ಗುರುವಾರ , ಫೆಬ್ರವರಿ 25, 2021
20 °C
ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಶಂಕುಸ್ಥಾಪನೆಯಲ್ಲಿ ಸಚಿವ ಮಾಧುಸ್ವಾಮಿ

41 ತಾಲ್ಲೂಕುಗಳಲ್ಲಿ ಅಟಲ್‌ ಭೂಜಲ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಅಟಲ್‌ ಭೂಜಲ ಯೋಜನೆಯಡಿ ರಾಜ್ಯದ 41 ತಾಲ್ಲೂಕುಗಳಲ್ಲಿ ಅಂತರ್ಜಲ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವು ನಾಲ್ಕು ವರ್ಷದಲ್ಲಿ ₹1208 ಕೋಟಿ ಅನುದಾನ ಒದಗಿಸಲಿದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ತಾಲ್ಲೂಕಿನ ಲಕ್ಯಾ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಜಿಲ್ಲೆಯ ಕಡೂರು ತಾಲ್ಲೂಕು ಈ ಯೋಜನೆಗೆ ಆಯ್ಕೆಯಾಗಿದೆ. ಈ ಯೋಜನೆಯಡಿ ತಾಲ್ಲೂಕಿನ ಎಲ್ಲ ಕೆರೆಗಳನ್ನು ಅಭಿವೃದ್ಧಿ ಪಡಿಸಿ, ನೀರು ಹರಿಸಿ ಅಂತರ್ಜಲ ಮಟ್ಟ ವೃದ್ಧಿಸುವಂತೆ ಮಾಡಿ ಕೊಳವೆ ಬಾವಿಗಳಲ್ಲಿ ಜಲ ಲಭ್ಯವಾಗುವ ಸ್ಥಿತಿ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

ಜಿಲ್ಲೆಯ ಬಯಲು ಸೀಮೆ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ (₹ 1200 ಕೋಟಿ ಅಂದಾಜು ವೆಚ್ಚ) ಸಂಪುಟ ಅನುಮೋದನೆ ನೀಡಿದೆ. ಯೋಜನೆಯಿಂದ ಈ ಭಾಗದ ಕೆರೆಗಳಿಗೆ ನೀರು ಹರಿದು, ಅಂತರ್ಜಲ ವೃದ್ಧಿಗೆ ಅನುಕೂಲವಾಗಲಿದೆ ಎಂದರು.

ಈ ಭಾಗದ ಕೆರೆಗಳಿಗೆ ನೀರು ಹರಿಸುವ ರಣಘಟ್ಟ ನೀರಾವರಿ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ರೈತರು ಸುಸ್ಥಿರ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಚಿಕ್ಕಮಗಳೂರಿನಂಥ ಜಿಲ್ಲೆಗಳಿಗೆ ಸಣ್ಣ ನೀರಾವರಿ ಯೋಜನೆಗಳು ಹೆಚ್ಚು ಪೂರಕ ಎಂದರು.

ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುತ್ತಿರುವುದರಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಅನುಕೂಲವಾಗಿದೆ. ನಗರದ ಕೊಳಚೆ ನೀರು ಶುದ್ಧೀಕರಣ ಮಾಡಿ ಸಣ್ಣ ನೀರಾವರಿ ಇಲಾಖೆಗೆ ಪೂರೈಸಿದರೆ, ಅದನ್ನು ಎರಡ್ಮೂರು ಕೆರೆಗಳಿಗೆ ಹರಿಸುವ ಕೆಲಸ ಮಾಡುತ್ತೇವೆ. ಚಿಕ್ಕಮಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಒದಗಿಸಲು ಜಿಲ್ಲಾಡಳಿತ ಮುಂದಾದರೆ ಆ ನೀರನ್ನು ಕೆರೆಗಳಿಗೆ ಹರಿಸಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ಕ್ರಮವಹಿಸಲಾಗುವುದು ಎಂದು ಹೇಳಿದರು.

ಲಕ್ಯಾ ಗ್ರಾಮದ ಅಂಬೇಡ್ಕರ್‌ ಭವನದ ಉದ್ಘಾಟನೆ ನೆರವೇರಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್‌, ಉಪಾಧ್ಯಕ್ಷೆ ಶಾರದಾ ಶಶಿಧರ್‌, ಸದಸ್ಯರಾದ ಈಶ್ವರಹಳ್ಳಿ ಮಹೇಶ್‌, ಶುಭಾ ಸತ್ಯಮೂರ್ತಿ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌, ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಿರಂಜನ್‌, ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ದಯಾಶಂಕರ್‌ ಇದ್ದರು.

ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ ಕಾಮಗಾರಿಗಳು
* ಬೈರಾಪುರ ಪಿಕಪ್‌ ಅಣೆಕಟ್ಟಿಯಿಂದ ಮಾದರಸನ ಕೆರೆಗೆ ನೀರೊದಗಿಸುವ ಯೋಜನೆ
* ಹಿರೇಮಗಳೂರು ಕೆರೆಯಿಂದ ದಾಸರಹಳ್ಳಿ ಕೆರೆಗೆ ನೀರು ಹರಿಸುವ ಯೋಜನೆ
* ದೇವಿಕೆರೆಯಿಂದ ಕರಗಡ ನಾಲೆ ಮೂಲಕ ಕಳಸಾಪುರ ಊರ ಮುಂದಿನ ಕೆರೆ, ತಿಮ್ಮಪ್ಪನಾಯ್ಕನ ಕೆರೆ, ಈಶ್ವರಹಳ್ಳಿ ಕೆರೆಗೆ ನೀರು ಹರಿಸುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು