ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೃಂಗೇರಿ: ಬದಲಿ ಜಾಗಕ್ಕಾಗಿ 23 ವರ್ಷಗಳ ಅಲೆದಾಟ

ಖಾಸಗಿ ಜಾಗ ಸೇರಿಸಿ ವಿದ್ಯಾರ್ಥಿ ನಿಲಯ ನಿರ್ಮಿಸಿದ್ದ ಬಿಸಿಎಂ ಇಲಾಖೆ
Published 4 ಆಗಸ್ಟ್ 2024, 4:43 IST
Last Updated 4 ಆಗಸ್ಟ್ 2024, 4:43 IST
ಅಕ್ಷರ ಗಾತ್ರ

ಶೃಂಗೇರಿ: ಖಾಸಗಿ ವ್ಯಕ್ತಿಯೊಬ್ಬರ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ವಿದ್ಯಾರ್ಥಿ ನಿಲಯವು ನಂತರ ಈಗ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟಿದೆ. ಆದರೆ, ಜಾಗ ಕಳೆದುಕೊಂಡ ವ್ಯಕ್ತಿ ಬದಲಿ ಜಾಗಕ್ಕಾಗಿ 23 ವರ್ಷಗಳಿಂದ ಕಚೇರಿ ಎಡತಾಕಿ ಸುಸ್ತಾಗಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕಿಗ್ಗಾ ಗ್ರಾಮದಲ್ಲಿ ‌2001ರಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗಿದ್ದು, ಪಕ್ಕದ ಖಾಸಗಿ ಜಮೀನಿನ 2.5 ಗುಂಟೆ ಜಾಗವನ್ನೂ ಸೇರಿಸಿ ಕಟ್ಟಡ ಕಟ್ಟಲಾಗಿದೆ. ಈ ಬಗ್ಗೆ ಜಾಗದ ಮಾಲೀಕ ಕೆ.ಎಂ.ಶ್ರೀಕಂಠಭಟ್ ಅವರು ಪ್ರಶ್ನೆ ಮಾಡಿದ್ದು, ಬದಲಿ ನಿವೇಶನ ಕೊಡುವ ಭರವಸೆಯನ್ನು ಅಂದಿನ ಅಧಿಕಾರಿಗಳು ನೀಡಿದ್ದರು. 

2004–2005ನೇ ಸಾಲಿನಲ್ಲಿ ಮಾರ್ಕಲ್ ಗ್ರಾಮ ಪಂಚಾಯಿತಿ ಸಭೆ ನಡಾವಳಿಯಲ್ಲೂ ಬದಲಿ ಜಾಗ ನೀಡುವ ಭರವಸೆ ನೀಡಲಾಗಿದೆ. ಆದರೆ, ಬದಲಿ ನಿವೇಶನ ದೊರಕಲಿಲ್ಲ. 2010–11ರಲ್ಲಿ ಮತ್ತೊಮ್ಮೆ ಗ್ರಾಮ ಪಂಚಾಯಿತಿ ಸಭೆಯಲ್ಲೂ ಚರ್ಚೆಯಾಗಿ ಬದಲಿ ಜಾಗ ನೀಡುವ ಹಿಂಬರಹ ನೀಡಲಾಯಿತು. ಆದರೆ, ಈವರೆಗೆ ನಿವೇಶನ ದೊಕಿಲಿಲ್ಲ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಮೂರು ವರ್ಷದ ಹಿಂದೆ ಈ ನಿಲಯಕ್ಕೆ ಬೀಗ ಬಿದ್ದಿದೆ. ಈ ಮಧ್ಯ ಈಗ ಮೆಟ್ರಿಕ್ ಪೂರ್ವ ಬಾಲಿಕ ವಿದ್ಯಾರ್ಥಿ ನಿಲಯವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಒತ್ತುವರಿಯಾದ ಜಾಗ ಮಾತ್ರ ಇನ್ನೂ ಮೂಲ ಮಾಲೀಕರಿಗೆ ಹಸ್ತಾಂತರ ಆಗಿಲ್ಲ.

ಒಟ್ಟಾರೆ ಕಿಗ್ಗಾದಲ್ಲಿ ಅತ್ತ ಬಿಸಿಎಂ ವಿದ್ಯಾರ್ಥಿ ನಿಲಯವೂ ಉಳಿಯದೇ ಇತ್ತ ಮೂಲ ಮಾಲೀಕರಿಗೆ ಬದಲೀ ಜಾಗವೂ ಸಿಗದೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

ಕಟ್ಟಡದ ಜಾಗ ಗ್ರಾಮ ಪಂಚಾಯಿತಿಗೆ ವಹಿಸಿದ್ದರೂ ಬದಲಿ ನಿವೇಶನ ನೀಡಲು ಇನ್ನೂ ಮುಂದಾಗಿಲ್ಲ ಎಂದು ಶ್ರೀಕಂಠ ಬಟ್‌ ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಿಲಯ ಮುಚ್ಚಿದ್ದು ಅದನ್ನು 2022ರಲ್ಲಿಯೇ ಬೇಗಾರ್‌ಗೆ ಸ್ಥಳಾಂತರ ಮಾಡಲಾಗಿದೆ. ಕಿಗ್ಗಾದಲ್ಲಿರುವ ಕಟ್ಟಡವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ.
ವಿಜಯಕುಮಾರ್, ತಾಲ್ಲೂಕು ಬಿಸಿಎಂ ಅಧಿಕಾರಿ 
ಇದು ತುಂಬಾ ಹಳೆಯ ವಿಷಯ. ಜನಸಂಪರ್ಕ ಸಭೆಯಲ್ಲಿ ಈ ವಿಷಯ ಗೋತ್ತಾಗಿದೆ. ಹಿಂದಿನ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿರಲಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸುತ್ತೇನೆ.
ಸುದೀಪ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT