ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾಭಕ್ತಿಯ ನಡುವೆ ಈಸ್ಟರ್‌ ಆಚರಣೆ

ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆ, ಬಲಿಪೂಜೆ ಆಚರಣೆ, ಪರಸ್ಪರ ಹಬ್ಬದ ಶುಭಾಶಯಗಳ ವಿನಿಮಯ
Last Updated 21 ಏಪ್ರಿಲ್ 2019, 10:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಭಾನುವಾರ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಹಬ್ಬದ ಪೂರ್ವಭಾವಿಯಾಗಿ ಶನಿವಾರ ರಾತ್ರಿ ಚರ್ಚುಗಳಲ್ಲಿ ಈಸ್ಟರ್ ಜಾಗರಣೆ, ವಿಶೇಷ ಪ್ರಾರ್ಥನೆ ಮತ್ತು ಸಂಭ್ರಮ ಮನೆ ಮಾಡಿತ್ತು. ನಗರದ ಸಿಎಸ್‍ಐ ಕ್ರೈಸ್ಟ್ ಚರ್ಚ್ ಹಾಗೂ ಸೆಂಟ್ ಕ್ಸೇವಿಯರ್ ಚರ್ಚ್‌ಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ಜಮಾಯಿಸಿದ ಭಕ್ತರು ಯೇಸು ಪ್ರಭುವಿಗೆ ವಿಶೇಷ ಪಾರ್ಥನೆ ಬಲಿಪೂಜೆ ಮಾಡುವ ಮೂಲಕ ಆರಾಧಿಸಿದರು. ಬಳಿಕ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ ಮುಖ್ಯಸ್ಥ ಫಾದರ್‌ ರಾಯೀಸ್‌ ಮಾತನಾಡಿ, ‘ಏಸು ಕ್ರಿಸ್ತರು ಶಿಲುಬೆಗೇರಿದ ಮೂರನೇ ದಿನಕ್ಕೆ ಪುನರುತ್ಥಾನಗೊಂಡ ದಿನವನ್ನು ಈಸ್ಟರ್‌ ಹಬ್ಬವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಪಾಪಿಗಳ ಪಾಪವನ್ನು ಕ್ಷಮಿಸಿ, ಪ್ರೀತಿ, ಔದಾರ್ಯ ಮತ್ತು ದಯೆ ಕರುಣಿಸಬೇಕು ಎಂಬುದು ಈ ಹಬ್ಬದ ಪ್ರಮುಖ ಸಂದೇಶ’ ಎಂದು ತಿಳಿಸಿದರು.

‘ಒಬ್ಬ ವ್ಯಕ್ತಿ ನಮ್ಮ ಪಾಪಗಳಿಗಾಗಿ ಯಾತನೆಯನ್ನು ಅನುಭವಿಸಿ, ಸಾವನ್ನಪ್ಪಿ ಮೂರನೆ ದಿನ ಪುನರುತ್ತಾನಗೊಳ್ಳುತ್ತಾನೆ ಎಂಬುದನ್ನು ಪ್ರವಾದಿಗಳು ಭವಿಷ್ಯ ನುಡಿದ್ದರು. ಅದು ನಿಜವಾದ ದಿನವೇ ಈಸ್ಟರ್‌ ಎನ್ನುವುದು ಕ್ರೈಸ್ತರ ನಂಬಿಕೆ. ಯೇಸು ಕ್ರಿಸ್ತರ ಪುನರುತ್ಥಾನವನ್ನು ಸ್ಮರಿಸುವುದೆಂದರೆ ಪಾಪದ ವಿರುದ್ಧ ಜಯ ಸಾಧಿಸಿದ ಬಗ್ಗೆ ಭರವಸೆಯನ್ನು ನವೀಕರಿಸುವುದು ಎಂದರ್ಥ’ ಎಂದರು.

‘ದ್ವೇಷಕ್ಕಿಂತ ಪ್ರೀತಿ ಹೆಚ್ಚು ಶಕ್ತಿಯುತವಾಗಿರುತ್ತದೆ. ಮಾನವ ಜನಾಂಗದ ಮೇಲೆ ದಯೆ ತೋರುವ ಈಸ್ಟರ್ ಹಬ್ಬವನ್ನು ಜಾತಿ, ಧರ್ಮ ಭೇದವಿಲ್ಲದೆ ಆಚರಿಸೋಣ. ಈ ಪುನರುತ್ಥಾನ ಹಬ್ಬ ನಮ್ಮೆಲ್ಲರನ್ನು ಕತ್ತಲೆಯಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ ಹೋಗಲಿ’ ಎಂದು ಹೇಳಿದರು.

‘40 ದಿನಗಳ ವ್ರತದ ಬಳಿಕ ಪವಿತ್ರ ವಾರದ ಕೊನೆಯಲ್ಲಿ ಯೇಸುಕ್ರಿಸ್ತರ ಪಾಡು ಹಾಗೂ ಮರಣಗಳ ಸ್ಮರಣೆ ನಂತರ ಆಚರಿಸಲಾಗುವ ಮಹೋತ್ಸವವೇ ಈಸ್ಟರ್. ಯೇಸುಸ್ವಾಮಿಯ ಪುನರುತ್ಥಾನವು ಈ ವಿಶ್ವದ ಚರಿತ್ರೆಯಲ್ಲೇ ನಡೆದ ಅತ್ಯದ್ಭುತ ಘಟನೆ. ಯೇಸುಕ್ರಿಸ್ತರು ಸತ್ತವರೊಳಗಿಂದ ಪುನರುತ್ಥಾನರಾಗಿ ಎದ್ದು ಬಂದು ಲೋಕ ರಕ್ಷಕರೂ, ನಮ್ಮೆಲ್ಲರ ಭರವಸೆಯೂ ಆದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT