಾಗೂ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುವ ವಿಧಾನದ ನಿಯಮಗಳ ಬಗ್ಗೆ ಸರ್ಕಾರ ಸಷ್ಪವಾಗಿ ತಿಳಿಸಿಲ್ಲ.

ಜತೆಗೆ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಂಬಂಧಿಸಿದ ನಿಯಮಗಳ ರಚನೆ ಪ್ರಕ್ರಿಯೆ ಸದ್ಯ ಚಾಲ್ತಿಯಲ್ಲಿದೆ. ಅದು ಪೂರ್ಣಗೊಂಡು ಸರ್ಕಾರದ ಅನುಮೋದನೆ ಪಡೆದ ಬಳಿಕವಷ್ಟೇ ಉಪಾಧ್ಯಕ್ಷೆ ವಿರುದ್ಧದ ಅವಿಶ್ವಾಸ ಗೊತ್ತುವಳಿ ಸಭೆ ಕುರಿತು ಕ್ರಮಕೈಗೊಳ್ಳಲು ಪ್ರಾದೇಶಿಕ ಆಯುಕ್ತ ವಿ.ಪಿ.ಇಕ್ಕೇರಿ ಅವರು ನಿರ್ಧರಿಸಿದ್ಧಾರೆ.

ಸದ್ಯ, ಜಿಲ್ಲಾ ಪಂಚಾಯಿತಿಯಲ್ಲಿರುವ ಹಾಲಿ ಅಧಿಕಾರರೂಢರ ಅವಧಿ ಕೊನೆಗೊಳ್ಳಲು ಸುಮಾರು 10 ತಿಂಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಜಿಲ್ಲಾ ಪಂಚಾಯಿತಿಯ ಇತಿಹಾಸದಲ್ಲಿಯೇ ಇದೇ ಮೊದಲ ಪ್ರತಿಧ್ವನಿಸಿದ್ದ ಅವಿಶ್ವಾಸ ನಿರ್ಣಯದ ವಿಚಾರ ಸದಸ್ಯರ ಆಡಳಿತ ವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಬೇಸರ ತರಿಸಿತ್ತು.

ಉಪಾಧ್ಯಕ್ಷೆಯ ಬದಲಾವಣೆಯಿಂದಲಾದರೂ ಜಿಲ್ಲಾ ಪಂಚಾಯಿತಿಯಲ್ಲಿನ ರಾಜಕೀಯ ’ಪ್ರಹಸನ‘ಗಳು ತೆರೆ ಕಾಣಲಿವೆ ಎಂದು ಪ್ರಜ್ಞಾವಂತರು ಎದುರು ನೋಡುತ್ತಿದ್ದರು. ಇದೀಗ ಅವಿಶ್ವಾಸ ನಿರ್ಣಯ ವಿಧಾನದ ನಿಯಮಗಳಲ್ಲಿನ ಗೊಂದಲದಿಂದಾಗಿ ಆಡಳಿತಾವಧಿ ಕೊನೆಯ ಅಂಕಕ್ಕೆ ಬಂದರೂ ಅಭಿವೃದ್ಧಿಗಿಂತಲೂ ಒಣ ರಾಜಕೀಯ, ಆಂತರಿಕ ಕಿತ್ತಾಟದಲ್ಲೇ ಆಡಳಿತ ಮುಂದುವರಿಯಬೇಕಾಗಿ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT