ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೊಳವೆಬಾವಿ: ನೀರಿಗಾಗಿ ಪರದಾಟ

ಜೋಡಿತಿಮ್ಮಾಪುರ: ಟ್ಯಾಂಕ್ ಇದ್ದರೂ ನೀರಿಲ್ಲ; ‘ಜಲಜೀವನ್‌’ನಲ್ಲೂ ಹರಿವು ಇಲ್ಲ
ಎನ್‌. ಸೋಮಶೇಖರ್‌
Published 28 ಏಪ್ರಿಲ್ 2024, 5:55 IST
Last Updated 28 ಏಪ್ರಿಲ್ 2024, 5:55 IST
ಅಕ್ಷರ ಗಾತ್ರ

ಬೀರೂರು: ಇಲ್ಲಿಗೆ ಸಮೀಪದ ಜೋಡಿತಿಮ್ಮಾಪುರ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ದಶಕ ಉರುಳಿದರೂ ಪರಿಹಾರ ದೊರಕದೆ, ಗ್ರಾಮಸ್ಥರು ಕೊಡ ಹಿಡಿದುಕೊಂಡು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ 3 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನೀರು ಪೂರೈಸುತ್ತಿದ್ದ 4 ಕೊಳವೆ ಬಾವಿಗಳ ಪೈಕಿ ಮೂರು ಬತ್ತಿಹೋಗಿದ್ದು, ಇನ್ನೊಂದು ಆಗಲೋ ಈಗಲೋ ಎನ್ನುವಂತಿದೆ. ಬರ, ಬೇಸಿಗೆಯಿಂದ ಹೈರಾಣಾಗಿರುವ ಜನರಿಗೆ ನೀರಿನ ಸಮಸ್ಯೆಯೂ ಕಾಡಿರುವುದರಿಂದ ಕಂಗಾಲಾಗಿದ್ದಾರೆ.

ಕಡೂರು-ಬೀರೂರಿಗೆ ನೀರು ಸರಬರಾಜು ಮಾಡುತ್ತಿರುವ ಭದ್ರಾ ಪೈಪ್‍ಲೈನ್ ಊರ ಹೆಬ್ಬಾಗಿಲಲ್ಲೇ ಹಾದುಹೋಗಿದೆ. 32 ಹಳ್ಳಿಗಳಿಗೂ ನೀರು ಪೂರೈಸಬೇಕು ಎಂಬ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಜೋಡಿತಿಮ್ಮಾಪುರವೂ ಸೇರಿದೆ. ಅದಕ್ಕಾಗಿಯೇ 7 ವರ್ಷದ ಹಿಂದೆ 1 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‍ ನಿರ್ಮಿಸಲಾಗಿದೆ. ಆದರೆ, ಈವರೆಗೆ ಟ್ಯಾಂಕ್‌ಗೆ ಹನಿ ನೀರು ಬಿದ್ದಿಲ್ಲ. ಜಲಜೀವನ್ ಮಿಷನ್‌ ಜಾರಿ ಮಾಡುವ ಸಲುವಾಗಿ ಮನೆಮನೆಗೆ ನಲ್ಲಿ ಸಂಪರ್ಕಕ್ಕೆ ಪೈಪ್‍ಲೈನ್, ಮೀಟರ್ ಅಳವಡಿಸಿದ್ದರೂ ಭದ್ರಾ ಪೈಪ್‍ನಿಂದ ನೀರು ಹರಿಯದ ಕಾರಣ ಯೋಜನೆ ವಿಫಲವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ, ರೈತರ ಜಮೀನಿನಲ್ಲಿ ಲಭ್ಯವಿರುವ ಕೊಳವೆಬಾವಿ ಮೂಲಕ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಬೇಕು ಎನ್ನುವುದು ಜಿಲ್ಲಾಡಳಿತದ ನಿರ್ದೇಶನ. ಅದರಂತೆ ಪಂಚಾಯಿತಿ ಟೆಂಡರ್ ಕರೆದು, ನೀರು ಪೂರೈಸುವ ಗುತ್ತಿಗೆದಾರರು ಯಾವ ರೈತನ ಜಮೀನಿನಿಂದ ನೀರು ತುಂಬಿಸಲಾಗುತ್ತಿದೆ, ಎಲ್ಲಿಗೆ ಸರಬರಾಜು ಮಾಡಲಾಗುತ್ತಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿದ ನಂತರ ಗುತ್ತಿಗೆದಾರರಿಗೆ ಹಣ ಮಂಜೂರಾಗುತ್ತದೆ ಎಂದು ಹೇಳಿದೆ. ಆದರೆ, ಒಮ್ಮೊಮ್ಮೆ ಆ ಅಪ್ಲಿಕೇಷನ್‍ನಲ್ಲಿ ಸರ್ವರ್ ಸಮಸ್ಯೆ ಕಂಡುಬರುತ್ತಿದ್ದು, ಮಾಹಿತಿ ಅಪ್‍ಲೋಡ್ ಆಗುವುದಿಲ್ಲ. ಹೀಗಾಗಿ ಪೂರೈಸಿದ ನೀರಿಗೆ ಹಣ ಪಾವತಿ ಆಗುವುದಿಲ್ಲ ಎನ್ನುವುದು ಗುತ್ತಿಗೆದಾರರ ದೂರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಆದ್ಯತೆ ಮೇರೆಗೆ ಕ್ರಮ ವಹಿಸಬೇಕಾದುದು ಜಿಲ್ಲಾಡಳಿತದ ಕರ್ತವ್ಯ. ಬರ ಪರಿಸ್ಥಿತಿಯಲ್ಲಿ ಜನರ ಅಳಲಿಗೆ ಸಂಬಂಧಪಟ್ಟವರು ಕಿವಿಯಾಗಲಿ. ಸಮಸ್ಯೆಗೆ ಶೀಘ್ರ ಪರಿಹಾರ ದೊರಕಲಿ ಎನ್ನುವುದು ಗ್ರಾಮಸ್ಥರ ಆಶಯ.

ಜೋಡಿತಿಮ್ಮಾಪುರ ಗ್ರಾಮದಲ್ಲಿ ಕೊಳವೆಬಾವಿಯ ನೀರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿದೆ
ಜೋಡಿತಿಮ್ಮಾಪುರ ಗ್ರಾಮದಲ್ಲಿ ಕೊಳವೆಬಾವಿಯ ನೀರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿದೆ

ಭದ್ರಾ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಕ್ರಮ

ಇಲಾಖೆ ವತಿಯಿಂದ ಈಗಾಗಲೇ 2 ಕೊಳವೆಬಾವಿ ಕೊರೆಸಲಾಗಿದೆ. ಆದರೆ ಅವುಗಳಲ್ಲೂ ನೀರು ಸಿಕ್ಕಿಲ್ಲ. ಪಂಚಾಯಿತಿ ವತಿಯಿಂದ ಕೊರೆಸಿರುವ ಕೊಳವೆಬಾವಿಗೆ ಯಂತ್ರೋಪಕರಣ ಅಳವಡಿಸಲು ಕೋರಿ ಪತ್ರ ಬಂದಿದೆ. ಈ ವಿಷಯವಾಗಿ ಗುತ್ತಿಗೆದಾರನ ಜತೆ ಮಾತಾಡಿದ್ದು ಇನ್ನೊಂದು ಕೊಳವೆಬಾವಿಯನ್ನು ರೀಬೋರ್ ಮಾಡಲು ಯೋಜಿಸಲಾಗಿದೆ. ಹೆದ್ದಾರಿ ಕಾಮಗಾರಿ ನಡೆಯುವಾಗ ಪೈಪ್‌ಲೈನ್ ಹಾಳಾಗಿದ್ದು ಅದನ್ನು ಸರಿಪಡಿಸಿಕೊಡಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅಲ್ಲಿ ವಾಲ್ವ್ ಅಳವಡಿಸಿದ ನಂತರ ಭದ್ರಾ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಎಂಜಿನಿಯರ್ ರವಿಶಂಕರ್ ಹೇಳಿದರು.

ಎತ್ತಿನಗಾಡಿ ಟ್ರ್ಯಾಕ್ಟರ್ ಮೂಲಕ ನೀರು ಪೂರೈಕೆ

3 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಕೊರೆದ ಕೊಳವೆಬಾವಿಗಳಲ್ಲೂ ನೀರಿಲ್ಲದ ಕಾರಣ ಜಮೀನುಗಳಲ್ಲಿರುವ ಕೊಳವೆಬಾವಿಗಳಿಂದ ಎತ್ತಿನಗಾಡಿ ಟ್ರ್ಯಾಕ್ಟರ್ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದೇವೆ. ಹೀಗೆಯೇ ಮುಂದುವರೆದರೆ ಗ್ರಾಮಸ್ಥರ ಪಾಡೇನು? ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಭದ್ರಾ ನೀರಿನ ಸಂಪರ್ಕವನ್ನು ಕಲ್ಪಿಸಲು ಜಿಲ್ಲಾಡಳಿತ ಮನಸ್ಸು ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥ ಹನುಮಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT