ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚೆ, ಸೀರೆಯುಟ್ಟ ಯುವ ‘ಚಿಟ್ಟೆ’ಗಳು; ಸಂಪ್ರದಾಯಸ್ಥರ ಮನೆಯಾದ ಕಾಲೇಜು ಕ್ಯಾಂಪಸ್‌!

ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆ ದಿನದ ರಂಗು, ಗುಂಗು...
Last Updated 4 ಮೇ 2019, 10:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಿತ್ಯ ಜೀನ್ಸ್‌, ಟಿಶರ್ಟ್‌ ಸೇರಿದಂತೆ ಬಗೆ ಬಗೆಯ ಫ್ಯಾಷನ್‌ ಉಡುಗೆಗಳನ್ನು ತೊಟ್ಟವರಿಂದ ತುಂಬಿರುತ್ತಿದ್ದ ಆ ಆವರಣದಲ್ಲಿ ಶನಿವಾರ ಏಕಾಏಕಿ ಪಂಚೆ, ಸೀರೆ ತೊಟ್ಟು ಬಂದ ಸಂಪ್ರದಾಯಸ್ಥರಂತೆ ಗೋಚರಿಸುತ್ತಿದ್ದವರ ಹಿಂಡು ನೆರೆದಿತ್ತು. ಸದಾ ಶಿಸ್ತಿನ ಗೂಡಿನಂತಿರುತ್ತಿದ್ದ ಆ ಅಂಗಳದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ಪಾಠದ ಸದ್ದು ಕೇಳುತ್ತಿದ್ದ ಕಾರಿಡಾರ್‌ನಲ್ಲಿ ಮೋಜಿನ ಕೇಕೆ ಮುಗಿಲು ಮುಟ್ಟಿತ್ತು.

ನಗರ ಹೊರವಲಯದ ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯ (ಎಸ್‌ಜೆಸಿಐಟಿ) ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಗೆ ದಿನ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಎನಿಸಿಕೊಂಡ ಧೋತರ, ಪಂಚೆ, ಜುಬ್ಬಾ, ಲಂಗ ದಾವಣಿ, ಸೀರೆ ತೊಟ್ಟು ಬಂದಿದ್ದ ಆಂಧ್ರಪ್ರದೇಶ, ತಮಿಳುನಾಡು, ಅಹಮದಾಬಾದ್, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಸೀರೆ ಉಟ್ಟು ಬಂದಿದ್ದ ವಿದ್ಯಾರ್ಥಿನಿಯರ ಚಿತ್ರವನ್ನು ಪುಟಾಣಿಯೊಬ್ಬಳು ಮೊಬೈಲ್‌ನಲ್ಲಿ ಸೆರೆ ಹಿಡಿದ ಕ್ಷಣ
ಸೀರೆ ಉಟ್ಟು ಬಂದಿದ್ದ ವಿದ್ಯಾರ್ಥಿನಿಯರ ಚಿತ್ರವನ್ನು ಪುಟಾಣಿಯೊಬ್ಬಳು ಮೊಬೈಲ್‌ನಲ್ಲಿ ಸೆರೆ ಹಿಡಿದ ಕ್ಷಣ

ಕ್ಯಾಂಪಸ್‌ ಆವರಣದಲ್ಲಿ ಸೇರಿದ ವಿದ್ಯಾರ್ಥಿ ಸಮೂಹ ತಮಟೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ, ನೃತ್ಯ ಮಾಡಿ ಸಂಭ್ರಮಿಸಿ ಕೇಕೆ ಹಾಕಿ ಸಂಭ್ರಮಿಸಿದರು. ವಿದ್ಯಾರ್ಥಿನಿಯರಂತೂ ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಸೀರೆಗಳನ್ನು ಉಟ್ಟು ಬಂದು ಕ್ಯಾಂಪಸ್‌ಗೆ ವೈವಿಧ್ಯಮಯ ರಂಗು ತುಂಬಿದ್ದರು. ರೇಷ್ಮೆ ಸೀರೆ ಉಟ್ಟು, ಬಗೆ ಬಗೆಯ ಆಭರಣ ತೊಟ್ಟು ಬಂದವರಿಗೆ ಮೊಬೈಲ್‌ನಲ್ಲಿ ಗೆಳತಿಯರೊಂದಿಗೆ ಎಷ್ಟು ‘ಸೆಲ್ಫಿ’ ತೆಗೆದುಕೊಂಡರೂ ತೀರದ ಆಸೆ.

ವಿಭಿನ್ನ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು
ವಿಭಿನ್ನ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ಕ್ಯಾಂಪಸ್‌ ತುಂಬಾ ಎಲ್ಲಿ ನೋಡಿದರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದವರೇ ಗೋಚರಿಸುತ್ತಿದ್ದರು. ಸೀರೆ ಉಟ್ಟವರು ಗುಂಪುಗಟ್ಟಿ ಸೆಲ್ಫಿಗೆ ಮುಖವೊಡ್ಡಿದರೆ, ಪಂಚೆ ತೊಟ್ಟವರು ಕೂಡ ತಾವೇನೂ ಕಡಿಮೆ ಎನ್ನುವಂತೆ ಮೊಬೈಲ್ ಸ್ವಂತಿಗೆ ಮುಗುಳುನಗೆ ಬೀರುತ್ತಿದ್ದರು.

ವಿದ್ಯಾರ್ಥಿಗಳು ಬಹುಭಾಷೆ ಹಾಡುಗಳಿಗೆ ನೃತ್ಯ ಮಾಡಿ ಸಂತಸ ಹಂಚಿಕೊಂಡರು. ಕಾರ್ಯಕ್ರಮದ ಪ್ರಯುಕ್ತ ವೇಷಭೂಷಣ, ಫ್ಯಾಷನ್ ಷೋ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಕೆ.ಎಂ.ರವಿಕುಮಾರ್‌, ಕುಲಸಚಿವ ಸುರೇಶ್, ಎಲ್ಲ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಸಾಥ್‌ ನೀಡಿ ಕಾರ್ಯಕ್ರಮಕ್ಕೆ ರಂಗು ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT