ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಟಿಕೆಟ್‌ಗೆ ತೀವ್ರ ಪೈಪೋಟಿ

Last Updated 9 ಡಿಸೆಂಬರ್ 2017, 9:07 IST
ಅಕ್ಷರ ಗಾತ್ರ

ಗೌರಿಬಿದನೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿ ಐದು ಮುಖಂಡರು ಟಿಕೆಟ್‌ಗೆ ಪೈಪೋಟಿ ನಡೆಸಿರುವುದು ಆ ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೆ ನೂಕಿದೆ.

ಜೆಡಿಎಸ್‌ ಮುಖಂಡರಾದ ಆರ್.ಅಶೋಕ್ ಕುಮಾರ್, ಮಂಜುನಾಥ್‌ ರೆಡ್ಡಿ, ವೇಣುಗೋಪಾಲ್ ನಾಯಕ, ಪುರಸಭೆ ಸದಸ್ಯ ಕೆ.ಎಸ್. ಅನಂತರಾಜ್ ಹಾಗೂ ಅಲಿಪುರ ಜಾಮೀನ್ ರಾಜಾ ಅವರು ‘ತೆನೆ ಹೊತ್ತ ಮಹಿಳೆ’ಯ ‘ಹುರಿಯಾಳು’ ಆಗಲು ತುರುಸಿನ ಸ್ಪರ್ಧೆ ನಡೆಸಿರುವುದು ಜೆಡಿಎಸ್‌ ವಲಯದಲ್ಲಿ ಸಂಚಲನ ಮೂಡಿಸಿ, ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪೈಪೋಟಿಯಲ್ಲಿ ಇರುವವರ ಪೈಕಿ ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಆರ್.ಅಶೋಕ್ ಕುಮಾರ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಕಳೆದ 35 ವರ್ಷಗಳಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಅಶೋಕ್ ಕುಮಾರ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು, ವಿವಿಧ ಹುದ್ದೆಗಳನ್ನು ಅಲಂಕರಿಸಿ, ಬಳಿಕ ಬಿಜೆಪಿ ಸೇರಿ ರಾಜ್ಯ ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ಸಹ ಕೆಲಸ ಮಾಡಿದವರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಕುಮಾರ್ 25ಸಾವಿರ ಮತಗಳನ್ನು ಪಡೆದಿದ್ದರು. ಇವರು ನಾಯಕ ಜನಾಂಗಕ್ಕೆ ಸೇರಿದ್ದು, ತಾಲ್ಲೂಕಿನಲ್ಲಿ ಆ ಸಮುದಾಯದ 42 ಸಾವಿರ ಮತಗಳಿವೆ. ‘ನನ್ನ ಸಮುದಾಯದವರ ಜತೆಗೆ ಇತರೆ ಸಮುದಾಯದವರು ಶೇ 5 ರಷ್ಟು ಮತ ಹಾಕಿದರೂ ನನ್ನ ಗೆಲುವು ಖಚಿತ’ ಎನ್ನುವ ರಾಜಕೀಯ ಲೆಕ್ಕಾಚಾರವನ್ನು ಅವರು ತೆರೆದಿಡುತ್ತಾರೆ.

‘ಕಳೆದ ಮತ್ತು ಈ ಬಾರಿಯ ಚುನಾವಣೆಯ ಸಂದರ್ಭಗಳನ್ನು ಹೋಲಿಕೆ ಮಾಡಿದರೆ ನಾಯಕ ಜನಾಂಗದವರು ರಾಜಕೀಯವಾಗಿ ಸಾಕಷ್ಟು ಜಾಗೃತರಾಗಿದ್ದಾರೆ. ಆದ್ದರಿಂದ ಈ ಬಾರಿ ಕೂಡ ಚುನಾವಣೆಗೆ ಸ್ಪರ್ಧಿಸುವೆ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿರುವೆ. ಜೆಡಿಎಸ್‌ ಟಿಕೆಟ್‌ ನನಗೆ ಖಚಿತ’ ಎನ್ನುತ್ತಾರೆ ಅಶೋಕ್ ಕುಮಾರ್.

ಸೊರಬ ಶಾಸಕ ಮಧು ಬಂಗಾರಪ್ಪ ಅವರ ಒಡನಾಡಿಯಾಗಿರುವ ವೇಣುಗೋಪಾಲ್‌ ನಾಯಕ ಸಹ ನಾಯಕ ಜನಾಂಗಕ್ಕೆ ಸೇರಿದವರು. ಮೂಲತಃ ಬೆಂಗಳೂರಿನವರಾದ ಇವರು ತಾಲ್ಲೂಕಿನಲ್ಲಿ ತಮ್ಮ ಜನಾಂಗದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇಲ್ಲಿಂದ ಸ್ಪರ್ಧಿಸುವ ಉತ್ಸುಕತೆ ತೋರಿದ್ದಾರೆ.

ಈಗಾಲೇ ಗೌರಿಬಿದನೂರಿಗೆ ಬಂದು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ, ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುತ್ತಿರುವ ವೇಣುಗೋಪಾಲ್‌ ಅವರು ಸ್ಥಳೀಯರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದು ಕಾಯ್ದು ನೋಡಬೇಕು.

‘ಚುನಾವಣೆಗೆ ಸ್ಪರ್ಧಿಸಬೇಕಾದರೆ ಸ್ಥಳೀಯರು, ಹೊರಗಿನವರು ಎನ್ನುವುದು ಮುಖ್ಯವಾಗುವುದಿಲ್ಲ. ಗೆಲ್ಲುವ ಸಾಮರ್ಥ್ಯ ಮುಖ್ಯ. ಅದು ನನಗೆ ಇದೆ. ಆದ್ದರಿಂದಲೇ ಪಕ್ಷದ ಹೈಕಮಾಂಡ್‌ ನನಗೆ ಟಿಕೆಟ್‌ ಭರವಸೆ ನೀಡಿದೆ’ ಎಂದು ಹೇಳುವ ಮೂಲಕ ವೇಣುಗೋಪಾಲ್‌ ಕಾರ್ಯಕರ್ತರಲ್ಲಿ ಮತ್ತಷ್ಟು ಕದನ ಕುತೂಹಲ ಕೆರಳಿಸಿದ್ದಾರೆ.

ಕ್ಷೇತ್ರಕ್ಕೆ ಪರಸ್ಥಳದವರಾದರೂ ‘ಸಮಾಜ ಸೇವೆ’ಯಿಂದಲೇ ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ಮಂಜುನಾಥ್‌ ರೆಡ್ಡಿ ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕಿನಲ್ಲಿ ಉಚಿತ ಕುಡಿಯುವ ನೀರು ಸರಬರಾಜು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ದೇಗುಲಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ, ಹಬ್ಬ ಹರಿದಿನಗಳಲ್ಲಿ ಸಿಹಿ ಹಂಚಿ ಜನರ ಮನ ಗೆಲ್ಲುವ ಕೆಲಸ ಮಾಡುತ್ತಿದ್ದಾರೆ.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಮೂಲಕ ಸ್ಥಳೀಯ ರಾಜಕಾರಣದ ಬೇರು ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಜೆಡಿಎಸ್‌ ಸೇರ್ಪಡೆಗೊಂಡ ಮಂಜುನಾಥ್‌ ರೆಡ್ಡಿ ಅವರು ಸದ್ಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದಾರೆ.

‘ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕರ ಆಡಳಿತ ವೈಖರಿಗೆ ಜನ ಬೇಸತ್ತು, ಬಹುತೇಕರು ಜೆಡಿಎಸ್ ಬೆಂಬಲಿಸುತ್ತಿದ್ದಾರೆ. ಈ ಬಾರಿ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಪಕ್ಷ ಸಂಘಟನೆಗೆ ಒತ್ತು ನೀಡುವವರಿಗೆ ಟಿಕೆಟ್‌ ನೀಡುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ. ಹೀಗಾಗಿ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುವ ನಾಯಕನಿಗೆ ಟಿಕೆಟ್‌ ನೀಡುತ್ತಾರೆ’ ಎನ್ನುವ ಮೂಲಕ ಪರೋಕ್ಷವಾಗಿ ನಾನೇ ಅಭ್ಯರ್ಥಿಯಾಗುವುದು ಖಚಿತ ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ.

ಜೆಡಿಎಸ್‌ ನಿಷ್ಠಾವಂತ ಮುಖಂಡರಾಗಿರುವ ಪುರಸಭೆ ಸದಸ್ಯ ಕೆ.ಎಸ್. ಅನಂತರಾಜ್ ಈ ಹಿಂದೆ ಜೆಡಿಎಸ್‌ನಿಂದ ಎನ್‌.ಜ್ಯೋತಿರೆಡ್ಡಿ ಅವರು ಶಾಸಕಿಯಾಗಿದ್ದ ವೇಳೆ ಅವರೊಂದಿಗೆ ಗುರುತಿಸಿಕೊಂಡವರು. ಜ್ಯೋತಿರೆಡ್ಡಿ ಅವರು ಜೆಡಿಎಸ್ ತೊರೆದಾಗ ಅವರೊಂದಿಗೆ ಬಹುತೇಕ ಮುಖಂಡರು ಜೆಡಿಎಸ್ ತೊರೆದರು. ಆದರೆ ಪಕ್ಷ ನಿಷ್ಠೆ ಬದಲಾಯಿಸದ ಅನಂತರಾಜ್ ಅವರು ತಾಲ್ಲೂಕಿನಲ್ಲಿ ಪಕ್ಷವನ್ನು ಏಕಾಂಗಿಯಾಗಿ ಮುನ್ನಡೆಸಿದ್ದರು.

ಜೆಡಿಸ್ ಅಭ್ಯರ್ಥಿಯಾಗಿ ಪುರಸಭೆಗೆ ಎರಡನೇ ಅವಧಿಗೆ ಆಯ್ಕೆಯಾಗಿರುವ ಅನಂತರಾಜ್ ಕೂಡ ಈ ಬಾರಿ ಜೆಡಿಎಸ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಇವರೆಲ್ಲ ಜತೆಗೆ ಅಲಿಪುರ ಜಾಮೀನ್ ರಾಜಾ ಅವರು ಸಹ ‘ತಾನು ಸಹ ಪ್ರಬಲ ಟಿಕೆಟ್ ಆಕಾಂಕ್ಷಿ’ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಪೈಕಿ ಅಂತಿಮವಾಗಿ ಯಾರು ಟಿಕೆಟ್‌ ಗಿಟ್ಟಿಸಿಕೊಳ್ಳುತ್ತಾರೆ ಎನ್ನುವ ವಿಚಾರದಲ್ಲಿ ಸದ್ಯ ಜೆಡಿಎಸ್‌ ಕಾರ್ಯಕರ್ತರಲ್ಲೇ ಸ್ಪಷ್ಟ ಚಿತ್ರಣವಿಲ್ಲದಂತಹ ಸನ್ನಿವೇಶ ನಿರ್ಮಾಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT