ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ವಿಶ್ವ ಸಮಾಜ ಕಾರ್ಯ ದಿನಾಚರಣೆ

ಮೈಲಾಪುರದ ಕೆರೆಯಲ್ಲಿ ‘ಉಬುಂಟು’ ಘೋಷವಾಕ್ಯದೊಂದಿಗೆ ಕೆಲಸ
Last Updated 20 ಮಾರ್ಚ್ 2021, 3:42 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಾಪುರದ ಕೆರೆಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಬಳಿ ಸಮಸೃಷ್ಟಿ ಸಮಾಜ ಕಾರ್ಯ ವೇದಿಕೆಯಿಂದ ವಿಶ್ವ ಸಾಮಾಜಿಕ ಕಾರ್ಯ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕೋಲಾರದ ಸಮಾಜ ಕಾರ್ಯ ವಿದ್ಯಾರ್ಥಿಗಳ ಸಮಸೃಷ್ಟಿ ವೇದಿಕೆಯಿಂದ ದುಡಿಯೋಣ ಬಾ ಅಭಿಯಾನದಡಿ ಕೆರೆ ಹೂಳೆತ್ತುತ್ತಿರುವ ಯುವಜನರ ಜತೆ ಸೇರಿ ಆಚರಣೆಯನ್ನು ನಡೆಸಿದ್ದು ವಿಶಿಷ್ಟವಾಗಿತ್ತು.

ವೇದಿಕೆಯ ಭವ್ಯ ಮಾತನಾಡಿ, ‘ಪ್ರತಿ ವರ್ಷ ಮಾರ್ಚ್‌ ಮೂರನೇ ವಾರ ಜಾಗತಿಕವಾಗಿ ಒಂದು ಘೋಷವಾಕ್ಯದೊಂದಿಗೆ ವಿಶ್ವದಾದ್ಯಂತ ಸಮಾಜ ಕಾರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಬಾರಿಯು ಜಾಗತಿಕವಾಗಿ ಉಬುಂಟು ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಉಬುಂಟು ಎಂಬುದು ದಕ್ಷಿಣ ಆಫ್ರಿಕದ ಬುಡಕಟ್ಟು ಭಾಷೆ. ಇದರರ್ಥ ‘ನಾವಿರುವುದರಿಂದಲೇ ನಾನಿರುವುದು’. ಹಾಗಾಗಿ ಯಾರನ್ನು ಹಿಂದಿಕ್ಕದೆ ಜತೆಯಾಗಿ ಸಾಗಬೇಕು ಎನ್ನುವುದನ್ನು ಸೂಚಿಸುತ್ತದೆ. ಈ ಆಶಯದೊಂದಿಗೆ ನಮ್ಮ ಸಮಸೃಷ್ಟಿ ವೇದಿಕೆಮೈಲಾಪುರದ ಕೆರೆ ಕೆಲಸ ಮಾಡುತ್ತಿರುವ ಯುವಜನರ ಜತೆ ಆಚರಣೆ ಮಾಡುತ್ತಿರುವುದು ಹೆಮ್ಮೆಯಾಗುತ್ತಿದೆ’ ಎಂದರು.

ನರೇಗಾದಲ್ಲಿ ಕೆಲಸ ಮಾಡುತ್ತಿರುವ ಯುವಜನರ ಗುಂಪಿನ ಪರಿವಾಗಿ ಮಾತನಾಡಿದ ಚಿ.ಮು ಹರೀಶ್, ‘ಕೆರೆಯಲ್ಲಿ ದುಡಿಯುತ್ತಿರುವ ನಮ್ಮ ಬಳಿಗೆ ವಿದ್ಯಾರ್ಥಿಗಳು ಬಂದು ಬೆಂಬಲಿಸಿ ಊರು ಕಟ್ಟುವ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಉಬುಂಟು ಆಶಯದಂತೆ ನಾವು ಯಾರನ್ನು ಹಿಂದಿಕ್ಕದೆ ಜತೆಯಾಗಿ ಎಲ್ಲರನ್ನು ಒಟ್ಟುಗೂಡಿಸಿಕೊಂಡು, ಊರು ಮತ್ತು ಊರಿನ ಜನರ ಬದುಕು ಕಟ್ಟುವ ಕಡೆಗೆ ಹೆಜ್ಜೆ ಹಾಕುತ್ತೇವೆ. ಹಳ್ಳಿಯಲ್ಲಿರುವ ಪ್ರತಿ ಯುವಜನರು ಜಾತಿ, ಪಕ್ಷ, ಧರ್ಮಗಳ ಗೆರೆ ದಾಟಿ ಅಭಿವೃದ್ಧಿ ಕಾರ್ಯಗಳಲ್ಲಿ ಜತೆಯಾಗಿ’ ಎಂದು ಮನವಿ ಮಾಡಿದರು.

‘ಇಂದಿನ ಯುವಜನರಿಗೆ ಸಿನಿಮಾ ನಟ, ನಟಿ, ರಾಜಕಾರಣದ ವ್ಯಕ್ತಿಗಳೇ ಮಾದರಿಯಾಗಿರುವುದು ದುರಂತ. ಅದರಲ್ಲೂ ಓದಿಕೊಂಡ ಯುವಜನರೆ ಇಂತಹ ಆಕರ್ಷಣೆಗೆ ಒಳಗಾಗುತ್ತಿರುವುದು ವಿಷಾದನೀಯ. ಇಂತಹ ಯಾವುದೇ ಆಕರ್ಷಣೆ, ಆಮಿಷಗಳಿಗೆ ಒಳಗಾಗದೆ ನಮ್ಮ ಊರಿನ ಯುವಕ ಯುವತಿಯರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳಿಯ ಸರ್ಕಾರಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ಮೂಲಕ ಬರುವ ಅನುದಾನಗಳನ್ನು ಬಳಸಿ ಊರಿನ ಅಭಿವೃದ್ಧಿ ಸಾಧಿಸಲು ಹೊರಟಿದ್ದೇವೆ’ ಎಂದರು.

ಉಬುಂಟು ಉಬುಂಟು ಎಂದು ಮೈಲಾಪುರದ ಯುವಜನರು ಜೈಕಾರ ಹಾಕಿ ಸಮಾಜಕಾರ್ಯ ದಿನಾಚರಣೆಯ ಸಂಭ್ರಮವನ್ನು ಅನುಭವಿಸಿದರು

ಸಮಸೃಷ್ಟಿ ವೇದಿಕೆಯ ರಂಜಿತ, ರಾಜೇಶ್, ಅರುಣ್, ನವೀನ್ ಹಳ್ಳಿಯ ಯುವಜನರಾದ ದೇವಪ್ಪ, ಸರಸ್ವತಿ, ರೋಜ, ಶಂಕರ, ನಾರಾಯಣಸ್ವಾಮಿ, ನರೇಶ, ಮುನಿರಾಜು, ಅಮರೇಶ್, ನವೀನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT