ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ತೋಟದಲ್ಲಿ ಹವಾಮಾನ ಮುನ್ಸೂಚನೆ ಯಂತ್ರ

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡ ಕುಗ್ರಾಮದ ರೈತ
Last Updated 27 ಏಪ್ರಿಲ್ 2021, 21:36 IST
ಅಕ್ಷರ ಗಾತ್ರ

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ):ತಿಂಗಳ ಮುಂಚಿತವಾಗಿ ಹವಾಮಾನ ಮುನ್ಸೂಚನೆ ನೀಡುವ ಸೆನ್ಸರ್‌ ಆಧಾರಿತ ಅತ್ಯಾಧುನಿಕ ಪುಟ್ಟ ಸಾಧನವೊಂದನ್ನು ತಾಲ್ಲೂಕಿನ ಮೇಲೂರು ಗ್ರಾಮದ ರೈತರೊಬ್ಬರು ತಮ್ಮ ತೋಟದಲ್ಲಿ ಅಳವಡಿಸಿಕೊಂಡಿದ್ದಾರೆ.

ಮೇಲೂರಿನ ಬಿ.ಎನ್.ಸಚಿನ್ ತಮ್ಮ ಜಮೀನಿನಲ್ಲಿ ಸ್ವಂತ ಹವಾಮಾನ ಯಂತ್ರ ಅಳವಡಿಸಿಕೊಂಡಿರುವಚಿಕ್ಕಬಳ್ಳಾಪುರ ಜಿಲ್ಲೆಯ ಮೊದಲ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರ ಜಮೀನಿನ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಇತರ ಜಮೀನುಗಳ ರೈತರು ಕೂಡ ಈ ಸಾಧನದ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಹವಾಮಾನ ಏರಿಳಿತ, ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ನೀಡುವ ‘ವೆದರ್ ಫೋರ್‌ಕಾಸ್ಟ್’ ಯಂತ್ರದ ಬಗ್ಗೆ ಸ್ನೇಹಿತರಿಂದ ತಿಳಿದುಕೊಂಡ ಸಚಿನ್‌ ₹ 40 ಸಾವಿರ ಕೊಟ್ಟು ಉಪಕರಣ ಖರೀದಿಸಿ ಅದನ್ನು ಜಮೀನಿನಲ್ಲಿ ಅಳವಡಿಸಿದ್ದಾರೆ.

ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಈ ಸಾಧನಕ್ಕೆ ವಿದ್ಯುತ್ ಬೇಕಿಲ್ಲ. ನಿರ್ವಹಣಾ ವೆಚ್ಚವೂ ಇಲ್ಲ. ಇದರಲ್ಲಿರುವ ಆಧುನಿಕ ಸೆನ್ಸರ್‌ ವ್ಯವಸ್ಥೆ ಸ್ಯಾಟ್‌ಲೈಟ್‌ ಸಂಪರ್ಕ ಸಾಧಿಸಿ ಹವಾಮಾನ ಮಾಹಿತಿ ಸಂಗ್ರಹಿಸುತ್ತದೆ. ಅದನ್ನುರೈತರ ಮೊಬೈಲ್‌ಗೆ ರವಾನಿಸುತ್ತದೆ.

ಒಂದು ತಿಂಗಳ ಮುಂಚಿತವಾಗಿ ಹವಾಮಾನ ಮುನ್ಸೂಚನೆ, ಒಂದು ವಾರದ ಹವಾಮಾನ ಬದಲಾವಣೆಗಳನ್ನು ಗ್ರಹಿಸುವ ಸಾಮರ್ಥ್ಯ ಈ ಸಾಧನಕ್ಕಿದೆ.

ಮಳೆ ಬೀಳುವ ಸಾಧ್ಯತೆ, ಗಾಳಿ ಯಾವ ದಿಕ್ಕಿನಿಂದ ಬೀಸುತ್ತದೆ ಮತ್ತು ಎಷ್ಟು ವೇಗವಾಗಿ ಬೀಸುತ್ತದೆ ಎಂಬ ಸೂಕ್ಷ್ಮ ಮಾಹಿತಿಗಳನ್ನೂ ರೈತರಿಗೆ ನೀಡುತ್ತದೆ.

‘ಮಳೆ ಬೀಳುವ ಸೂಚನೆಯನ್ನು ಒಂದು ತಿಂಗಳ ಮುಂಚೆಯೇ ತಿಳಿಸುತ್ತದೆ. ಪ್ರತಿ ಗಂಟೆಗೊಮ್ಮೆ ಉಷ್ಣಾಂಶ ಮತ್ತು ಆರ್ದ್ರತೆ ಮಾಹಿತಿ ಲಭಿಸುತ್ತದೆ. ಮಣ್ಣಿನಲ್ಲಿರುವ ನೀರಿನ ಅಂಶದ ಬಗ್ಗೆಯೂ ಮಾಹಿತಿ ನೀಡುತ್ತದೆ. ಇದರಿಂದ ಬೆಳೆಗೆ ಎಷ್ಟು ನೀರು ಬೇಕಾಗುತ್ತದೆ ಎಂಬುದನ್ನು ಸುಲಭವಾಗಿ ನಿರ್ಧರಿಸಬಹುದು. ಅನಗತ್ಯವಾಗಿ ಬೆಳೆಗೆ ನೀರು ಹರಿಸುವುದು ತಪ್ಪುತ್ತದೆ’ ಎನ್ನುತ್ತಾರೆ ಸಚಿನ್‌.

ಮಳೆಯ ಮುನ್ಸೂಚನೆ ಸಿಗುವುದರಿಂದ ಬೆಳೆಯ ಕಟಾವಿನ ಅವಧಿಯನ್ನು ಮುಂಚಿತವಾಗಿ ನಿರ್ಧರಿಸಬಹುದು. ಔಷಧಿ ಸಿಂಪಡನೆಯ ಸಮಯ ನಿಗದಿ ಮಾಡಿಕೊಳ್ಳಬಹುದು. ವಾತಾವರಣದ ಏರುಪೇರಿನಿಂದಾಗಿ ಶಿಲೀಂಧ್ರಗಳು ಬೆಳೆ ಹಾನಿಮಾಡುವುದನ್ನು ತಪ್ಪಿಸಬಹುದು.

ಬೆಳೆಗೆ ಮಾರಕವಾಗುವ ಯಾವ ರೀತಿಯ ಶಿಲೀಂಧ್ರಗಳು ಉತ್ಪತ್ತಿಯಾಗಬಹುದು, ರೋಗ ತಗಲುವ ಸಾಧ್ಯತೆ ಬಗ್ಗೆ ಮೂರು ದಿನ ಮುಂಚಿತವಾಗಿ ಮಾಹಿತಿ ಲಭಿಸುತ್ತದೆ. ಹಾಗಾಗಿ ಸಾಕಷ್ಟು ಮುಂಚಿತವಾಗಿ ರೈತರು ಎಚ್ಚೆತ್ತುಕೊಳ್ಳಬಹುದು.

ಬಿ.ಎನ್.ಸಚಿನ್
ಬಿ.ಎನ್.ಸಚಿನ್

ರೈತರ ಮೊಬೈಲ್‌ಗೆಕೀಟಬಾಧೆ ಮಾಹಿತಿ
ಈ ಉಪಕರಣ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ಮಾತ್ರ ನೀಡುವುದಿಲ್ಲ. ಉಪಕರಣದ ಒಂದು ಭಾಗದಲ್ಲಿ ಅಂಟು ಇದೆ. ತೋಟದ ಕೀಟಗಳು ಅದಕ್ಕೆ ಅಂಟಿಕೊಳ್ಳುತ್ತವೆ. ಈ ಮಾಹಿತಿ ಚಿತ್ರ ಸಮೇತ ಸ್ಯಾಟ್‌ಲೈಟ್‌ಗೆ ಮತ್ತು ಅಲ್ಲಿಂದ ಕೃಷಿ ಅಧ್ಯಯನ ಕೇಂದ್ರಕ್ಕೆ ರವಾನೆಯಾಗುತ್ತದೆ. ಈ ಮಾಹಿತಿ ಆಧರಿಸಿ ತೋಟದಲ್ಲಿ ಬೆಳೆಗೆ ಹಾನಿ ಮಾಡುವ ಯಾವ ಕೀಟಗಳಿವೆ ಎಂಬ ಮುನ್ನೆಚ್ಚರಿಕಾ ಸಂದೇಶ ರೈತರ ಮೊಬೈಲ್‌ಗೆ ಬರುತ್ತದೆ.
-ಸಚಿನ್‌, ಪ್ರಗತಿಪರ ರೈತ, ಮೇಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT