ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಿಯುವ ಯತ್ನ ತಡೆದು ಗೆಲ್ಲಿಸಿ

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರ ರೋಡ್ ಶೋದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ ಯಾಚನೆ
Last Updated 2 ಡಿಸೆಂಬರ್ 2019, 15:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ಡಾ.ಕೆ.ಸುಧಾಕರ್ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್‌, ಜೆಡಿಎಸ್‌ನವರು ಒಳ ಒಪ್ಪಂದ ಮಾಡಿಕೊಂಡು ತುಳಿಯುವ ಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದವರು ಬೆಳೆಯುವುದು ಬೇಡವೆ? ಸ್ವಾಭಿಮಾನದ ಈ ಚುನಾವಣೆಯಲ್ಲಿ ಕ್ಷೇತ್ರದ ಜನರು ಸುಧಾಕರ್ ಅವರನ್ನು ಗೆಲ್ಲಿಸಬೇಕು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ಚಿಕ್ಕಬಳ್ಳಾಪುರ ಮತ್ತು ಮಂಚೇನಹಳ್ಳಿಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿ ಮಾತನಾಡಿದ ಅವರು, ‘ಗಡಿ ಜಿಲ್ಲೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನೀಡಿದ್ದ ವೈದ್ಯಕೀಯ ಕಾಲೇಜನ್ನು ಸಮ್ಮಿಶ್ರ ಸರ್ಕಾರದಲ್ಲಿ ಕೆಲವರು ಕನಕಪುರಕ್ಕೆ ಕೊಂಡೊಯ್ದರು. ಸುಧಾಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆ ಕಾಲೇಜನ್ನು ಜಿಲ್ಲೆಗೆ ವಾಪಸ್‌ ತಂದರು’ ಎಂದು ತಿಳಿಸಿದರು.

‘ನಮ್ಮ ಸರ್ಕಾರದಲ್ಲಿ ಸುಧಾಕರ್ ಅವರು ನೂತನವಾಗಿ ಮಂಚೇನಹಳ್ಳಿ ತಾಲ್ಲೂಕು ಘೋಷಣೆ ಮಾಡಿಸುವ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ₹700 ಕೋಟಿ ಅನುದಾನ ತಂದಿದ್ದಾರೆ. ಇನ್ನು ಮುಂದೆ ಕೇವಲ ಸುಧಾಕರ್ ಮಾತ್ರವಲ್ಲ, ನಾವೆಲ್ಲಾ ನಿಮ್ಮೊಂದಿಗೆ ಇರುತ್ತೇವೆ. ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಿದ್ದೇವೆ. ಇಂದು ನಾವು ಸಚಿವರಾಗಿದ್ದರೆ ಅದರ ಹಿಂದೆ ಸುಧಾಕರ್ ರಾಜೀನಾಮೆ ಇದೆ. ಇವರ ಕೈ ಬಲಪಡಿಸುವ ಋಣ ನಮ್ಮದಾಗಿದೆ. ನೀವು ಒಬ್ಬ ಶಾಸಕರನ್ನು ಆಯ್ಕೆ ಮಾಡುತ್ತಿಲ್ಲ, ಬದಲಾಗಿ ಒಬ್ಬ ಸಚಿವರನ್ನು ಆಯ್ಕೆ ಮಾಡುತ್ತಿದ್ದಿರಿ’ ಎಂದರು.

ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಮಾತನಾಡಿ, ‘ಈವರೆಗೆ ಕಾಂಗ್ರೆಸ್ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ ವಿನಾ ಅವರ ಅಭಿವೃದ್ಧಿ ಮಾಡಿಲ್ಲ. ಕಳೆದ 72 ವರ್ಷಗಳಲ್ಲಿ ಕಾಂಗ್ರೆಸ್‌ನವರು ಘೋಷಣೆಯಲ್ಲಿ ಮಾತ್ರ ಬಡತನ ನಿವಾರಿಸಿದ್ದಾರೆ. ವಾಸ್ತವದಲ್ಲಿ ಇಂದಿಗೂ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ, ಆರೋಗ್ಯ, ವಸತಿ ದೊರೆತಿಲ್ಲ’ ಎಂದು ಆರೋಪಿಸಿದರು.

‘ಶೋಷಿತರ ಉದ್ಧಾರ ಕೇವಲ ಘೋಷಣೆಯಿಂದ ಸಾಧ್ಯವಿಲ್ಲ. ಇವತ್ತು ಯಡಿಯೂರಪ್ಪ ಅವರು ಶೋಷಿತ ವರ್ಗಗಳ ಕಲ್ಯಾಣ ಆಗಲಿ ಎಂದು ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಜತೆಗೆ ಎರಡು ಬೃಹತ್ ಇಲಾಖೆ ನೀಡಿ ಗೌರವಿಸಿದ್ದಾರೆ. ಶ್ರೀರಾಮುಲು ಅಂತವರಿಗೆ ಮಾನ್ಯತೆ ನೀಡಿ, ವಾಲ್ಮೀಕಿ ಸಮುದಾಯಕ್ಕೆ ಆದ್ಯತೆ ನೀಡಿದ್ದಾರೆ. ಜನ ಕಲ್ಯಾಣ ಆಗಬೇಕಾದರೆ, ಸುಭದ್ರ ಆಡಳಿತ ಇರಬೇಕಾದರೆ ಮುಂದಿನ ಮೂರೂವರೆ ವರ್ಷ ರಾಜ್ಯದಲ್ಲಿ ಒಂದು ಉತ್ತಮ ಸರ್ಕಾರ ಇರಬೇಕಾದರೆ, ದೇಶದ ಕೀರ್ತಿ ವಿಶ್ವ ಮಟ್ಟದಲ್ಲಿ ಎತ್ತಿಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನನಗೆ ಮತ ಕೊಡಿ’ ಎಂದು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕ್ಷೇತ್ರದ ಉಸ್ತುವಾರಿ, ಸಚಿವ ಸಿ.ಟಿ. ರವಿ, ಶಾಸಕರಾದ ಕುಮಾರಸ್ವಾಮಿ, ಗೂಳಿಹಟ್ಟಿ ಶೇಖರ್, ಅರಗ ಜ್ಞಾನೇಂದ್ರ, ಸಂಸದ ನಾರಾಯಣಸ್ವಾಮಿ, ಮುಖ್ಯಮಂತ್ರಿ ವಿಶೇಷ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಬಿಜೆಪಿ ಮುಖಂಡರಾದ ಚಕ್ರಪಾಣಿ, ಶಂಕ್ರಪ್ಪ, ವಿಶ್ವನಾಥ್ ರೋಡ್ ಶೋದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT