ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ: ತಾಣ ಸಂರಕ್ಷಣೆಗೆ ಗೋಡೆ ಚಿತ್ತಾರ

ಅಜ್ಜಂಪುರ ಪಟ್ಟಣ ಪಂಚಾಯಿತಿ ಕಂಡುಕೊಂಡ ಸುಲಭ ಉಪಾಯ
Last Updated 18 ಏಪ್ರಿಲ್ 2021, 5:05 IST
ಅಕ್ಷರ ಗಾತ್ರ

ಅಜ್ಜಂಪುರ: ಸಾರ್ವಜನಿಕ ತಾಣಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಅಜ್ಜಂಪುರ ಪಟ್ಟಣ ಪಂಚಾಯಿತಿ ‘ಚಿತ್ರಕಲೆ’ಯ ಮಾಧ್ಯಮ ಕಂಡುಕೊಂಡಿದೆ. ಹೆಚ್ಚು ಜನದಟ್ಟಣೆಯಿರುವ, ಪದೇ ಪದೇ ತ್ಯಾಜ್ಯ ಸಂಗ್ರಹವಾಗುವ ಸ್ಥಳದ ಅಕ್ಕಪಕ್ಕದ ಗೋಡೆಗಳ ಮೇಲೆ ಸುಂದರ ಚಿತ್ರ ಅರಳಿಸಿ, ಇಂತಹ ತಾಣಗಳನ್ನು ರಕ್ಷಿಸಿದೆ.

ಪಟ್ಟಣದ ವೀರಯೋಧ ಡಿ. ಪುಟ್ಟಸ್ವಾಮಿ ಖಾಸಗಿ ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ ಕಾಂಪೌಂಡ್, ಬಸ್ ನಿಲ್ದಾಣದೊಳಗಿನ ತಂಗುದಾಣ, ಶೌಚಾಲಯದ ಹೊರಾಂಗಣ, ರೈಲ್ವೆಗೇಟ್ ಬಳಿಯ ಪ್ರಯಾಣಿಕರ ತಂಗುದಾಣಗಳಲ್ಲಿ ಚಿತ್ರಕಲೆಗಳು ಕಂಗೊಳಿಸುತ್ತಿವೆ.

‘ಮೈಸೂರು ದಸರಾ ನೆನಪಿಸುವ ಅಂಬಾರಿ ಹೊತ್ತ ಆನೆ, ಕರಾವಳಿಯ ಕಲೆ ಯಕ್ಷಗಾನ, ಪ್ರಕೃತಿ ಬಿಂಬಿಸುವ ಗುಡ್ಡ-ಬೆಟ್ಟ, ಜಲಾಶಯ, ಕಾಡು, ಜೀವ ವೈವಿಧ್ಯ, ಜಾನಪದ ಕಲೆಗಳು ಹೀಗೆ ಕರುನಾಡಿನ ವೈವಿಧ್ಯಗಳನ್ನು ಗೋಡೆಯ ಚಿತ್ತಾರದಲ್ಲಿ ಕಾಣಬಹುದು.

‘ಚಿಕ್ಕಮಗಳೂರು ಮೂಲದ ನಿರಂತರ ಆರ್ಟ್ಸ್‌ನ ಕಲಾವಿದ ಸುಂದರ್ ಅವರ ಕೈಚಳಕದಲ್ಲಿ ಮೂಡಿ ಬಂದಿರುವ ಪ್ರತಿಯೊಂದು ಚಿತ್ರ ನೋಡುಗರನ್ನು ಆಕರ್ಷಿಸುತ್ತದೆ. ಇದಕ್ಕೆ ಮನಸೋತಿರುವ ಜನರು ಸಹ ಗೋಡೆಗಳ ಮೇಲೆ ಅನಾವಶ್ಯಕ ಬರಹ ಬರೆಯುವುದು, ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿದ್ದಾರೆ’ ಎನ್ನುತ್ತಾರೆ ತಂಗುದಾಣ ಪಕ್ಕದ ಅಂಗಡಿಯ ಮಾಲೀಕ ಹರೀಶ್.

‘ಇಲ್ಲಿನ ಬಸ್ ನಿಲ್ದಾಣದ ತಂಗುದಾಣದ ನೆಲಹಾಸು ಕಿತ್ತು ಬಂದಿತ್ತು. ಗೋಡೆ ಗಲೀಜುಗೊಂಡಿತ್ತು. ಪ್ರಯಾಣಿಕರ ಬದಲಿಗೆ ಭಿಕ್ಷಕರು, ಕುಡುಕರ ತಾಣವಾಗಿತ್ತು. ಇದನ್ನು ಸ್ವಚ್ಛಗೊಳಿಸಿದರೂ, ಪುನ: ಅಸ್ತವ್ಯಸ್ತವಾಗುವ ಸ್ಥಿತಿ ಇತ್ತು. ಆಗ ಗೋಡೆ ಮೇಲೆ ‘ಚಿತ್ರಕಲೆ’ ಬಿಡಿಸುವ ಯೋಜನೆ ಕಾರ್ಯರೂಪಕ್ಕೆ ತರಲಾಯಿತು. ಇದು ಪಟ್ಟಣದ ಸೌಂದರ್ಯ ಹೆಚ್ಚಿಸಿದೆ. ಸ್ವಚ್ಛತೆ ಕಾಯ್ದುಕೊಳ್ಳುವ ಪಂಚಾಯಿತಿಯ ಉದ್ದೇಶ ಸಾಕಾರಗೊಂಡಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ವರಪ್ಪ ಸಂತಸ ವ್ಯಕ್ತಪಡಿಸಿದರು.

‘ಚಿತ್ರಕಲೆಯಿಂದ ಒಳ್ಳೆಯ ಯೋಚನೆ’

‘ಕೆಂಪು, ನೀಲಿ, ಹಳದಿ ಇವು ಮೂಲ ಬಣ್ಣಗಳಾಗಿದ್ದು, ಇವುಗಳನ್ನು ಬಳಸಿ ದ್ವಿತೀಯ, ತೃತೀಯ, ಬಹುವರ್ಣ ತಯಾರಿಸಬಹುದಾಗಿದೆ. ರೇಖೆ-ಬಣ್ಣ ಸಮ್ಮಿಲನದ ಚಿತ್ರಗಳು, ವಾಸ್ತವಿಕತೆ, ಸಹಜತೆಗೆ ಸೌಂದರ್ಯ ತಂದುಕೊಡುತ್ತವೆ. ಇವು ಜನರ ಮನಸ್ಸನ್ನು ಜಾಗೃತಗೊಳಿಸಿ, ಉತ್ತಮ ಯೋಚನೆಗೆ ನಾಂದಿ ಹಾಡುತ್ತವೆ’ ಎನ್ನುತ್ತಾರೆ ಜೋಡಿತಿಮ್ಮಾಪುರದ ಚಿತ್ರಕಲಾ ಶಿಕ್ಷಕ ರೇಣುಕಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT