ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತ ಜಯಂತ್ಯುತ್ಸವ; ಕೇಸರಿ ಕಲರವ, ಸಕಲ ಸಜ್ಜು

Last Updated 20 ಡಿಸೆಂಬರ್ 2018, 6:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಇದೇ 20ರಿಂದ 22ರವರೆಗೆ ದತ್ತ ಜಯಂತಿ ಜರುಗಲಿದ್ದು, ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿಮಯವಾಗಿವೆ.

20ರಂದು ಅನಸೂಯಾ ಜಯಂತಿ, 21ರಂದು ಶೋಭಾಯಾತ್ರೆ ಮತ್ತು 22ರಂದು ದತ್ತ ಜಯಂತ್ಯುತ್ಸವ ಜರುಗಲಿದೆ. ಎಂ.ಜಿ ರಸ್ತೆ, ಐಜಿ ರಸ್ತೆ, ರತ್ನಗಿರಿ ರಸ್ತೆ, ಆಜಾದ್‌ ಪಾರ್ಕ್ ವೃತ್ತ, ಹನುಮಂತಪ್ಪ ವೃತ್ತ, ಪಾಲಿಟೆಕ್ನಿಕ್‌ ವೃತ್ತ ಸಹಿತ ನಗರದ ವಿವಿಧೆಡೆಗಳಲ್ಲಿ ಧ್ವಜಗಳನ್ನು ಕಟ್ಟಿ ಅಲಂಕರಿಸಲಾಗಿದೆ. ನಗರದಲ್ಲಿ ಕೇಸರಿ ಕಲರವ ಮೇಳೈಸಿದೆ.

‘ಅನಸೂಯಾ ಜಯಂತಿ ಅಂಗವಾಗಿ 20ರಂದು ಬೆಳಿಗ್ಗೆ 9.30ಕ್ಕೆ ನಗರದ ಬೋಳರಾಮೇಶ್ವರ ದೇಗಲದಿಂದ ಸಂಕೀರ್ತನಾ ಯಾತ್ರೆ ಹೊರಡಲಿದೆ. ಮಹಿಳೆಯರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳವರು. ಐ.ಜಿ ರಸ್ತೆ, ರತ್ನಗಿರಿ ರಸ್ತೆ ಮೂಲಕ ಹಾದು ಡಿಎಸಿಜಿ ಪಾಲಿಟೆಕ್ನಿಕ್‌ ಬಳಿ ಸಮಾಪನಗೊಳ್ಳಲಿದೆ. ನಂತರ ಗಿರಿಗೆ ತೆರಳಿ ದತ್ತ ಪಾದುಕೆ ದರ್ಶನ ಮಾಡುವರು’ ಎಂದು ವಿಶ್ವ ಹಿಂದು ಪರಿಷತ್‌ ಕಾರ್ಯದರ್ಶಿ ಯೋಗೀಶ್‌ ಅರಸ್‌ ತಿಳಿಸಿದರು.

21ರಂದು ನಗರದಲ್ಲಿ ದತ್ತಾತ್ರೇಯ ಶೋಭಾಯಾತ್ರೆ ನಡೆಯಲಿದೆ. 22ರಂದು ದತ್ತಭಕ್ತರು ಗಿರಿಗೆ ತೆರಳಿ ದತ್ತ ಪೀಠದಲ್ಲಿ ಪಾದುಕೆ ದರ್ಶನ ಮಾಡುವರು. ಗಿರಿಯಲ್ಲಿ ಗಣಪತಿ ಹೋಮ, ದತ್ತಹೋಮ, ಸಭೆ, ಪ್ರಸಾದ ವಿತರಣೆ ಕೈಂಕರ್ಯಗಳು ನಡೆಯಲಿವೆ.

ದತ್ತ ಜಯಂತಿ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದೆ. ಅಹಿತಕರ ಘಟನೆಗಳಿಗೆ ಎಡೆಯಾಗದಂತೆ ಕಟ್ಟೆಚ್ಚರ ವಹಿಸಿದೆ. ಭದ್ರತೆಗೆ 3,500 ಪೊಲೀಸರನ್ನು ನಿಯೋಜಿಸಲಾಗಿದೆ. ಒಬ್ಬರು ಎಸ್ಪಿ, ಇಬ್ಬರು ಎಎಸ್ಪಿ ಹಾಗೂ ನಾಲ್ವರು ಐಪಿಎಸ್‌ ಅಧಿಕಾರಿಗಳು ಬಂದೋಬಸ್ತ್‌ ಉಸ್ತುವಾರಿ ನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ 35 ಚೆಕ್‌ಪೋಸ್ಟ್‌ ಗಳನ್ನು ತೆರೆಯಲಾಗಿದೆ. ಆಯಕಟ್ಟಿನ ಸ್ಥಳಗಳು, ವಿವಿಧ ವೃತ್ತಗಳು, ಪ್ರಮುಖ ಮಾರ್ಗಗಳು ಎಲ್ಲ ಕಡೆ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ. ಎಲ್ಲ ಕಡೆ ಪೊಲೀಸ್‌ ಗಸ್ತು ಹಾಕಲಾಗಿದೆ.

**

22ರಂದು ಅಂಗಡಿಮುಂಗಟ್ಟು ತೆರೆಯದಂತೆ ನಿರ್ಬಂಧ

ದತ್ತ ಜಯಂತಿ ನಿಮಿತ್ತ ಇದೇ 22ರಂದು ಬೆಳಿಗ್ಗೆ 4 ರಿಂದ ರಾತ್ರಿ12 ಗಂಟೆವರೆಗೆ ನಗರದ ವಿವಿಧ ರಸ್ತೆಗಳಲ್ಲಿನ ಅಂಗಡಿಮುಂಗಟ್ಟುಗಳನ್ನು ತೆರೆಯದಂತೆ ನಿರ್ಬಂಧ ವಿಧಿಸಲಾಗಿದೆ.

ಮೂಗ್ತಿಹಳ್ಳಿಯಿಂದ ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣ ವರೆಗೆ(ಕೆ.ಎಂ ರಸ್ತೆ), ಐ.ಜಿ ರಸ್ತೆ, ರತ್ನಿಗಿರಿ ರಸ್ತೆ ( ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ರಾಮನಹಳ್ಳಿವರೆಗೆ) ಅಲ್ಲಂಪುರ, ಹಾಲೇನಹಳ್ಳಿ, ಸಿರಿ ಕಾಫಿ ಶಾಪ್/ಹೋಂ ಸ್ಟೇ, ಕೈಮರ, ಅತ್ತಿಗುಂಡಿ, ಮಲ್ಲೇನಹಳ್ಳಿ ಗ್ರಾಮ, ಕೆ.ಎಂ ರಸ್ತೆ (ಶೃಂಗಾರ್ ವೃತ್ತದಿಂದ ಎಐಟಿ ವೃತ್ತದವರೆಗೆ), ಬಸವನಹಳ್ಳಿ ಮುಖ್ಯ ರಸ್ತೆ (ಕೆಇಬಿ ಈದ್ಗಾದಿಂದ ಹನುಮಂತಪ್ಪ ವೃತ್ತದವರೆಗೆ) ಎಲ್ಲ ಅಂಗಡಿ ಮುಂಗಟ್ಟುಗಳಿಗೆ ತೆರೆಯದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀ.ರಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**

3 ದಿನ ಮದ್ಯ ಮಾರಾಟ ನಿಷೇಧ

ದತ್ತಜಯಂತಿ ನಿಮಿತ್ತ ಇದೇ 20ರಿಂದ 22ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.

20ರಂದು ರಾತ್ರಿ 12ರಿಂದ 22ರಂದು ರಾತ್ರಿ ೧೨ ಗಂಟೆವರೆಗೆ ಜಿಲ್ಲೆಯ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಬೇಕು. ಮದ್ಯ, ಅಬಕಾರಿ ಪದಾರ್ಥಗಳ ಸಾಗಣೆ, ಶೇಖರಣೆ, ತಯಾರಿಕೆ, ಸರಬರಾಜು, ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**

ಗಿರಿಶ್ರೇಣಿಗೆ ಪ್ರವಾಸಿಗರಿಗೆ ನಿರ್ಬಂಧ

ದತ್ತ ಜಯಂತಿ ನಿಮಿತ್ತ ಗಿರಿಶ್ರೇಣಿ ಮಾರ್ಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಮೂರು ದಿನ ನಿರ್ಬಂಧ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT