ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಕ್ಕು ಹಿಡಿದು ಕಸವಾಗುತ್ತಿರುವ ವಾಹನಗಳು

ನಗರಸಭೆ ಆವರಣದಲ್ಲಿ ಧೂಳು ತಿನ್ನುತ್ತಿರುವ ಐದು ಆಟೊ ಟಿಪ್ಪರ್‌ಗಳು, ಅನೇಕ ವರ್ಷಗಳಿಂದ ಬಳಕೆಯಾಗದೆ ಅನುಪಯುಕ್ತಗೊಂಡ ಎರಡು ಡಂಪರ್ ಫ್ಲೆಸರ್
Last Updated 18 ಡಿಸೆಂಬರ್ 2019, 12:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ತ್ಯಾಜ್ಯ ಸಂಗ್ರಹಣೆಗೆ ಬಳಸಿ ಹಳತಾದ ವಾಹನಗಳು ಅತ್ತ ಉಪಯೋಗಕ್ಕೂ ಬಾರದೆ, ಇತ್ತ ಹರಾಜಾಗದೆ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತ ಕಸದ ನಡುವೆ ದಿನೇ ದಿನೇ ಕಸವಾಗಿ ರೂಪಾಂತರಗೊಳ್ಳುತ್ತಿವೆ.

ಸದ್ಯ ನಗರಸಭೆಯ ಆವರಣದಲ್ಲಿ ಐದು ಆಟೊ ಟಿಪ್ಪರ್‌ಗಳು, ಒಂದು ಡಂಪರ್ ಫ್ಲೆಸರ್ (ತ್ಯಾಜ್ಯ ಸುರಿಯುವ ಹಳದಿ ಬಣ್ಣದ ಕಬ್ಬಿಣದ ಕಂಟೈನರ್ ಸಾಗಿಸುವ ವಾಹನ) ಮತ್ತು ಕೋಟೆ ಪ್ರದೇಶದಲ್ಲಿ ಉಷೋದಯ ಶಾಲೆಯ ಬಳಿ ಖಾಲಿ ಜಾಗದಲ್ಲಿ ಒಂದು ಡಂಪರ್ ಫ್ಲೆಸರ್ ವಾಹನಗಳು ಬಳಕೆಯಾಗದೆ ಧೂಳು ತಿನ್ನುತ್ತ ತುಕ್ಕು ಹಿಡಿಯುತ್ತಿವೆ.

ನಗರಸಭೆ ಹೊಸ ಆಟೊ ಟಿಪ್ಪರ್‌ಗಳನ್ನು ಖರೀದಿಸುತ್ತಿದ್ದಂತೆ ಬಳಕೆಗೆ ಯೋಗ್ಯವಲ್ಲದ ಹಳೆಯ ಆಟೊ ಟಿಪ್ಪರ್‌ಗಳನ್ನು ಹರಾಜು ಹಾಕಬೇಕು. ಆದರೆ ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹರಾಜಿನಲ್ಲಿ ಮಾರಾಟವಾಗಿ ನಗರಸಭೆಗೆ ಆದಾಯದ ಮೂಲವಾಗಬೇಕಿದ್ದ ವಾಹನಗಳು ಅನೇಕ ವರ್ಷಗಳಿಂದ ಗಿಡಗಂಟಿಗಳ ನಡುವೆ ಧೂಳು ತಿನ್ನುತ್ತ ಪುನರ್ ಬಳಕೆ ಮಾಡಲಾಗದ ಸ್ಥಿತಿಗೆ ತಲುಪಿ ಮತ್ತಷ್ಟು ಬೆಲೆ ಕಳೆದುಕೊಳ್ಳುತ್ತಿವೆ.

ವಾಹನಗಳು ಅನೇಕ ವರ್ಷಗಳಿಂದ ನಿಂತಲೇ ನಿಂತ ಕಾರಣಕ್ಕೆ, ಕೆಲ ವಾಹನಗಳ ಬಿಡಿ ಭಾಗಗಳು ಕಣ್ಮರೆಯಾಗಿವೆ. ಅನೇಕ ವಾಹನಗಳು ಮೂಲ ಸ್ವರೂಪವನ್ನೇ ಕಳೆದುಕೊಂಡು ತ್ಯಾಜ್ಯದ ರಾಶಿಯ ನಡುವೆ ಧೂಳು ತಿನ್ನುತ್ತಿವೆ.

ಅನೇಕ ವರ್ಷಗಳ ಹಿಂದೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಕಬ್ಬಿಣದ ಕಂಟೈನರ್ ಬಳಕೆ ಮಾಡಲಾಗುತ್ತಿತ್ತು. ದುರ್ನಾತ, ಬೆಂಕಿ ಅವಘಡಗಳು ಸೇರಿದಂತೆ ವಿವಿಧ ಸಮಸ್ಯೆಗಳ ಕಾರಣಕ್ಕೆ ರಾಜ್ಯ ಸರ್ಕಾರ ಕಬ್ಬಿಣದ ಕಂಟೈನರ್‌ಗಳ ಬಳಕೆ ನಿರ್ಬಂಧಿಸಿತು.

ಆಗ ನಗರದಲ್ಲಿನ ಕಂಟೈನರ್‌ಗಳೆಲ್ಲ ಪುಟ್ಟತಿಮ್ಮನಹಳ್ಳಿ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕ ಸೇರಿದವು. ಕಂಟೈನರ್‌ಗಳ ಸಾಗಾಟಕ್ಕೆ ಬಳಸುತ್ತಿದ್ದ ಎರಡು ಡಂಪರ್ ಫ್ಲೆಸರ್ ವಾಹನಗಳು ಕೆಲಸವಿಲ್ಲದೆ ಕೆಲ ವರ್ಷಗಳಿಂದ ನಿಂತಲ್ಲೇ ನಿಂತು ಅನುಪಯುಕ್ತಗೊಂಡಿವೆ.

‘ಹೊಸ ವಾಹನ ಬಂದ ತಕ್ಷಣ ಅಧಿಕಾರಿಗಳು ಹಳೆಯ ವಾಹನಗಳತ್ತ ಅಸಡ್ಡೆ ತೋರುತ್ತಾರೆ. ಅದರ ಬದಲು ವಾಹನಗಳು ಸುಸ್ಥಿತಿಯಲ್ಲಿರುವಾಗಲೇ ಆದಷ್ಟು ಬೇಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ವಾಹನ ಪರೀಕ್ಷಿಸಿ ವರದಿ ಪಡೆದು, ಅವರು ನಿಗದಿಪಡಿಸುವ ಬೆಲೆಗೆ ಬೇಗ ಹರಾಜು ಹಾಕಿದರೆ ತುಕ್ಕು ಹಿಡಿದು ವಿರೂಪಗೊಂಡ ವಾಹನಗಳಿಗಿಂತಲೂ ಹೆಚ್ಚಿನ ಆದಾಯ ಬರುತ್ತದೆ’ಎಂದು ಚಾಮರಾಜಪೇಟೆ ನಿವಾಸಿ ಮುನಿರಾಜು ಹೇಳಿದರು.

‘ಆದರೆ, ಇಂತಹ ವಿಚಾರಗಳು ಬಹುತೇಕ ಅಧಿಕಾರಿಗಳಿಗೆ ಬೇಡದ ವಿಷಯವಾಗಿರುತ್ತದೆ. ಅದೇ ರೀತಿ ತಮ್ಮ ಸ್ವಂತ ವಾಹನವಾದರೆ ಕೆಟ್ಟಿದ್ದನ್ನೂ ಸ್ವಲ್ಪ ದುರಸ್ತಿ ಮಾಡಿಸಿದಂತೆ ಮಾಡಿ ಬೇಗ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಸರ್ಕಾರಿ ಸ್ವತ್ತುಗಳ ಕಥೆಯೇ ಇಷ್ಟು’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ನಗರಸಭೆ ಪರಿಸರ ಅಧಿಕಾರಿ ಶಿವಶಂಕರ್ ಅವರನ್ನು ವಿಚಾರಿಸಿದರೆ, ‘ನಗರಸಭೆಯಲ್ಲಿ ಆರು ಆಟೊ ಟಿಪ್ಪರ್‌ಗಳು, ಒಂದು ಟ್ಯಾಕ್ಟರ್ ಮತ್ತು ಎರಡು ಡಂಪರ್ ಫ್ಲೆಸರ್ ವಾಹನಗಳನ್ನು ಹರಾಜು ಹಾಕಬೇಕಿತ್ತು. ಇತ್ತೀಚೆಗೆ ನಡೆದ ಹರಾಜಿನಲ್ಲಿ ಒಂದು ಟ್ರ್ಯಾಕ್ಟರ್, ಒಂದು ಆಟೊ ಟಿಪ್ಪರ್ ಮಾತ್ರ ಮಾರಾಟವಾಗಿವೆ. ಉಳಿದ ಐದು ಆಟೊ ಟಿಪ್ಪರ್‌ಗಳಿಗೆ ಆರ್‌ಟಿಒ ಅಧಿಕಾರಿಗಳು ನಿಗದಿಪಡಿಸಿದ ಬೆಲೆ ದುಬಾರಿಯಾಗಿದೆ ಎಂದು ಹರಾಜಿನಲ್ಲಿ ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ, ಆರ್‌ಟಿಒ ಅವರಿಗೆ ಬೆಲೆ ಪರಿಷ್ಕರಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಶೀಘ್ರದಲ್ಲಿಯೇ ಉಳಿದ ವಾಹನಗಳನ್ನು ಹರಾಜು ಹಾಕುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT