ಚಿಕ್ಕಮಗಳೂರು: ‘ಮದ್ಯವ್ಯಸನವು ಆರ್ಥಿಕ ಹಾಗೂ ಕೌಟುಂಬಿಕವಾಗಿ ದುಷ್ಪಾರಿಣಾಮ ಬೀರಲಿದೆ. ದುರಭ್ಯಾಸಗಳಿಂದ ದೂರವಿದ್ದಾಗ ಆರೋಗ್ಯಕರ ಜೀವನ ನಮ್ಮದಾಗಲಿದೆ’ ಎಂದು ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಸೋಮಯಾಜಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ನಿಂದ ತಾಲ್ಲೂಕಿನ ಲಕ್ಯಾ ಗ್ರಾಮದ ಲಿಂಗಾಯತ ವೀರಶೈವ ಸಮುದಾಯ ಭವನದಲ್ಲಿ ಮಂಜುನಾಥೇಶ್ವರ ವ್ಯಸನ ಮುಕ್ತಿ ಸಂಶೋಧನಾ ಕೇಂದ್ರ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಲಕ್ಯಾ ಗ್ರಾಮ ಪಂಚಾಯಿತಿ ಸೇರಿ ವಿವಿಧ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 1,694ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.
ಕುಡಿತದ ಚಟಕ್ಕೆ ಒಳಗಾದವರನ್ನು ಸಮಾಜ ಹೀಯಾಳಿಸುವುದರ ಜತೆಗೆ ಕೆಳಮಟ್ಟದಲ್ಲಿ ಕಾಣುತ್ತದೆ. ವ್ಯಸನದಿಂದ ಮುಕ್ತರಾಗಲು ಈ ಶಿಬಿರ ಸಹಕಾರಿಯಾಗಲಿದೆ. ಶಿಬಿರಾರ್ಥಿಗಳು ಯಾವುದೇ ಭಯ, ಆತಂಕಕ್ಕೆ ಒಳಗಾಗದೆ. ಇಲ್ಲಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಮಾನಸಿಕ ಆರೋಗ್ಯ ಸಮಸ್ಥಿತಿಗೆ ಬಂದು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಪ್ರಕಾಶ್‍ರಾವ್ ಮಾತನಾಡಿ, ನಿತ್ಯ ಯೋಗ, ಧ್ಯಾನದ ಮೂಲಕ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಬೀಡಿ, ಸಿಗರೇಟು, ಮದ್ಯಪಾನ ಮೊದಲಾದ ದುಶ್ಚಟಗಳಿಂದ ದೂರವಿರಬೇಕು. ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಕ್ಯಾ ವಲಯ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಲ್.ಎಸ್.ರಮೇಶ್ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಸಂಶೋಧನಾ ಕೇಂದ್ರದ ಮೇಲ್ವಿಚಾರಕ ನಾಗರಾಜ್ ಕುನಾಳ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಶಿಬಿರದಲ್ಲಿ ಲಕ್ಯಾ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ 70ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಲಕ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಜಗದೀಶ್, ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಮರುಳೇಶಪ್ಪ, ಡಿ.ಎಂ.ತಾರಾನಾಥ, ಶಿಬಿರಾಧಿಕಾರಿ ವಿದ್ಯಾಧರ, ನಮ್ರತಾ, ಡಾ.ರಕ್ಷಿತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.