ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗೆ ಕಾರಿನೊಂದಿಗೆ ಬಿದ್ದು ಅಳಿಯ, ಅತ್ತೆ ಸಾವು: ಆತ್ಮಹತ್ಯೆ ಶಂಕೆ

ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನ; ಶಂಕೆ
Last Updated 26 ಆಗಸ್ಟ್ 2021, 14:42 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಮಳಲಿಚನ್ನೇನಹಳ್ಳಿ ಬಳಿ ನಾಲೆಗೆ ಬುಧವಾರ ತಡರಾತ್ರಿ ಕಾರಿನಲ್ಲಿ ಬಿದ್ದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ಮಂಜುನಾಥ್‌ (47), ಸುನಂದಮ್ಮ (61) ಮೃತಪಟ್ಟಿದ್ದಾರೆ. ಧ್ಯಾನ್‌, ನೀತು ಅವರನ್ನು ರಕ್ಷಣೆ ಮಾಡಲಾಗಿದೆ.

ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಕಾರನ್ನು ಹೊರಕ್ಕೆ ತೆಗೆದಿದ್ದು, ಕಾರಿನಲ್ಲಿ ಸುನಂದಮ್ಮ ಶವ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಸಿದ್ದಾಪುರ ಬಳಿ ನಾಲೆ ದಂಡೆಯಲ್ಲಿ ಮಂಜುನಾಥ್‌ ಮೃತದೇಹ ಸಿಕ್ಕಿದೆ.

ಬೆಂಗಳೂರಿನ ಗಿರಿನಗರದ ಮಂಜುನಾಥ್‌ ಅವರು ಪತ್ನಿ ನೀತು, ಪುತ್ರ ಧ್ಯಾನ್‌, ಅತ್ತೆ ಸುನಂದಮ್ಮ ಅವರ ಜತೆ ಶಿರಸಿಗೆ ಸಂಬಂಧಿಕರ ಮನೆಗೆ ಹೋಗಿ ವಾಪಸಾಗುವಾಗ ಈ ಅವಘಡ ಸಂಭವಿಸಿದೆ. ಕುಟುಂಬ ಸಮೇತ ಆತ್ಮಹತ್ಯೆ ಯತ್ನ ಎಂದು ಪೊಲೀಸರು ಶಂಕಿಸಿದ್ದಾರೆ.

ಮಂಜುನಾಥ್‌ ಅವರು ಮೂಲತಃ ಬೀರೂರಿನವರು. ಭದ್ರಾವತಿ ತಾಲ್ಲೂಕಿನ ಹಳೆಜೇಡಿಕಟ್ಟೆಯ ನೀತು ಅವರನ್ನು ವಿವಾಹವಾಗಿದ್ದರು. ಉದ್ಯಮ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರು.

‘ಸ್ಥಳೀಯರು, ಅರಣ್ಯ ಸಿಬ್ಬಂದಿ ಹಗ್ಗ ಬಳಸಿ ನೀತು, ಧ್ಯಾನ್‌ನನ್ನು ನಾಲೆಯಿಂದ ಹೊರಕ್ಕೆ ಎಳೆದಿದ್ದಾರೆ. ಅಷ್ಟರೊಳಗೆ ಕಾರು ಮುಳುಗಿ, ಇನ್ನಿಬ್ಬರು ನೀರುಪಾಲಾಗಿದ್ದಾರೆ. ಅವಘಡಕ್ಕೂ ಮುನ್ನ ಮಂಜುನಾಥ್‌ ಅವರು ಸಂಬಂಧಿಕರಿಗೆ ಫೋನ್‌ ಮಾಡಿ ಮಾತಾಡಿದ್ದರು ಎನ್ನಲಾದ ಆಡಿಯೊ ವೈರಲ್‌ ಆಗಿದೆ. ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ತರೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಡಿಯೊ ವೈರಲ್‌...

ಅವಘಡಕ್ಕೂ ಮುನ್ನ ಮಂಜುನಾಥ್‌ ಅವರು ಸಂಬಂಧಿಕರಿಗೆ ಫೋನ್‌ ಮಾಡಿ ಮಾತಾಡಿದ್ದರು ಎನ್ನಲಾದ ಆಡಿಯೊ ವೈರಲ್‌ ಆಗಿದ್ದು, ಅದರಲ್ಲಿನ ಸಂಭಾಷಣೆ ಇಂತಿದೆ.

‘ಮಾಮ, ನಿಮ್ಮಲ್ಲಿ ಒಬ್ಬರಿಗೆ ಏನಾದರೂ ಆದ್ರೆ ನಾವು ಬದಕಲ್ಲ ಎಂಬುದು ನಿಮಗೆ ಗೊತ್ತಿದೆ. ಏನೇ ಲಾಸ್‌ ಆದರೂ ಪರವಾಗಿಲ್ಲ ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ. ಯಾಕೆ ಮಾಮ, ಏನಾಯ್ತು ಮಾಮ... ಎಲ್ಲಿದ್ದೀರಾ, ಏನಾದರೂ ತೆಗೆದುಕೊಂಡಿದ್ದೀರಾ ಹೇಳಿ’ ಎಂದು ಮಹಿಳೆಯೊಬ್ಬರು ಕೇಳುವ ಧ್ವನಿ ಆಡಿಯೊದಲ್ಲಿದೆ.

‘ಇನ್ನು 10 ನಿಮಿಷದಲ್ಲಿ ‘ಲಾಸ್ಟ್‌ ಲೊಕೇಷನ್‌’ ನಿನಗೆ ಕಳಿಸುತ್ತೇನೆ. ನನಗೆ ತುಂಬಾ ಮೋಸ ಆಯ್ತು. ನನ್ನ ಹೆಂಡತಿಗೆ ನನ್ನ ಬಿಟ್ಟರೆ ಪ್ರಪಂಚ ಇಲ್ಲ. ನಾವಿಬ್ಬರೂ ಇಲ್ಲ ಅಂದ್ರೆ ನನ್ನ ಮಗ ಇಲ್ಲ. ಅಮ್ಮ (ಅತ್ತೆ) ನಮಗೋಸ್ಕರವೇ ಇರೋದು. ಎಷ್ಟೇ ವಿಶ್ವಾಸ ಇದ್ದರೂ ಯಾರನ್ನು ಬ್ಲೈಂಡ್‌ ಆಗಿ ನಂಬಬೇಡ...’ ಎಂದು ಪುರುಷರೊಬ್ಬರು ಹೇಳುವ ಧ್ವನಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT