ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ರಾಮುಲ್ಲಾ ಖಾನ್ ಎಂದವರ ಸ್ಥಿತಿ ಏನಾಯಿತು: ಸಚಿವ ಬೈರತಿ ಸುರೇಶ್ ವ್ಯಂಗ್ಯ

ಜಿಲ್ಲಾ ಕುರುಬ ಸಂಘದಿಂದ ನೂತನ ಶಾಸಕರು, ಸಚಿವರಿಗೆ ಸನ್ಮಾನ
Published 6 ಜೂನ್ 2023, 16:14 IST
Last Updated 6 ಜೂನ್ 2023, 16:14 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್‌ ಎಂದಿದ್ದ ಸಿ.ಟಿ.ರವಿ ಅವರನ್ನು ಕ್ಷೇತ್ರದ ಜನ ಯಾವ ಸ್ಥಾನದಲ್ಲಿ ಇಡಬೇಕೊ, ಅಲ್ಲೇ ಇರಿಸಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದರು.

ಕನಕ ಭವನದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ‌ ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಲ್ಪಸಂಖ್ಯಾತರು ಮನುಷ್ಯರಲ್ಲವೇ? ಚುನಾವಣೆಯಲ್ಲಿ ಹಣ, ಜಾತಿ ಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಜನ ಸಾಬೀತುಪಡಿಸಿದ್ದಾರೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜಾತಿ, ಧರ್ಮಗಳನ್ನು ದೂಷಿಸಿ ರಾಜಕಾರಣ ಮಾಡಿದವರ ಸ್ಥಿತಿ ಏನಾಗಿದೆ ನೋಡಿ’ ಎಂದು ಪರೋಕ್ಷವಾಗಿ ಸಿ.ಟಿ ರವಿಗೆ ಕುಟುಕಿದರು.

ಕುರುಬ ಸಮುದಾಯದವರು ಹಾಲಿನಂತ ಮನಸ್ಸುಳ್ಳವರು. ತಮ್ಮ ಸಮುದಾಯದ ಮೇಲೆ ಅಭಿಮಾನವಿರಬೇಕು. ಬೇರೆಲ್ಲಾ ಸಮುದಾಯದವರನ್ನು ಸಹೋದರರಂತೆ ಕಾಣಬೇಕು. ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಆಯ್ಕೆಯಾದ ಶಾಸಕರು ಮೈಮರೆಯದೆ ಜನರ ಭರವಸೆಗಳನ್ನು ಈಡೇರಿಸಬೇಕು. ಕುರುಬ ಸಮುದಾಯದವರು ಗಾಯತ್ರಿ ಶಾಂತೇಗೌಡ ಅವರಿಗೆ ತೋರಿದ ಪ್ರೀತಿಯನ್ನು ಎಚ್‌.ಡಿ. ತಮ್ಮಯ್ಯ ಅವರಿಗೆ ನೀಡಬೇಕು ಎಂದು ಹೇಳಿದರು.

ಶಾಸಕರಾದ ಶೃಂಗೇರಿ ಟಿ.ಡಿ.ರಾಜೇಗೌಡ, ತರೀಕೆರೆ ಶಾಸಕ ಜಿ.ಎಚ್‌.ಶ್ರೀನಿವಾಸ್, ಕಡೂರು ಶಾಸಕ ಕೆ.ಎಸ್‌.ಆನಂದ್, ಎಚ್‌.ಡಿ.ತಮ್ಮಯ್ಯ ಅವರನ್ನು ಸಂಘದಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ರಾಜ್ಯ ಕುರುಬ ಸಂಘದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ರಾಜ್ಯ ನಿರ್ದೇಶಕರಾದ ಪುಟ್ಟೇಗೌಡ, ಮುಖಂಡರಾದ ಗಾಯತ್ರಿ ಶಾಂತೇಗೌಡ, ಎ.ಎನ್‌.ಮಹೇಶ್, ಎಚ್.ಪಿ.ಮಂಜೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್‌, ಕೆ.ವಿ.ಮಂಜುನಾಥ್‌, ತ್ರಿಭುವನ್‌, ಭದ್ರೇಗೌಡ, ಕನಕಶ್ರೀ ಕಲಾವತಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT