ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ಕೆರೆಗಳಿಗೆ ನೀರು: ಶಾಸಕ ಸುಬ್ಬಾರೆಡ್ಡಿ ಸೂಚನೆ

ಎಚ್‌.ಎನ್. ವ್ಯಾಲಿ ಪಂಪ್‌ಹೌಸ್‌ಗೆ ಶಾಸಕರ ಭೇಟಿ, ಅಧಿಕಾರಿಗಳಿಗೆ ತಾಕೀತು
Last Updated 12 ಜೂನ್ 2021, 2:27 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಬಾಗೇಪಲ್ಲಿ ವಿಧಾನಸಭಾಕ್ಷೇತ್ರದ 27 ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆಯಿಂದ ಕೂಡಲೇ ನೀರು ಸರಬರಾಜು ಮಾಡುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಚ್.ಎನ್.ವ್ಯಾಲಿ ಪಂಪ್‌ಹೌಸ್‌ಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಪರಿಶೀಲಿಸಿ ಅಧಿಕಾರಿ
ಗಳೊಂದಿಗೆ ಚರ್ಚಿಸಿ ಮಾತನಾಡಿದರು.

‘ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಚಿಕ್ಕಬಳ್ಳಾಪುರ ಜಿಲ್ಲೆಯ 184 ಕೆರೆಗಳಿಗೆ ಎಚ್.ಎನ್.ವ್ಯಾಲಿಯಿಂದ ನೀರು ಹರಿಸಲು ಡಿಪಿಆರ್‌ನಲ್ಲಿ ಯೋಜನೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಬಾಗೇಪಲ್ಲಿ ತಾಲ್ಲೂಕಿನ 24 ಹಾಗೂ ಗುಡಿಬಂಡೆ ತಾಲ್ಲೂಕಿನ ಮೂರು ಕೆರೆಗಳಿಗೆ ನೀರು ಹರಿಸುವ ಯೋಜನೆ ಮಾಡಲಾಗಿದೆ’ ಎಂದರು.

‘ಬೆಂಗಳೂರು ನಗರದ ಕೊಳಚೆ ನೀರನ್ನು ಸಂಸ್ಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಅಂತರ್ಜಲಮಟ್ಟ ಹೆಚ್ಚಿಸುವ ಯೋಜನೆ ಮಾಡಿದೆ. ಕೂಡಲೇ ಎಚ್.ಎನ್. ವ್ಯಾಲಿಯಿಂದ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ, ನೀರು ಕೆರೆಗಳಿಗೆ ಸರಬರಾಜು ಮಾಡುವಲ್ಲಿ ಮುತುವರ್ಜಿ ವಹಿಸಬೇಕು. ಗುಣಮಟ್ಟದ ಕಾಮಗಾರಿ ಮಾಡಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಬೇಕು ಎಂದು ಸಣ್ಣನೀರಾವರಿ ಯೋಜನೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕುಗಳಲ್ಲಿ ನದಿನಾಲೆಗಳು ಇಲ್ಲ. ಮಳೆ ಆಧಾರಿತ ಪ್ರದೇಶಗಳಾಗಿವೆ. ರೈತರು ಕೃಷಿ ಹಾಗೂ ತರಕಾರಿಗಳನ್ನು ಬೆಳೆಯಲು ಸಂಕಷ್ಟ ಪಡುತ್ತಿದ್ದಾರೆ. ಕೆರೆ, ಕುಂಟೆಗಳಲ್ಲಿ ನೀರು ಇಲ್ಲ. ಅಂತರ್ಜಲ ಕುಸಿತವಾಗಿದೆ. ಶಾಶ್ವತವಾಗಿ ಕೆರೆಗಳಿಗೆ ನೀರು ಹರಿಸುವುದೇ ಮಾರ್ಗ ಆಗಿದೆ’ ಎಂದರು.

ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ಬಾಗೇಪಲ್ಲಿ ವಿಧಾನಸಭಾಕ್ಷೇತ್ರಕ್ಕೆ ಶಾಶ್ವತವಾದ ನೀರಿನ ಯೋಜನೆ ಮಾಡಬೇಕು. ಎಚ್.ಎನ್.ವ್ಯಾಲಿಯಿಂದ ಉಳಿದ ಕೆರೆಗಳಿಗೆ ಸಂಪರ್ಕ ಕಲ್ಪಿಸಬೇಕು. ಎತ್ತಿನಹೊಳೆಯಿಂದ, ಪಶ್ಚಿಮ ಘಟ್ಟಗಳಲ್ಲಿ ಬೀಳುವ ಮಳೆಯ ನೀರು ಸಮುದ್ರಗಳಿಗೆ ವೃಥಾ ಹರಿಯುವ ನೀರನ್ನು ಕಾಲುವೆಗಳ ಮೂಲಕ ಬಯಲುಸೀಮೆ ಪ್ರದೇಶಗಳಿಗೆ ಹರಿಸಲು ಯೋಜನೆ ರೂಪಿಸಬೇಕು. ನದಿನಾಲೆಗಳು ಇಲ್ಲದ ತಾಲ್ಲೂಕುಗಳಲ್ಲಿ ಶಾಶ್ವತವಾದ ನೀರಾವರಿ ಯೋಜನೆ ರೂಪಿಸಬೇಕು. ಆಂಧ್ರಪ್ರದೇಶದ ಗಡಿಯ ಚಿಲಮತ್ತೂರು ಕಡೆಗೆ ಕಾಲುವೆಗಳಲ್ಲಿ ಹರಿದಿರುವ ಕೃಷ್ಣಾ ನದಿ ನೀರನ್ನು ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಿಗೆ ಹರಿಯುವಂತೆ ಮಾಡಬೇಕು’ ಎಂದು ಸುಬ್ಬಾರೆಡ್ಡಿ ಮನವಿ ಮಾಡಿದರು.

ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ನರೇಂದ್ರಬಾಬು, ಸಹಾಯಕ ಕಾರ್ಯಪಾಲಕ ರವೀಂದ್ರನಾಥ್, ಸಹಾಯಕ ಎಂಜಿನಿಯರ್‌ಗಳು, ಶಾಸಕರ ಆಪ್ತ ಸಹಾಯಕ ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT