ಗುರುವಾರ , ಏಪ್ರಿಲ್ 15, 2021
24 °C
ಬಸವ ತತ್ವ ಸಮಾವೇಶ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ

ಸಮಾನತೆಗೆ ಶ್ರಮಿಸಿದ ಮಹನೀಯ ಬಸವಣ್ಣ: ಈಶ್ವರ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಎಲ್ಲ ಕ್ಷೇತ್ರಗಳು ಕುಲುಷಿತಗೊಂಡಿವೆ. ಭ್ರಷ್ಟ ವ್ಯವಸ್ಥೆ ಸರಿಪಡಿಸಲು ಇಚ್ಛಾಶಕ್ತಿ ಬೇಕು, ಆರೋಪ–ಪ್ರತ್ಯಾರೋಪ ಮಾಡುವುದರಿಂದ ಪ್ರಯೋಜನ ಇಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಬಸವ ತತ್ತ್ವ ಪೀಠ ಮತ್ತು ಬಸವ ಮಂದಿರದ ವತಿಯಿಂದ ಚಂದ್ರಶೇಖರ ಸ್ವಾಮೀಜಿಯವರ166ನೇ ಜಯಂತ್ಯುತ್ಸವ ಮತ್ತು ಜಯಚಂದ್ರಶೇಖರ ಸ್ವಾಮೀಜಿಯವರ 25ನೇ ಸಂಸ್ಮರಣೆ ಅಂಗವಾಗಿ ನಗರದ ಜೆಸಿಎಸ್‌ ಶಾಲಾವರಣದಲ್ಲಿ ಏರ್ಪಡಿಸಿರುವ ಬಸವ ತತ್ತ್ವ ಸಮಾವೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

‘ಎಲ್ಲ ಒಟ್ಟಾಗಿ ಕೊಂಡ್ಯೊಯುತ್ತೇವೆ ಎಂದು ರಾಜಕಾರಣಿಗಳಲ್ಲಿ ಹೇಳುತ್ತಾರೆ. ಆದರೆ, ಅದನ್ನು ಪಾಲಿಸುವುದಿಲ್ಲ. ಈ 21ನೇ ಶತಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದೇವೆ. ಇಂದಿಗೂ ಬಡತನ ಇದೆ. ಶ್ರೀಮಂತರು ಆಗರ್ಭ ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವಾರಗಿಯೇ ಉಳಿಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದಲ್ಲಿ ಅರಾಜಕತೆ, ಅಸಹಿಷ್ಣುತೆ, ಭಯದ ವಾತಾವರಣ ಇದೆ. ಜಾತಿ–ಜಾತಿಗಳ ನಡುವೆ ಜಗಳ, ಧರ್ಮಗಳನ್ನು ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಶಂಕೆ ಆಧರಿಸಿ ಸಾಮೂಹಿಕವಾಗಿ ಕ್ರೌರ್ಯ ಎಸಗುವ ಸ್ಥಿತಿಗೆ ತಲುಪಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸ್ವಧರ್ಮ ನಿಷ್ಠೆ ಇರಬೇಕು. ಅನ್ಯಧರ್ಮದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ವ್ಯಕ್ತಿಗತವಾಗಿ ಮೊದಲು ಬದಲಾಗಬೇಕು. ಆಗ ಸಾಮಾಜಿಕ ಬದಲಾವಣೆ ತಾನಾಗಿಯೇ ಆಗುತ್ತದೆ’ ಎಂದು ಹೇಳಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಸರ್ವಸಮಾನತೆಗಾಗಿ ಕಲ್ಯಾಣ ಕ್ರಾಂತಿ ನಡೆಸಿದರು. ಶರಣರ ಪಡೆ ಕಟ್ಟಿಕೊಂಡು ವೈಜ್ಞಾನಿಕ, ತಳಹದಿ ಮೇಲೆ ವೈಚಾರಿಕ ವಿಚಾರಗಳನ್ನು ಇಟ್ಟುಕೊಂಡು ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು. ಸಮಾಜದಲ್ಲಿ ಅಸ್ಪೃಶ್ಯತೆ, ಕಂದಾಚಾರ, ಅಸಮಾನತೆಗಳನ್ನು ತೊಡೆದುಹಾಕಲು ಶ್ರಮಿಸಿದರು’ ಎಂದರು.

‘ಬಸವಣ್ಣನರು ಜಗತ್ತಿನ ಮೊದಲ ಪಾರ್ಲಿಮೆಂಟ್‌ ಅನುಭವ ಮಂಟಪವನ್ನು ರೂಪಿಸಿದರು. ಅನುಭವ ಮಂಟಪದಲ್ಲಿ 770 ಶರಣರು ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ಬಸವ ತತ್ತ್ವಎಲ್ಲ ಕಾಲಕ್ಕೂ ಪ್ರಸ್ತುತ. ವಚನ ಸಾಹಿತ್ಯದಲ್ಲಿ ಎಲ್ಲವೂ ಇವೆ. ಆ ಸಾಹಿತ್ಯವನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಗರ್ಜೆಯ ಧನ್ಯಶ್ರೀ ಅವರು ಭರತ ನಾಟ್ಯ ಪ್ರದರ್ಶಿಸಿದರು. ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ವನಶ್ರೀ ಮಠದ ಡಾ.ಬಸವಕುಮಾರ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣಗುರು ಆಶ್ರಮದ ರೇಣುಕಾನಂದ ಸ್ವಾಮೀಜಿ, ಭೃಂಗೇಶ್ವರ ಮಠದ ಬಸವ ಭೃಂಗೇಶ್ವರ ಸ್ವಾಮೀಜಿ, ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ವಿರಕ್ತ ಮಠದ ಚೆನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಲಿಂಗೇಶ್‌, ಮುಖಂಡರಾದ ಗಾಯತ್ರಿ ಶಾಂತೇಗೌಡ, ಎಂ.ಎಲ್‌.ಮೂರ್ತಿ, ‌ಸತೀಶ ಮಹಡಿಮನೆ, ಜಿ.ಬೆನಕಪ್ಪ, ರುದ್ರಮುನಿ ಎನ್‌.ಸಜ್ಜನ್‌, ಎಚ್‌.ಎಂ.ಚಂದ್ರಶೇಖರಪ್ಪ, ಸಿ.ಆನಂದ, ಬಿ.ಎಚ್‌.ಹರೀಶ್‌, ಡಿ.ಎ.ಶಿವಶಂಕರ್‌, ಎನ್‌.ಜೆ.ರಾಜಶೇಖರ್‌, ಎಚ್‌.ಎನ್‌.ಮಹಾರುದ್ರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.