ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು | ರಾಗಿ ಖರೀದಿ ಕೇಂದ್ರ ಆರಂಭ: ದಿನಕ್ಕೆ 250 ಕ್ವಿಂಟಲ್‌ ಖರೀದಿಗೆ ಅವಕಾಶ

Published 22 ಮಾರ್ಚ್ 2024, 13:32 IST
Last Updated 22 ಮಾರ್ಚ್ 2024, 13:32 IST
ಅಕ್ಷರ ಗಾತ್ರ

ಬೀರೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ  ಬೀರೂರು ಎಪಿಎಂಸಿ ಆವರಣದಲ್ಲಿ ಬುಧವಾರದಿಂದ ರಾಗಿ ಖರೀದಿ ಕೇಂದ್ರವು ಆರಂಭಗೊಂಡಿದ್ದು ಪ್ರತಿದಿನ  250 ರಿಂದ 300 ಕ್ವಿಂಟಲ್‌ನಷ್ಟು  ರಾಗಿ ಖರೀದಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ‘ನಾಫೆಡ್‌’ ಅಧಿಕಾರಿ ಪ್ರಶಾಂತ್‌ ತಿಳಿಸಿದ್ದಾರೆ.

ಬೀರೂರು ಹೋಬಳಿಯಲ್ಲಿ 817 ರೈತರು ಈಗಾಗಲೇ ನೋಂದಾಯಿಸಿಕೊಂಡಿದ್ದು 23ಸಾವಿರ ಕ್ವಿಂಟಲ್‌ ರಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ರೈತರು ಬಂದು ಕಾಯಬಾರದು ಮತ್ತು ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಖರೀದಿ ಕೇಂದ್ರದಿಂದಲೇ ರೈತರಿಗೆ ದೂರವಾಣಿ ಕರೆ ಮಾಡಿ, ರಾಗಿಯೊಂದಿಗೆ ಬರುವಂತೆ ತಿಳಿಸಲಾಗುತ್ತಿದೆ. ರೈತರು ತಂದ ರಾಗಿಯ ಗುಣಮಟ್ಟ ಪರಿಶೀಲಿಸಿ, ರಾಶಿ ಮಾಡಿಸಿ ಸರ್ಕಾರ ನೀಡಿರುವ ಹೊಸ ಚೀಲಗಳಲ್ಲಿ ಭರ್ತಿ ಮಾಡಿ ತೂಕ ಮಾಡಲಾಗುವುದು. ರೈತರು ತಂದ ಚೀಲಗಳನ್ನು ಅವರಿಗೇ ವಾಪಾಸ್‌ ಮಾಡಲಾಗುವುದು. ರೈತರ ಎದುರೇ ರಾಶಿ ಮಾಡಿ, ತೂಕ ಮಾಡಿ 51ಕಿಲೋಗೆ ನಿಗದಿಪಡಿಸಿ ಚೀಲಗಳನ್ನು ಯಂತ್ರ ಬಳಸಿ ಹೊಲಿಯಲಾಗುವುದು, ಚೀಲದ ತೂಕ ಮತ್ತು ಸೋರಿಕೆ ಪರಿಗಣಿಸಿ 50 ಕೆ.ಜಿಗೆ  ಸರ್ಕಾರ ಹಣ ಪಾವತಿಸುತ್ತದೆ ಎಂದು ಮಾಹಿತಿ ನೀಡಿದರು.

ಕಡೂರು ತಾಲ್ಲೂಕಿನಲ್ಲಿ 5 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ, ಕಡೂರಿನಲ್ಲಿ 2, ಪಂಚನಹಳ್ಳಿಯಲ್ಲಿ 2 ಮತ್ತು ಬೀರೂರಿನಲ್ಲಿ 1 ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಈ ಬಾರಿ ಒಂದು ಕ್ವಿಂಟಲ್‌  ರಾಗಿಗೆ ₹3,846 ದರ ನಿಗದಿಪಡಿಸಲಾಗಿದೆ. ಜೂನ್‌ 30ರವರೆಗೆ ರೈತರು ರಾಗಿ ಮಾರಾಟ ಮಾಡಲು ಅವಕಾಶವಿದ್ದು ಬರ ಪರಿಸ್ಥಿತಿ ಇರುವ ಕಾರಣ ಒಬ್ಬ ರೈತ ಇಂತಿಷ್ಟೇ ರಾಗಿ ತರಬೇಕು ಎನ್ನುವ ನಿರ್ಬಂಧವೇನೂ ಇಲ್ಲ. ಉತ್ತಮ ಗುಣಮಟ್ಟ ಇರುವ ರಾಗಿ ಖರೀದಿಸಲಾಗುವುದು ಹಾಗೂ ಧಾನ್ಯ ಕಳಪೆಯಾದರೆ ತಿರಸ್ಕರಿಸಲಾಗುವುದು. ಇಲ್ಲಿ ಖರೀದಿಸಿದ ರಾಗಿಯನ್ನು ಕಡೂರು ಎಪಿಎಂಸಿ ಆವರಣದಲ್ಲಿರುವ ಗೋದಾಮಿನಲ್ಲಿ ಸಂಗ್ರಹಿಸಲಾಗುವುದು. ರೈತರು ಸಾವಧಾನದಿಂದ ಬಂದು ಧಾನ್ಯವನ್ನು ಮಾರಾಟ ಮಾಡಬೇಕು. ಹಣ ಪಾವತಿಗೆ ದಿನಾಂಕ ನಿಗದಿಯಾಗಿಲ್ಲ, ಆಹಾರಧಾನ್ಯ ಖರೀದಿಯಾದ ಇಂತಿಷ್ಟು ದಿನದ ಒಳಗೆ ರೈತರ ಖಾತೆಗೇ ನೇರವಾಗಿ ಹಣ ಜಮೆ ಮಾಡುವ ಪದ್ಧತಿ ನಡೆದುಬಂದಿದೆ ಎಂದು ಅವರು ತಿಳಿಸಿದರು.

ಬೀರೂರು ರೈತ ಸಂಪರ್ಕ ಕೇಂದ್ರದ ಗುಣಮಟ್ಟ ಪರಿಶೀಲನಾ ಅಧಿಕಾರಿ ಸೋಮನಿಂಗಪ್ಪ ಇದ್ದರು.

ಬೀರೂರು ಎಪಿಎಂಸಿ ಆವರಣದಲ್ಲಿ ರೈತರಿಂದ ಖರೀಸಿದ ರಾಗಿಯನ್ನು ಚೀಲಗಳಲ್ಲಿ ತುಂಬಿ ಯಂತ್ರ ಬಳಸಿ ಕಾರ್ಮಿಕರು ಹೊಲಿಯುತ್ತಿರುವುದು.
ಬೀರೂರು ಎಪಿಎಂಸಿ ಆವರಣದಲ್ಲಿ ರೈತರಿಂದ ಖರೀಸಿದ ರಾಗಿಯನ್ನು ಚೀಲಗಳಲ್ಲಿ ತುಂಬಿ ಯಂತ್ರ ಬಳಸಿ ಕಾರ್ಮಿಕರು ಹೊಲಿಯುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT