ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತವಾದ ನೀರು, ಹಿತವಾದ ಫಸಲು

ಬರಡು ಭೂಮಿಯಲ್ಲಿ ಸಮರ್ಪಕ ನೀರು ನಿರ್ವಹಣೆ: ಉಮೇಶ್ ಕೈಹಿಡಿದ ಮಿಶ್ರ ಕೃಷಿ
Last Updated 13 ಏಪ್ರಿಲ್ 2022, 3:55 IST
ಅಕ್ಷರ ಗಾತ್ರ

ಕಡೂರು: ಕೃಷಿಗೆ ಬೇಕಾದ ನೀರನ್ನು ಸಂಗ್ರಹಿಸಿ, ಮಿತವಾಗಿ ಬಳಸಿಕೊಂಡರೆ ತೋಟಗಾರಿಕೆಯಲ್ಲಿ ಯಶಸ್ಸು ಪಡೆಯಬಹುದು ಎಂಬುದಕ್ಕೆ ಕೇತುಮಾರನಹಳ್ಳಿಯ ರೈತ ಉಮೇಶ್‌ ಅವರ ಜಮೀನು ಉತ್ತಮ ಉದಾಹರಣೆ.

ಅವರಿಗೆ ಇರುವುದು 16 ಎಕರೆ ಜಮೀನು. ನೀರಿಗೆ ಸ್ವಲ್ಪ ಹೆಚ್ಚೇ ಎನಿಸುವಷ್ಟು ತೊಂದರೆ. ನಾಲ್ಕು ಎಕರೆಯಲ್ಲಿ ಅಡಿಕೆ ಬೆಳೆದಿದ್ದು, ಎರಡು ಎಕರೆಯಲ್ಲಿ ಫಸಲು ಸಿಗುತ್ತಿತ್ತು. ಗಿಡಗಳು ಚೆನ್ನಾಗಿದ್ದರೂ ಫಸಲು ಅಷ್ಟಕ್ಕಷ್ಟೆ ಆಗಿತ್ತು. ಕ್ರಮಬದ್ಧ ನೀರಿನ ನಿರ್ವಹಣೆಯೇ ಇದಕ್ಕೆ ಪರಿಹಾರವೆಂಬುದನ್ನು ಅರಿತ ಉಮೇಶ್ ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾದರು.

65 ಅಡಿ ಉದ್ದ, 45 ಅಡಿ ಅಗಲ ಮತ್ಯು 12 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿದರು. ಒಂದೆರಡು ಬಾರಿ ಸ್ವಲ್ಪ ಮಳೆ ಬಂದರೂ ಸುಮಾರು ಎರಡು ಕೋಟಿ ಲೀಟರ್‌ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಈ ಕೃಷಿ ಹೊಂಡದಿಂದ ಅಡಿಕೆ ಗಿಡಗಳಿಗೆ ಸಮರ್ಪಕ ನೀರು ದೊರೆಯುವಂತೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದರು. ಇದೀಗ ಅವರ ಶ್ರಮದ ಫಲವಾಗಿ ಎರಡು ಎಕರೆಯಲ್ಲಿ 13 ಕ್ವಿಂಟಲ್ ಒಣ ಅಡಿಕೆ ಇಳುವರಿ ಪಡೆದಿದ್ದಾರೆ. ಬಯಲು ಪ್ರದೇಶದಲ್ಲಿ ಇದು ದಾಖಲೆಯೇ ಸರಿ. ಇದರ ಜೊತೆಗೆ ಒಂದೂವರೆ ಎಕರೆಯಲ್ಲಿ 500 ದಾಳಿಂಬೆ ಗಿಡ ನಾಟಿ ಮಾಡಿದ್ದಾರೆ. ಕಳೆದ ಬಾರಿ ಮೊದಲ ಫಸಲು ಕಟಾವು ಮಾಡಿದ್ದಾರೆ. ಸ್ಥಳೀಯವಾಗಿಯೇ ಮಾರಾಟ ಮಾಡಿ ₹ 3 ಲಕ್ಷ ಗಳಿಸಿದ್ದಾರೆ. ಇದಲ್ಲದೆ 4 ಎಕರೆ ಟೊಮೆಟೋ ಮತ್ತು 2.5 ಎಕರೆ ಹೂಕೋಸು ಕೃಷಿ ಮಾಡಿದ್ದಾರೆ.

ಗಿಡಗಳಿಗೆ ಗೊಬ್ಬರ ನೀಡುವುದಕ್ಕಾಗಿಯೇ 15 ನಾಟಿ ಹಸುಗಳನ್ನು ಸಾಕಿದ್ದಾರೆ. ಹಾಲು ಕರೆಯುವುದು ಮುಖ್ಯವಲ್ಲ, ಅವುಗಳ ಗೊಬ್ಬರ ಮತ್ತು ಗಂಜಲವನ್ನು ಒಂದಿಷ್ಟೂ ವ್ಯರ್ಥವಾಗದೆ ತೋಟ ಸೇರುತ್ತದೆ. ಇದರಿಂದ ಸೀಮೆಗೊಬ್ಬರ ಕೊಳ್ಳುವ ಹಣ ಉಳಿತಾಯವಾಗಿದೆ. ಗಿಡಗಳೂ ಆರೋಗ್ಯದಿಂದ ನಳನಳಿಸುತ್ತಿವೆ.

ಪ್ರಕೃತಿಯನ್ನು ಗಮನಿಸುತ್ತಾ ಇದ್ದರೆ ರೈತರಿಗೆ ಬೆಳೆಗಳ ನಿರ್ವಹಣೆ ಬಗ್ಗೆ ಜ್ಞಾನ ದೊರೆಯುತ್ತದೆ. ಜೊತೆಗೆ ಶ್ರಮ ಮತ್ತು ಬದ್ಧತೆಯಿಂದ ಕೃಷಿ ಮಾಡಿದರೆ ಉದ್ಯೋಗಕ್ಕಾಗಿ ಪಟ್ಟಣಕ್ಕೆ ಹೋಗುವ ಅವಶ್ಯಕತೆಯಿಲ್ಲ. ಕೃಷಿಯಲ್ಲಿಯೇ ತೃಪ್ತಿಯಾಗಿ ಜೀವಿಸಬಹುದು ಎನ್ನುವ ಉಮೇಶ್ ಅವರಿಗೆ ಅವರ ಕುಟುಂಬದ ಪೂರ್ಣ ಸಹಕಾರವಿದೆ. ತೋಟಗಾರಿಕೆ ಇಲಾಖೆಯ ಸೀಮಾ ಮತ್ತು ಲಿಂಗರಾಜು ಅವರ ಮಾರ್ಗದರ್ಶನವನ್ನು ಉಮೇಶ್ ಸದಾ ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT