ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು: ಅಪಾಯಕಾರಿ ತಿರುವುಗಳಲ್ಲಿ ಇಲ್ಲ ತಡೆಗೋಡೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ಆತಂಕದಲ್ಲಿ ಸವಾರರು
Published 6 ಡಿಸೆಂಬರ್ 2023, 6:43 IST
Last Updated 6 ಡಿಸೆಂಬರ್ 2023, 6:43 IST
ಅಕ್ಷರ ಗಾತ್ರ

ಆಲ್ದೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೆಡೆ ಗುಂಡಿಗಳು ತುಂಬಿಕೊಂಡಿದ್ದರೆ, ಇನ್ನೊಂದೆಡೆ ಅಪಾಯಕಾರಿ ತಿರುವುಗಳಲ್ಲಿ ತಡೆಗೋಡೆಗಳೇ ಇಲ್ಲ. ವಾಹನ ಸವಾರರು ಜೀವ ಬಿಗಿ ಹಿಡಿದು ಪ್ರಯಾಣ ಮಾಡಬೇಕಾಗಿದೆ.

ಚಿತ್ರದುರ್ಗ, ಹೊಸದುರ್ಗ, ಕಡೂರು ಮಾರ್ಗವಾಗಿ ಬಯಲುಸೇಮೆಯನ್ನು ದಾಟಿ ಮಲೆನಾಡಿನ ನಡುವೆ ಹಾದು ಹೋಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–173 ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ. 

ಮಲೆನಾಡಿನಲ್ಲಿ ಬೆಡ್ಡಗುಡ್ಡಗಳ ನಡುವೆ ಹಾದು ಹೋಗುವ ಈ ರಸ್ತೆಯಲ್ಲಿ ಅಲ್ಲಲ್ಲಿ ಅಪಾಯಕಾರಿ ತಿರುವುಗಳಿವೆ. ರಸ್ತೆ ಬದಿಯಲ್ಲಿ ನೂರಾರು ಅಡಿಗಳಷ್ಟು ಕಂದಕಗಳಿದ್ದು, ಸವಾರರು ಸ್ವಲ್ಪ ನಿಯಂತ್ರಣ ತಪ್ಪಿದರೂ ವಾಹನಗಳು ಪ್ರಪಾತಕ್ಕೆ ಇಳಿಯುವುದು ಖಚಿತ. 

ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆಗೆ ಹಾದು ಹೋಗುವ ನಡುವೆ ಸಿಗುವ ಗ್ರಾಮಗಳಾದ ವಸ್ತಾರೆ, ಹಾಂದಿ, ಭೂತನಕಾಡು, ಕುದುರೆಗುಂಡಿ ಮುಂತಾದ ಕಡೆಗಳ ಹೆದ್ದಾರಿ ಬದಿಗಳಲ್ಲಿ ಅಪಾಯಕಾರಿ ತಿರುವುಗಳಿವೆ. ಕೆವಡೆಡೆ 2 ಅಡಿ ಎತ್ತರದಲ್ಲಿ ಹಳೆಯ ಕಾಲದ ಕಲ್ಲಿನ ತಡೆ ಕಂಬಗಳಿವೆ. ಲಾರಿ, ಬಸ್ಸುಗಳ ರೀತಿಯ ಭಾರಿ ವಾಹನಗಳು ನಿಯಂತ್ರಣ ತಪ್ಪಿದರೆ ತಡೆ ಕಂಬಗಳು ಅಪಘಾತ ತಡೆಯಲು ಆಗುವುದಿಲ್ಲ. ಈ ತಡೆ ಕಂಬಗಳು ಇದ್ದರೂ ಪ್ರಯೋಜನ ಇಲ್ಲ ಎಂದು ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಒಂದು ಅಡಿಗೂ ಎತ್ತರವಾದ ದೊಡ್ಡ ಗುಂಡಿಗಳು ರಸ್ತೆಗಳಲ್ಲಿವೆ. ಹದಗೆಟ್ಟ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡುವುದು ಕಷ್ಟ. ಆಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಹೋದರೆ ಅಪಾಯಕ್ಕೆ ಸಿಲುಕಬೇಕಾದ ಸ್ಥಿತಿ ಇದೆ. ಕೆಲವೆಡೆ ರಸ್ತೆ ಬದಿ ಮಣ್ಣು ಕುಸಿದಿದ್ದು, ಈ ರೀತಿಯಲ್ಲಿ ಸಂಚರಿಸುವ ವಾಹನ ಸವಾರರ ಜೀವಕ್ಕೆ ಸುರಕ್ಷತೆ ಇಲ್ಲವಾಗಿದೆ ಎಂದು ಸ್ಥಳೀಯರಾದ ಮಾಗೋಡು ಎಂ.ಬಿ. ಜಗದೀಶ್ ದೂರಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಡೆಗೋಡೆ ನಿರ್ಮಿಸಲು ಕಾರ್ಯಪ್ರವೃತ್ತರಾಗಬೇಕು. ಇದೇ ರಸ್ತೆಯಲ್ಲಿ ಶಾಸಕರು, ಸಂಸದರು ಸೇರಿ ಎಲ್ಲಾ ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಜನಸಾಮಾನ್ಯರ ಕಷ್ಟಗಳು ಅವರ ಅರಿವಿಗೆ ಬಂದರೂ ಏಕೆ ಸ್ಪಂದಿಸುವುದಿಲ್ಲ ಎಂದು ಪ್ರಶ್ನಿಸಿದರು.

ಈ ರಸ್ತೆ ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ, ಶಿಶಿಲಾ, ಎತ್ತಿನ ಭುಜ ಸೇರಿ ಇನ್ನಿತರ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ಸಾಗುತ್ತಾರೆ.  ಚಿಕ್ಕಮಗಳೂರಿನ ಜನರು ಹೆಚ್ಚಿನ ಮಂಗಳೂರಿನ ಆಸ್ಪತ್ರೆಗಳಿಗೆ ಇದೇ ರಸ್ತೆಯಲ್ಲಿ ತೆರಲಬೇಕು. ಆಂಬುಲೆನ್ಸ್‌ಗಳು ತೆರಳಲು ಈ ರಸ್ತೆ ಯೋಗವಾಗಿಲ್ಲ ಎಂದರು.

ಗುಂಡಿ ಸರಿಪಡಿಸಿ ತಡೆಗೋಡೆಗಳನ್ನು ನಿರ್ಮಿಸಬೇಕು. ದೊಡ್ಡ ಮಟ್ಟದಲ್ಲಿ ಅಪಘಾತ ನಡೆದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಈಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸ್ಥಳೀಯರಾದ ಕೆ.ಮೂರ್ತಿ, ಎ.ಆರ್. ನಾಗರಾಜ್, ಮುಸ್ತಫ, ಜೀವನ್ ಆಗ್ರಹಿಸಿದರು.

ಆಲದಗುಡ್ಡೆ ಗ್ರಾಮದ ಬಳಿ ಗುಂಡಿಯಲ್ಲಿ ಕಾರು ಸಿಲುಕಿ ಸಂಚಾರ ದಟ್ಟಣೆ ಉಂಟಾಗಿರುವುದು
ಆಲದಗುಡ್ಡೆ ಗ್ರಾಮದ ಬಳಿ ಗುಂಡಿಯಲ್ಲಿ ಕಾರು ಸಿಲುಕಿ ಸಂಚಾರ ದಟ್ಟಣೆ ಉಂಟಾಗಿರುವುದು

‘ರಸ್ತೆ ಅಭಿವೃದ್ಧಿಗೆ ಡಿಪಿಆರ್’

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಡೂರಿನಿಂದ ಮೂಗ್ತಿಹಳ್ಳಿ ತನಕ ಪೂರ್ಣಗೊಂಡಿದ್ದು ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ ತನಕ ರಸ್ತೆ ನಿರ್ಮಾಣಕ್ಕೆ ಡಿಪಿಆರ್(ಸಮಗ್ರ ಯೋಜನಾ ವರದಿ) ಸಿದ್ಧವಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿಂತಾಮಣಿ ಕಾಂಬ್ಳೆ ತಿಳಿಸಿದರು. ‘ಈ ಹಿಂದೆ ಸಿದ್ಧವಾಗಿದ್ದ ಡಿಪಿಆರ್‌ನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲು ಸೂಚಿಸಲಾಗಿದೆ. ಒಂದು ತಿಂಗಳಲ್ಲಿ ಡಿಪಿಆರ್ ಸಲ್ಲಿಸಲು ಸಮಯ ನಿಗದಿಯಾಗಿದೆ. ಹೊಸ ರಸ್ತೆ ಅಭಿವೃದ್ಧಿಗೆ ₹300ರಿಂದ ₹350 ಕೋಟಿ ವೆಚ್ಚವಾಗಲಿದೆ’ ಎಂದರು. ಬಳಿಕ ಟೆಂಡರ್ ಕರೆದು ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಚಿಕ್ಕಪುಟ್ಟ ದುರಸ್ತಿ ಮಾಡಿದರೂ ಹೊಸ ರಸ್ತೆ ನಿರ್ಮಾಣ ಆಗುತ್ತಿರುವುದರಿಂದ ಪ್ರಯೋಜನ ಆಗುವುದಿಲ್ಲ. ಈಗಾಗಲೇ ಗುಂಡಿಗಳನ್ನು ಮತ್ತು ಹೆದ್ದಾರಿಗಳಲ್ಲಿ ಬೆಳೆದಿರುವ ಗಿಡ ಗಂಟಿ ಪೊದೆಗಳನ್ನು ತೆರವುಗೊಳಿಸಲು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನದ ಕೊರತೆ ಇದ್ದರೂ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT