ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಜಿಲ್ಲೆಯಲ್ಲಿ 75 ವಾರಗಳು ವಿವಿಧ ಕಾರ್ಯಕ್ರಮ

2022ರ ಆಗಸ್ಟ್‌ 15ಕ್ಕೆ ಸ್ವಾತಂತ್ರ್ಯ ದೊರೆತು 75ವರ್ಷಗಳು
Last Updated 25 ಮಾರ್ಚ್ 2021, 2:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: 2022ರ ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಲಿವೆ. ಅದರ ಅಂಗವಾಗಿ ಜಿಲ್ಲೆಯಲ್ಲಿ 75 ವಾರಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1927ರಲ್ಲಿ ಮಹಾತ್ಮ ಗಾಂಧೀಜಿ ಅವರು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಸ್ಥಳ, ತರೀಕೆರೆಯ ಪಾಳೇಗಾರ ರಾಜ ಸರ್ಜಪ್ಪ ಬ್ರಿಟಿಷರ ವಿರುದ್ಧ ದಂಗೆಯದ್ದು, 1830ರಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ಸ್ಥಳ, ಕಡೂರು ತಾಲ್ಲೂಕಿನ ನಿಡಗಟ್ಟದ ಮಹಾತ್ಮ ಗಾಂಧಿ ದೇಗುಲ, ಮೂಡಿಗೆರೆ ತಾಲ್ಲೂಕು ಭಾರತೀ ಬೈಲಿನ ಕಸ್ತೂರಿಬಾ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಶಿಕ್ಷಣ ಇಲಾಖೆ ವತಿಯಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾತಂತ್ರ ಸಂಗ್ರಾಮದ ಕುರಿತು ಪ್ರಬಂಧ, ಚರ್ಚಾ ಸ್ಪರ್ಧೆ, ಆಶುಭಾಷಣ ಸಹಿತ ವಿವಿಧ ಸ್ಪರ್ಧೆ ನಡೆಸಬೇಕು. ಆರೋಗ್ಯ ಇಲಾಖೆ ವತಿಯಿಂದ ಯೋಗ, ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ, ಕೋವಿಡ್‌–19 ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಾಲ್ಲೂಕುಮಟ್ಟದಲ್ಲಿ ಕ್ರೀಡಾಕೂಟ ಏರ್ಪಡಿಸಬೇಕು ಎಂದರು.

ಏಪ್ರಿಲ್‌ 13ರಂದು ಜಲಿಯನ್‌ವಾಲಾಬಾಗ್ ದುರಂತ, ಮೇ 10ರಂದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಆಗಸ್ಟ್ 9ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ, ಅಕ್ಟೋಬರ್ 21ರಂದು ಹುತಾತ್ಮರು, ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಎಲ್ಲ ಕಾರ್ಯಕ್ರಮಗಳ ಭಾವಚಿತ್ರ, ವಿಡಿಯೊ ಸಂಗ್ರಹಿಸಿಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT