ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳ ಆಪಾದನೆ ಆಧಾರರಹಿತ: ಈಶ್ವರಪ್ಪ

Last Updated 16 ಸೆಪ್ಟೆಂಬರ್ 2022, 11:31 IST
ಅಕ್ಷರ ಗಾತ್ರ

ಕಡೂರು: ‘ವಿರೋಧ ಪಕ್ಷಗಳು ಮಾಡುತ್ತಿರುವ ಶೇ 40 ಕಮಿಷನ್ ಆಪಾದನೆ ಆಧಾರರಹಿತವಾದುದು. ನಿರ್ದಿಷ್ಟ ಇಲಾಖೆ ಅಥವಾ ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಿ ದಾಖಲೆಯಿದ್ದರೆ ಅದನ್ನು ನೀಡಿ ಆಪಾದಿಸಲಿ’ ಎಂದು ಶಾಸಕ ಈಶ್ವರಪ್ಪ ಸವಾಲು ಹಾಕಿದರು.

ಕಡೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡುವುದೆಲ್ಲವೂ ಕಾಂಗ್ರೆಸ್ ಪರವಾಗಿಯೇ ಇರುತ್ತದೆ. ಅದನ್ನೇ ಇಟ್ಟುಕೊಂಡು ಕಾಂಗ್ರೆಸ್‌ನವರು ಹುಯಿಲೆಬ್ಬಿಸುತ್ತಾರೆ. ನನ್ನ ಮೇಲೆಯೂ ಆಪಾದನೆ ಮಾಡಿದರು. ಆರೋಪ ಬಂದ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನಂತರ ನಿರ್ದೋಷಿಯಾಗಿ ಆಪಾದನೆಯಿಂದ ಹೊರಬಂದೆ. ಕಾಂಗ್ರೆಸ್‌ನವರಿಗೆ ನೈತಿಕತೆಯಿದ್ದರೆ ಸಾಕ್ಷಿ ಸಮೇತ ಆಪಾದಿಸಲಿ. ಸುಮ್ಮನೆ ಮಾತನಾಡುವುದು ಭಂಡತನ’ ಎಂದು ಕಿಡಿಕಾರಿದರು.

ಯಡಿಯೂರಪ್ಪನವರ ವಿರುದ್ಧ ತನಿಖೆಗೆ ಅನುಮತಿ ನೀಡಲಾಗಿದೆ. ಹಿಂದೆ ನಡೆದ ತನಿಖೆಯಲ್ಲಿ ಅವರು ತಪ್ಪಿತಸ್ಥರಲ್ಲವೆಂದು ಸಾಬೀತಾಗಿತ್ತು. ಇಲ್ಲಿಯೂ ಅವರು ನಿರ್ದೋಷಿಯಾಗಿ ಹೊರಬರುವ ವಿಶ್ವಾಸವಿದೆ ಎಂದರು.

ಜಂಗಮರಿಗೆ ಎಸ್ಟಿ ಪ್ರಮಾಣ ಪತ್ರ ಬೇಡ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ತೀರ್ಮಾನ ಮಾಡುವವರು ಸಿದ್ದರಾಮಯ್ಯನವರಲ್ಲ. ಮುಖ್ಯಮಂತ್ರಿಯಾಗಿದ್ದವರು ಈ ರೀತಿ ಮಾತನಾಡಬಾರದು. ಈಗ ಬೆಟ್ಟಕುರುಬರಿಗೆ ಎಸ್ಟಿ ಸ್ಥಾನಮಾನ ನೀಡಲು ಅನುಮೋದನೆಯಾಗಿದೆ. ಇವರು ಇಲ್ಲಿತನಕ ಮಾಡಿದ್ದೇನು? ಏನೂ ಮಾಡದೆ ಕೇವಲ ವೋಟಿಗೋಸ್ಕರ ಧರ್ಮ ಒಡೆದರು. ಯಾವುದೇ ಜನಾಂಗಕ್ಕೆ ಎಸ್ಟಿ ಸ್ಥಾನಮಾನ ದೊರೆಯಲು ಕುಲಶಾಸ್ತ್ರೀಯ ಅಧ್ಯಯನ ಬಹು ಮುಖ್ಯವಾದುದು. ಅದರ ಆಧಾರದ ಮೇಲೆ ಸ್ಥಾನಮಾನ ನಿರ್ಧಾರವಾಗುತ್ತದೆ. ಇದನ್ನು ಸಿದ್ದರಾಮಯ್ಯ ಅರಿತುಕೊಳ್ಳಲಿ ಎಂದರು.

ಆಪಾದನೆಯಿಂದ ಮುಕ್ತನಾದ ನಂತರ ಮತ್ತೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಸರವಾಗಿಲ್ಲ. ಸಚಿವ ಸ್ಥಾನ ಕೊಡಲೇಬೇಕೆಂದೇನೂ ಇಲ್ಲ. ಅದೇನಿದ್ದರೂ ಪಕ್ಷಕ್ಕೆ ಬಿಟ್ಟ ವಿಚಾರ. ಕೊಟ್ಟರೆ ಸಂತೋಷ, ಇಲ್ಲದಿದ್ದರೆ ಶಾಸಕ ಸ್ಥಾನವಂತೂ ಇದ್ದೇ ಇದೆ. ಆದರೆ, ಯಾವುದೇ ಅಸಮಾಧಾನ ಖಂಡಿತ ಇಲ್ಲ ಎಂದರು.

ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ನೋಟಿಸ್ ಬಂದಿದೆ. ಅವರು ಅಲ್ಲಿ ತನಿಖೆಗೆ ಹಾಜರಾಗಬೇಕು. ಹಿಂದೆ ಅವರ ಮನೆ, ಕಚೇರಿಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಅದರ ಬಗ್ಗೆ ಏನೂ ಹೇಳಿಲ್ಲ. ಕುಂಟು ನೆಪ ಹೇಳದೆ ತನಿಖೆಗೆ ಅವರು ಸಹಕರಿಸಿ ನೈತಿಕತೆ ಉಳಿಸಿಕೊಳ್ಳಲಿ ಎಂದರು.

ಮುರುಘಾ ಶ್ರೀಗಳ ವಿಚಾರದಲ್ಲಿ ಬಂದಿರುವ ಆಪಾದನೆ ಸುಳ್ಳಾಗಲಿ ಎಂದೇ ಈಗಲೂ ಪ್ರಾರ್ಥಿಸುತ್ತೇನೆ. ಸತ್ಯಾಸತ್ಯತೆ ಏನೆಂಬುದು ಸಮಗ್ರ ತನಿಖೆಯ ನಂತರವೇ ಹೊರಬರುತ್ತದೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT