ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: 15 ವರ್ಷಗಳಲ್ಲಿ 30 ಸಾವಿರ ಹೆಕ್ಟೇರ್‌ ಭತ್ತದ ಕ್ಷೇತ್ರ ಕಣ್ಮರೆ

Published 9 ಅಕ್ಟೋಬರ್ 2023, 8:21 IST
Last Updated 9 ಅಕ್ಟೋಬರ್ 2023, 8:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಒಂದು ಕಾಲದಲ್ಲಿ ಭತ್ತದ ಕಣಜ, ಅನ್ನದ ಬಟ್ಟಲಾಗಿದ್ದ ಮಲೆನಾಡು ಈಗ ಬರಿದಾಗಿದೆ. ಭತ್ತದ ಬೆಳೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದ್ದು, ಹದಿನೈದು ವರ್ಷಗಳಲ್ಲಿ 30 ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ಕ್ಷೇತ್ರ ಕಣ್ಮರೆಯಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲ್ಲೂಕಿನಲ್ಲಿ ಮಳೆ ಆಶ್ರಯದಲ್ಲಿ ಭತ್ತ ಬೆಳೆಯುತ್ತಿದ್ದರೆ, ತರೀಕೆರೆ ತಾಲ್ಲೂಕಿನಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ.

ಕೂಲಿ ಕಾರ್ಮಿಕರ ಕೊರತೆ, ಹವಾಮಾನ ವೈಪರಿತ್ಯದಿಂದ ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ವಾಣಿಜ್ಯ ಬೆಳೆಯತ್ತ ಒಲವು ತೋರುತ್ತಿದ್ದು, ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಶುಂಠಿ, ಕಾಫಿ ಮತ್ತು ಅಡಿಕೆ ಬೆಳೆಗಳು ಆಕ್ರಮಿಸಿಕೊಳ್ಳುತ್ತಿವೆ.

ಜಿಲ್ಲೆಗೆ ಸಾಕಾಗುವಷ್ಟು ಅನ್ನ ಇದೇ ನೆಲದಲ್ಲಿ ಬೆಳೆಯಲಾಗುತ್ತಿತ್ತು. ಈಗ ಅಕ್ಕಿಯನ್ನು ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮಲೆಬೆನ್ನೂರು, ದಾವಣಗೆರೆ, ಗಂಗಾವತಿ, ಕಾರಟಗಿ, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಿಂದ ಜಿಲ್ಲೆಗೆ ಅಕ್ಕಿ ಪೂರೈಕೆಯಾಗುತ್ತಿದೆ. ಭತ್ತ ಬೆಳೆದು ನಾಡಿಗೆ ಅನ್ನ ನೀಡುತ್ತಿದ್ದ ರೈತರು ಈಗ ದುಬಾರಿಯಾದರೂ ಅಕ್ಕಿ ಖರೀದಿಸಿ ತರಬೇಕಾದ ಸ್ಥಿತಿ ಇದೆ.

ಜಿಲ್ಲೆಯಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲೇ ಹೆಚ್ಚು ಭತ್ತದ ಬೆಳೆ ಬೆಳೆಯಲಾಗುತ್ತಿತ್ತು. 2009–10ನೇ ಸಾಲಿನಲ್ಲಿ 10 ಸಾವಿರ ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ 2 ಸಾವಿರ ಹೆಕ್ಟೇರ್‌ಗೆ ಕುಸಿತವಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9,663 ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ 1,950 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಇನ್ನೂ ನೀರಾವರಿ ಆಶ್ರಯದಲ್ಲಿ ತರೀಕೆರೆ ತಾಲ್ಲೂಕಿನಲ್ಲಿ 7,750 ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ 1,055 ಹೆಕ್ಟೇರ್‌ಗೆ ಇಳಿಕೆಯಾಗಿದೆ.

ಭತ್ತದ ಬೆಳೆ ಇದ್ದ ಜಾಗಕ್ಕೆ ಅಡಿಕೆ, ಕಾಫಿ, ಮೆಣಸು, ಜನವಸತಿ ಬಡಾವಣೆಗಳು ಆಕ್ರಮಿಸಿಕೊಳ್ಳುತ್ತಿವೆ. ಅನ್ನದ ಬಟ್ಟಲು ಖಾಲಿಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ತರಿಸಿದೆ.

ಪೂರಕ ಮಾಹಿತಿ: ಅನಿಲ್ ಮೊಂತೆರೊ, ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಎಚ್‌.ಎಂ.ರಾಜಶೇಖರಯ್ಯ, ಕೆ.ವಿ.ನಾಗರಾಜ್, ಕೆ.ಎನ್.ರಾಘವೇಂದ್ರ

ಎನ್.ಆರ್.ಪುರ ತಾಲ್ಲೂಕಿನಲ್ಲಿ ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಅಡಿಕೆ ತೋಟಗಳು ತಲೆ ಎತ್ತಿರುವುದು
ಎನ್.ಆರ್.ಪುರ ತಾಲ್ಲೂಕಿನಲ್ಲಿ ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಅಡಿಕೆ ತೋಟಗಳು ತಲೆ ಎತ್ತಿರುವುದು
ಮೂಡಿಗೆರೆಯ ಹೆಸ್ಗಲ್ ಗ್ರಾಮದ ಬಳಿ ಭತ್ತ ಬೆಳೆಯುತ್ತಿದ್ದ ಪ್ರದೇಶದಲ್ಲಿ ಬಡಾವಣೆ ನಿರ್ಮಾಣವಾಗಿರುವುದು
ಮೂಡಿಗೆರೆಯ ಹೆಸ್ಗಲ್ ಗ್ರಾಮದ ಬಳಿ ಭತ್ತ ಬೆಳೆಯುತ್ತಿದ್ದ ಪ್ರದೇಶದಲ್ಲಿ ಬಡಾವಣೆ ನಿರ್ಮಾಣವಾಗಿರುವುದು
ಕಡಿಮೆ ಇಳುವರಿ ಕಾರ್ಮಿಕರ ಕೊರತೆ
ಕೊಟ್ಟಿಗೆಹಾರ: ಕಾಫಿನಾಡಿನಲ್ಲಿ ಭತ್ತದ ಕೃಷಿಯು ಸೊರಗುತ್ತಾ ಸಾಗಿದೆ. ನಾಲ್ಕು ದಶಕಗಳ ಹಿಂದೆ ನಾಲ್ಕು ಸಾವಿರ ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಕೃಷಿ ಈಗ 750 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಇಳುವರಿ ಸಿಗದೆ ಒಂದೆಡೆ ಭತ್ತದ ಗದ್ದೆಗಳನ್ನು ಪಾಳು ಬಿಡುತ್ತಿದ್ದರೆ ಕಾರ್ಮಿಕರ ಕೊರತೆಯೂ ರೈತರ ಉತ್ಸಾಹ ಕುಗ್ಗಿಸಿದೆ. ಯಾಂತ್ರಿಕೃತ ಭತ್ತದ ಕೃಷಿ ಬೆಂಬಲ ಬೆಲೆ ಸೇರಿ ಕೃಷಿ ಇಲಾಖೆ ಬೆಂಬಲ ನೀಡುತ್ತಿದ್ದರೂ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವು ಕೃಷಿ ಭೂಮಿ ಬಡಾವಣೆಗಳಾಗುತ್ತಿವೆ. ‘ಕೃಷಿ ಇಲಾಖೆ ನೀಡುವ ಬಿತ್ತನೆ ಬೀಜ ಪಡೆದು ಕೃಷಿ ಮಾಡಿದರೆ ಭತ್ತದ ಕೃಷಿ ರೈತರ ಕೈ ಹಿಡಿಯುತ್ತದೆ. ಯಾಂತ್ರೀಕೃತ ಕೃಷಿಯಿಂದ ಕಾರ್ಮಿಕರ ಕೊರತೆ ನೀಗಿಸಬಹುದು’ ಎನ್ನುತ್ತಾರೆ ಬಣಕಲ್ ಕೃಷಿ ಅಧಿಕಾರಿ ಎಂ.ಆರ್.ವೆಂಕಟೇಶ್.
ವಾಣಿಜ್ಯ ಬೆಳೆ ಭರಾಟೆ: ಕಾಣೆಯಾದ ಭತ್ತದ ಕೃಷಿ
ಕಳಸ: ತಾಲ್ಲೂಕಿನಲ್ಲಿ 25 ವರ್ಷಗಳ ಹಿಂದೆ ಶೇ 25ರಷ್ಟು ಇದ್ದ ಭತ್ತದ ಗದ್ದೆಗಳು ಈಗಾಗಲೇ ಅಡಿಕೆ ಕಾಫಿ ತೋಟಗಳಾಗಿವೆ. 12 ಸಾವಿರ ಎಕರೆ ಭತ್ತದ ಗದ್ದೆಯ ಪೈಕಿ 3 ಸಾವಿರ ಎಕರೆ ತೋಟಗಳಾಗಿ ಪರಿವರ್ತನೆ ಆಗಿವೆ. ಉಳಿದ ಭತ್ತದ ಗದ್ದೆಗಳ ಪೈಕಿ ಶೇ 10ರಷ್ಟು ಪಾಳು ಬಿದ್ದಿವೆ. ಭತ್ತದ ಕೃಷಿಗೆ ಹೆಚ್ಚಿನ ಶ್ರಮ ಕಡಿಮೆ ಲಾಭ ಎಂಬ ಕಾರಣಕ್ಕೆ ಆಕರ್ಷಣೆ ಕಳೆದುಕೊಂಡಿದೆ. ಭತ್ತದ ಕೃಷಿಯ ಬದಲು ಅಡಿಕೆ ಕಾಫಿ ಕೃಷಿ ಮಾಡಿದರೆ 10 ಪಟ್ಟು ಲಾಭ ಗಳಿಸಬಹುದು ಎಂಬ ಆಲೋಚನೆ ರೈತರಲ್ಲಿ ಬೆಳೆದಿದೆ. ಉಳುಮೆಗಾಗಿ ಕೋಣ ಎತ್ತು ಸಾಕುವವರು ಗದ್ದೆ ಕೆಲಸ ಮಾಡುವವರು ಈಗ ಕೃಷಿ ಕುಟುಂಬಗಳಲ್ಲಿ ಇಲ್ಲವೇ ಇಲ್ಲ ಎಂಬಂತಾಗಿದೆ. ಕೃಷಿ ಪರಿಕರಗಳು ಗೆದ್ದಲು ಹಿಡಿಯುತ್ತಿವೆ. ಈಗ ಸ್ಥಳೀಯ ಅಕ್ಕಿ ದರ ₹60 ಆಗಿದ್ದು ಮುಂದಿನ ಸಾಲಿನಿಂದ ಭತ್ತದ ಕೃಷಿ ಹೆಚ್ಚಾಗುವ ನಿರೀಕ್ಷೆ ಇದೆ.
ಜಾನುವಾರು ಮೇವಿಗೂ ಕೊರತೆ
ಕೊಪ್ಪ: ತಾಲ್ಲೂಕಿನಲ್ಲಿ ಭತ್ತ ಬೆಳೆಯುವ ಕೃಷಿಕರು ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯತ್ತ ಆಕರ್ಷಿತರಾಗಿದ್ದು ಬಹುತೇಕ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಟ್ಟಿವೆ. ಹತ್ತು ವರ್ಷಗಳ ಹಿಂದೆ ಕೇರಳದಿಂದ ಬಂದ ಶುಂಠಿ ಬೆಳೆಗಾರರು ಕೃಷಿಕರ ಮನವೊಲಿಸಿ ಭತ್ತದ ಗದ್ದೆಗಳನ್ನು ಲೀಸ್‌ಗೆ ಪಡೆದುಶುಂಠಿ ಬೆಳೆದರು. ಬಳಿಕ ಬರಡು ಭೂಮಿಯಂತಾದ ಭತ್ತದ ಗದ್ದೆಗಳನ್ನು ಕೃಷಿಕರು ಮತ್ತೆ ಭತ್ತ ಬೆಳೆಯುವತ್ತ ಆಸಕ್ತಿ ತೋರಲಿಲ್ಲ. ಪ್ರಸ್ತುತ ಭತ್ತ ಬೆಳೆಯಲು ತಗಲುವ ಖರ್ಚು ಕೂಡ ದುಪ್ಪಟ್ಟಾಗಿದೆ. ಭತ್ತದ ಬೆಳೆ ಕಡಿಮೆಯಾಗಿರುವುದು ದನಗಳ ಮೇವಿಗೆ ಪರದಾಡುವಂತಾಗಿದ್ದು ಇತ್ತೀಚೆಗೆ ಬಹುತೇಕರು ತಮ್ಮ ಹಸುಗಳನ್ನು ಗೋಶಾಲೆಗೆ ಕೊಡುತ್ತಿದ್ದಾರೆ. ‘2022-23ರಲ್ಲಿ 2700 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಇದೆ. ಅಡಿಕೆ ಬೆಳೆ ವಿಸ್ತರಣೆಗೆ ಮತ್ತು ನಗರ ಪ್ರದೇಶದಲ್ಲಿ ನಿವೇಶನಕ್ಕಾಗಿ 200 ಹೆಕ್ಟೇರ್ ಪ್ರದೇಶದಷ್ಟು ಭತ್ತ ಬೆಳೆ ವಿಸ್ತೀರ್ಣ ಕಡಿಮೆಯಾಗಿದೆ. 2023-24ನೇ ಸಾಲಿನಲ್ಲಿ ಅಂದಾಜು 2500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಯಾಗಿದೆ’ ಎಂದು ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಟೇಶ್ ಅಂದಾಜಿಸುತ್ತಾರೆ.
ಲಾಭದಾಯಕ ಬೆಳೆಯತ್ತ ರೈತರ ಚಿತ್ತ
ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಅಮೃತಾಪುರ ಹೋಬಳಿಯಲ್ಲಿ ಭತ್ತಕ್ಕೆ ಬದಲಾಗಿ ರೃತರು ಲಾಭದಾಯಕವಾದ ಅಡಿಕೆಗೆ ವಾಲಿದ್ದಾರೆ. ಭತ್ತದ ಕೃಷಿಗೆ ಇತ್ತಿಚಿನ ದಿನಗಳಲ್ಲಿ ರೋಗಬಾದೆ ಖರ್ಚು ಹೆಚ್ಚಳ ಕಡಿಮೆ ಲಾಭ ಇರುವುದರಿಂದ ವಾಣಿಜ್ಯ ಬೆಳೆ ಅಡಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. 2022ರಲ್ಲಿ 21613 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಅಡಿಕೆ 2023ರಲ್ಲಿ 23412 ಹೆಕ್ಟೇರ್ ಪ್ರದೇಶಕ್ಕೆ ಸುಮಾರು 1799 ಹೆಕ್ಟೇರ್ ವಿಸ್ತರಣೆಯಾಗಿದೆ. ಕಾಳು ಮೆಣಸು ಜಾಯಿಕಾಯಿ ಮಾವು ಬೆಳೆಯಲು ಆರಂಭಿಸಿದ್ದಾರೆ. ಕ್ರಮೇಣ ಭತ್ತದ ಬೆಳೆ ಕಡಿಮೆಯಾಗುತ್ತಿದೆ. ಭತ್ತದ ಬೆಳೆಗೆ ಸರ್ಕಾರ ಉತ್ತೇಜನ ನೀಡಬೇಕು ಎನ್ನುತ್ತಾರೆ ರೈತ ಮುಖಂಡ ಹಳಿಯೂರು ಸೋಮಶೇಖರಯ್ಯ.
ಖಾಲಿಯಾದ ಭತ್ತದ ಕಣಜ
ನರಸಿಂಹರಾಜಪುರ: ಭದ್ರಾ ಅಣೆಕಟ್ಟು ನಿರ್ಮಾಣಕ್ಕೂ ಮುನ್ನ ತಾಲ್ಲೂಕಿನಲ್ಲಿ ಅತಿಹೆಚ್ಚು ಭತ್ತ ಬೆಳೆಯುತ್ತಿದ್ದರಿಂದ ರಾಜ್ಯದಲ್ಲಿಯೇ ಭತ್ತದ ಕಣ ಎಂದು ಹೆಸರುವಾಸಿಗಿತ್ತು. ಹಲವು ವರ್ಷಗಳ ಹಿಂದೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 2009–10ರಲ್ಲಿ 6 ಸಾವಿರ ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ ಎರಡೂವರೆ ಸಾವಿರ ಹೆಕ್ಟೇರ್‌ನ ಆಸುಪಾಸಿನಲ್ಲಿದೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಭತ್ತದ ಬೆಳೆಯಿಂದ ವಿಮುಖರಾಗುತ್ತಿರುವ ರೈತರು ನೀರಾವರಿ ಜಮೀನಿನಲ್ಲಿ ಅಧಿಕ ಲಾಭ ತಂದು ಕೊಡುವ ರಬ್ಬರ್ ಬೆಳೆ ಬೆಳೆಯಲು ಆರಂಭಿಸಿದರು. ಇದಕ್ಕೂ ಬೆಲೆ ಕುಸಿತವಾಗುತ್ತಿರುವುದರಿಂದ ಈಗ ಅಡಿಕೆ ಬೆಳೆಯಲು ಆರಂಭಿಸಿದ್ದಾರೆ.  ‘ಭತ್ತ ಬೆಳೆಯಲು ತಗಲುವ ವೆಚ್ಚ ಹೆಚ್ಚಾಗುತ್ತಿರುವುದು ಮಳೆ ಕೊರತೆಯಿಂದ ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿ ಪ್ರಕಾಶ್ ಹೇಳುತ್ತಾರೆ. ‘ಮಾಡಿದ ವೆಚ್ಚಕ್ಕಿಂತ ಒಂದು ಪಟ್ಟಾದರೂ ಲಾಭ ಬಂದರೆ ಭತ್ತ ಬೆಳೆಯಲು ರೈತರು ಆಸಕ್ತಿ ತೋರಿಸುತ್ತಾರೆ. ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಉಂಟಾಗಲಿದೆ’ ಎಂದು ರೈತ ಸುನಿಲ್ ಆತಂಕ ವ್ಯಕ್ತಪಡಿಸುತ್ತಾರೆ.
ಕಾಫಿ ಮೆಣಸು ಅಡಿಕೆಯತ್ತ ರೈತರು
ಶೃಂಗೇರಿ: ತಾಲ್ಲೂಕಿನ 30 ವರ್ಷಗಳ ಹಿಂದೆ ಇದ್ದ ಭತ್ತದ ಗದ್ದೆಗಳ ಪೈಕಿ ಶೇ 60ರಷ್ಟು ಗದ್ದೆಗಳು ಈಗ ಕಾಫಿ ಮೆಣಸು ಮತ್ತು ಅಡಿಕೆ ತೋಟಗಳಾಗಿವೆ.  ಉಳುಮೆ ಮಾಡಲು ಕೋಣ ಮತ್ತು ಎತ್ತುಗಳ ಸಾಕಾಣಿಕೆಯೂ ಇಲ್ಲವಾಗಿದೆ. ಇನ್ನೂ ಪಟ್ಟಣಕ್ಕೆ ಹತ್ತಿರ ಇರುವ ರಸ್ತೆ ಬದಿ ಇರುವ ಗದ್ದೆಗಳು ಬಡಾವಣೆಗಳಾಗಿ ಮಾರ್ಪಾಡಾಗುತ್ತಿವೆ. ರೈತರ ಮಕ್ಕಳು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ತೆರಳುತ್ತಿದ್ದು ಹಳ್ಳಿಗಳಲ್ಲಿ ಭತ್ತದ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಕಾಡು ಪ್ರಾಣಿ ಹಾವಳಿ: ಭತ್ತದ ಬೆಳೆ ಇಳಿಮುಖ
ಮೂಡಿಗೆರೆ: ತಾಲ್ಲೂಕಿನಲ್ಲಿ ಒಂದು ದಶಕದಲ್ಲಿ ಗಣನೀಯವಾಗಿ ಭತ್ತದ ಬೆಳೆ ಇಳಿಮುಖವಾಗಿದೆ. ಎರಡು ದಶಕಗಳ ಹಿಂದೆ 16 ಸಾವಿರ ಹೆಕ್ಟೇರ್‌ನಷ್ಟಿದ್ದ ಭತ್ತ ಬೆಳೆಯುವ ಪ್ರದೇಶ ಈಗ ಎರಡು ಸಾವಿರ ಹೆಕ್ಟೇರ್‌ಗೆ ಇಳಿದಿದೆ.   ತಾಲ್ಲೂಕಿನಲ್ಲಿ ಭತ್ತದ ಬೆಳೆ ನಶಿಸಲು ಪ್ರಮುಖವಾಗಿ ವನ್ಯ ಪ್ರಾಣಿಗಳ ಹಾವಳಿಯೂ ಕಾರಣ. ಕಾಡಾನೆ ಕಾಡುಕೋಣ ನವೀಲು ಕಾಡುಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದೆ ರೈತರಿಗೆ ಸವಾಲಿನ ಕೆಲಸ. ಇದರೊಂದಿಗೆ ಕಾರ್ಮಿಕರ ಕೊರತೆ ದುಬಾರಿ ಕೂಲಿ ಅಕಾಲಿಕ ಮಳೆಯು ಭತ್ತದ ಬೆಳೆ ನಶಿಸಲು ಕಾರಣವಾಗಿದೆ. ಭತ್ತದ ಗದ್ದೆಗಳನ್ನು ಅಡಿಕೆ ಕಾಫಿ ತೋಟಗಳನ್ನಾಗಿ ಮಾರ್ಪಡಿಸುತ್ತಿವೆ. ತಾಲ್ಲೂಕಿನಲ್ಲಿ ಹದಿನಾರು ಕಡೆಗಳಲ್ಲಿ ಭತ್ತದ ಗದ್ದೆಗಳನ್ನು ಭೂಪರಿವರ್ತನೆ ಮಾಡಿಸಿ ಬಡಾವಣೆ ನಿರ್ಮಿಸಲಾಗಿದೆ. ತಾಲ್ಲೂಕು ಕೇಂದ್ರ ಹೋಬಳಿ ಕೇಂದ್ರಗಳ ಅಕ್ಕಪಕ್ಕದ ಭತ್ತದ ಗದ್ದೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT