ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಸಿಂಹರಾಜಪುರ | ಅನುದಾನದ ಕೊರತೆ: ಮನೆಗಳು ಅಪೂರ್ಣ

Published : 22 ಆಗಸ್ಟ್ 2024, 5:52 IST
Last Updated : 22 ಆಗಸ್ಟ್ 2024, 5:52 IST
ಫಾಲೋ ಮಾಡಿ
Comments

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯ 14 ಗ್ರಾಮ ಪಂಚಾಯಿತಿಗಳಲ್ಲಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಪೂರ್ಣ ಅನುದಾನ ಬಿಡುಗಡೆ ಆಗದಿರುವುದರಿಂದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ.

2016ರಿಂದ 2021ರ ಅವಧಿಯಲ್ಲಿ ಮೆಣಸೂರು ಗ್ರಾಮ ಪಂಚಾಯಿತಿಯಲ್ಲಿ 10, ಬಾಳೆ ಗ್ರಾಮ ಪಂಚಾಯಿತಿಯಲ್ಲಿ 5, ಕರ್ಕೇಶ್ವರ ಹಾಗೂ ಮಾಗುಂಡಿ ಗ್ರಾ. ಪಂ. ನಲ್ಲಿ ತಲಾ 8, ಕಾನೂರು ಗ್ರಾ. ಪಂ.ನಲ್ಲಿ 3, ಹೊನ್ನೆಕೂಡಿಗೆ ಹಾಗೂ ಆಡುವಳ್ಳಿ ಗ್ರಾ.ಪಂ.ನಲ್ಲಿ ತಲಾ 2, ಮುತ್ತಿನಕೊಪ್ಪ ಗ್ರಾ. ಪಂ. ನಲ್ಲಿ 12, ಕಡಹಿನಬೈಲು ಗ್ರಾ. ಪಂ. ನಲ್ಲಿ 7, ಗುಬ್ಬಿಗಾ ಗ್ರಾ.ಪಂ.ನಲ್ಲಿ 9, ಬನ್ನೂರು, ಬಿ.ಕಣಬೂರು, ಸೀತೂರು ಗ್ರಾ. ಪಂ.ನಲ್ಲಿ ತಲಾ 4, ನಾಗಲಾಪುರ ಗ್ರಾ. ಪಂ. ನಲ್ಲಿ 1, ಒಟ್ಟು 79 ಫಲಾನುಭವಿಗಳಿಗೆ ಬಸವವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು.

ಸದರಿ ಯೋಜನೆಯಲ್ಲಿ ಪ್ರತಿ ಮನೆಯ ಘಟಕ ವೆಚ್ಚ ₹1.20ಲಕ್ಷವಾಗಿದ್ದು, ಮನೆ ನಿರ್ಮಾಣ ವೆಚ್ಚವನ್ನು ನಾಲ್ಕು ಹಂತಗಳಲ್ಲಿ ಪಾವತಿಸಲಾಗುತ್ತದೆ. ತಳಪಾಯ ಪೂರ್ಣಗೊಂಡ ಕೂಡಲೇ ₹30 ಸಾವಿರ, ಗೋಡೆ ಅಥವಾ ಕಿಟಕಿಯ ಮೇಲೆ ಹಾಕುವ ಹಾಸುಗಲ್ಲಿನವರೆಗೆ (ಲಿನ್‌ಟಲ್) ಕಾಮಗಾರಿ ಪೂರ್ಣಗೊಂಡ ಬಳಿಕ ಎರಡನೇ ಕಂತು ₹30 ಸಾವಿರ, ಚಾವಣಿ ಕೆಲಸ ಮುಗಿದ ಮೇಲೆ ₹30 ಸಾವಿರ ಹಾಗೂ ಮನೆ ಕಾಮಗಾರಿ ಸಂಪೂರ್ಣಗೊಂಡ ಬಳಿಕ ಕೊನೆಯ ಕಂತು ₹30 ಸಾವಿರ ಪಾವತಿಸಲಾಗುತ್ತದೆ.

ಆದರೆ, ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಲ್ಲಿ ಕೆಲವರಿಗೆ ಒಂದು ಕಂತು, ಎರಡು ಕಂತು, ಮೂರು ಕಂತು ಅನುದಾನ ಬಂದಿದೆ. ಸರ್ಕಾರದಿಂದ ಅನುದಾನ ಬರುತ್ತದೆ ಎಂಬ ಭರವಸೆಯ ಮೇಲೆ ಕೆಲವು ಫಲಾನುಭವಿಗಳು ಖಾಸಗಿಯವರಿಂದ ಅಧಿಕ ಬಡ್ಡಿದರಕ್ಕೆ ಮತ್ತು ಬ್ಯಾಂಕ್‌ಗಳಿಂದ ಸಾಲ ಪಡೆದು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ, ಕಳೆದ 6 ತಿಂಗಳಿನಿಂದ ಫಲಾನುಭವಿಗಳಿಗೆ ಅನುದಾನ ಬರದಿರುವುದರಿಂದ ಸಾಲದ ಮೇಲಿನ ಬಡ್ಡಿ ಅಧಿಕವಾಗಿ ಹೊರೆಯಾಗಿ ಪರಿಣಮಿಸಿದೆ. ಸಾಲ ಪಡೆಯಲೂ ಸಾಧ್ಯವಾಗದವರಲ್ಲಿ ಕೆಲವರು ಚಾವಣಿವರೆಗೆ, ಅರ್ಧ ಮನೆ ನಿರ್ಮಿಸಿ ಕೈಬಿಟ್ಟಿದ್ದಾರೆ. ಮಳೆಗಾಲವಾಗಿರುವುದರಿಂದ ನಿರ್ಮಿಸಿದ ಮನೆಯೂ ಕುಸಿದು ಬೀಳುವ ಆತಂಕ ಕೆಲವರಿಗೆ ಎದುರಾಗಿದೆ.

ಪಂಚಾಯಿತಿಯವರು ಒತ್ತಾಯ ಮಾಡಿದ್ದರಿಂದ ಮನೆ ನಿರ್ಮಿಸಿಕೊಳ್ಳಲು ಮುಂದಾದೆ. ಎರಡು ಕಂತಿನ ಹಣ ಬಂದಿದೆ. ಮನೆ ಅಪೂರ್ಣಗೊಂಡಿದ್ದು ಕೈಗಡ ಸಾಲ ಮಾಡಿಕೊಂಡಿದ್ದೇನೆ. ಅನುದಾನ ಬಿಡುಗಡೆಯಾದರೆ ಅನುಕೂಲವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಫಲಾನುಭವಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ಫಲಾನುಭವಿಗಳಿಗೆ 6 ತಿಂಗಳಿನಿಂದ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ‌ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡುವುದರ ಮೂಲಕ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು.
ಎನ್.ಡಿ.ಪ್ರಸಾದ್ ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ
ಫಲಾನುಭವಿಗಳ ಮಾಹಿತಿ ನೀಡಲಾಗಿದೆ
ಪ್ರಧಾನಮಂತ್ರಿ ಆವಾಸ್ ಯೋಜನೆ ಅಂಬೇಡ್ಕರ್ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಫಲಾನುಭವಿಗಳ ಮಾಹಿತಿ ನೀಡಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಡಿ. ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT