ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಪಂಚಾಯಿತಿ ಕೈತಪ್ಪುತ್ತಿರುವ ಆದಾಯ

ಅಜ್ಜಂಪುರ: ಬಗೆಹರಿಯದ ವಾಣಿಜ್ಯ ಮಳಿಗೆ ಗೊಂದಲ– ನಾಗರಿಕರ ಅಸಮಾಧಾನ
Last Updated 25 ಅಕ್ಟೋಬರ್ 2022, 16:27 IST
ಅಕ್ಷರ ಗಾತ್ರ

ಅಜ್ಜಂಪುರ: ಪಟ್ಟಣದ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ಗೊಂದಲ ಪರಿಹರಿಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ನಡೆಯಿಂದ, ಪಂಚಾಯಿತಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಕೈತಪ್ಪುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣ ಪಂಚಾಯಿತಿಯು ಆಗಸ್ಟ್‌ 22 ರಂದು ತನ್ನ ವ್ಯಾಪ್ತಿಯ ಬಸ್‌ನಿಲ್ದಾಣ ಭಾಗದ 31, ಟಿಎಂಸಿ ರಸ್ತೆಯ 9, ಬೀರೂರು ರಸ್ತೆಯ 5, ಸಿದ್ದರಾಮೇಶ್ವರ ವೃತ್ತ ಭಾಗದ 6 ಸೇರಿ ಒಟ್ಟು 51 ವಾಣಿಜ್ಯ ಮಳಿಗೆಯನ್ನು ಬಾಡಿಗೆಗಾಗಿ ಬಹಿರಂಗ ಹರಾಜು ನಡೆಸಿತ್ತು.

ಬಿಡ್‌ದಾರರು ಮಳಿಗೆ ಹರಾಜು ಪಡೆದ ಬಳಿಕವೂ, ಹಾಲಿ ಬಾಡಿಗೆ ಯಲ್ಲಿರುವವರಿಗೆ ಅದೇ ಮಳಿಗೆಯಲ್ಲಿ ಮುಂದುವರಿಯಲು ಪಂಚಾಯಿತಿ ನೀಡಿದ ಅವಕಾಶ ಗೊಂದಲ ಸೃಷ್ಟಿಸಿತು. ಪಂಚಾಯಿತಿ ನಿರ್ಧಾರ ವಿರುದ್ಧ ಬಿಡ್‌ದಾರರು, ತಹಶೀಲ್ದಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿ, ಲೋಕಾಯುಕ್ತರಿಗೆ ದೂರು ನೀಡಿದ್ದರು.

ಈ ಬಗ್ಗೆ ಎರಡು ತಿಂಗಳು ಕಳೆದರೂ ಜಿಲ್ಲಾಧಿಕಾರಿ, ಪಂಚಾಯಿತಿಗೆ ಯಾವುದೇ ಸೂಚನೆ ನೀಡಿಲ್ಲ. ಮಳಿಗೆಯಲ್ಲಿ ಮೊದಲಿದ್ದವರೇ ವ್ಯವಹಾರ ಮುಂದುವರಿಸಿದ್ದಾರೆ. ಹಿಂದೆ ನಿಗದಿಯಾಗಿದ್ದ ಬಾಡಿಗೆಯನ್ನೇ ಪಾವತಿಸುತ್ತಿದ್ದಾರೆ. ಹೊಸ ಬಿಡ್‌ದಾರರಿಗೆ ಮಳಿಗೆ ನೀಡಿದ್ದರೆ ಹೆಚ್ಚು ಬಾಡಿಗೆ ಬರುತ್ತಿತ್ತು. ಹಾಗೆ ಆಗದಿರುವುದರಿಂದ ಪಂಚಾಯಿತಿಗೆ ನಷ್ಟವಾಗುತ್ತಿದೆ ಎಂದು ನಿವಾಸಿ ಜಗದೀಶ್ ದೂರಿದ್ದಾರೆ.

ಹಿಂದಿನ ಬಾಡಿಗೆದಾರರಿಗೆ ಮಳಿಗೆ ಯಲ್ಲಿರಲು ಅವಕಾಶ ನೀಡುವು ದಾಗಿದ್ದರೆ, ಹರಾಜಿನ ಔಚಿತ್ಯ ಏನಿತ್ತು? ಹರಾಜಿನಲ್ಲಿ ಮಳಿಗೆ ಪಡೆದವರಿಗೆ ಮಳಿಗೆ ನೀಡಬೇಕು. ಇಲ್ಲವೇ ಹರಾಜು ವೇಳೆ ನೀಡಿದ್ದ ಡಿಡಿಯನ್ನಾದರೂ ಹಿಂತಿರುಗಿಸಬೇಕು. ಯಾವುದನ್ನೂ ಮಾಡದಿರುವ ಮುಖ್ಯಾಧಿಕಾರಿ ನಡೆ ಬೇಸರ ತರಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಬಿಡ್‌ದಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣ ಭಾಗದಲ್ಲಿನ 3.25 ಅಡಿ ಅಗಲ, 8 ಅಡಿ ಉದ್ದ ವಿಸ್ತೀರ್ಣದ ಬೀಡಾ ಅಂಗಡಿ ಮಳಿಗೆಯೊಂದು ಮಾಸಿಕ ₹ 25,700 ಜತೆಗೆ ಶೇ 18ರ ತೆರಿಗೆ ಸೇರಿ ₹ 30,200 ಬಾಡಿಗೆಗೆ ಈಚೆಗಿನ ಹರಾಜಿನಲ್ಲಿ ಬಿಡ್ ಆಗಿತ್ತು. ಇಷ್ಟೊಂದು ದುಬಾರಿ ಬಾಡಿಗೆ ತರುತ್ತಿದ್ದ ಮಳಿಗೆ ಹಾಗೂ ಇತರ 9 ಮಳಿಗೆಗಳು 2 ವರ್ಷಗಳಿಂದ ಖಾಲಿಯಿವೆ. ಆದರೂ ಮುಖ್ಯಾಧಿಕಾರಿ ಹರಾಜು ನಡೆಸಿಲ್ಲ. ಈ ನಿರ್ಲಕ್ಷ್ಯ ಪಂಚಾಯಿತಿಗೆ ಸಾಕಷ್ಟು ನಷ್ಟ ತಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿ ರಮೇಶ್ ಒತ್ತಾಯಿಸಿದ್ದಾರೆ.

ಬಸ್ ನಿಲ್ದಾಣದ ಮೊದಲ ಮಹಡಿಯ ಹಲವು ಮಳಿಗೆ ಮಹಡಿ ಸೋರುತ್ತಿದೆ. ಹೋಟೆಲ್ ಮಳಿಗೆಯ ಆರ್‌ಸಿಸಿ ಕಬ್ಬಿಣ ಹೊರಬಂದಿವೆ. ಸಿಮೆಂಟ್ ಕಳಚಿದೆ. ಗೋಡೆ ಬಿರುಕು ಬಿಟ್ಟಿದ್ದು, ನಿರುಪಯುಕ್ತ ಗಿಡ ಬೆಳೆದಿವೆ. ಕೆಲವು ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಕಟ್ಟಡ ದುರಸ್ತಿಗೊಳಿಸಬೇಕು, ಬಳಿಕ ಹರಾಜು ನಡೆಸಬೇಕು ಎಂದು ಸಿದ್ದಪ್ಪ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು. ಹರಾಜು ಪ್ರಕ್ರಿಯೆಯ ಲೋಪ ಸರಿಪಡಿಸಬೇಕು ಇಲ್ಲವೇ ಮರು ಹರಾಜಿಗೆ ನಿರ್ದೇಶನ ನೀಡಬೇಕು. ಆ ಮೂಲಕ ಪಂಚಾಯಿತಿ ಆದಾಯ ಕ್ಷೀಣಿಸದಂತೆ ನೋಡಿಕೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

‘ಹರಾಜಿನಲ್ಲಿ ಪಂಚಾಯಿತಿ ತೀರ್ಮಾನ ಅಂತಿಮ ಎಂದು ಷರತ್ತಿನಲ್ಲಿ ತಿಳಿಸಿದೆ. ಆದರೂ ಬಿಡ್‌ದಾರರು, ಹರಾಜು ವಿರುದ್ಧ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಯ ನಿರ್ದೇಶನದಂತೆ ನಡೆಯಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರತ್ನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT