ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

ಚಿಕ್ಕಮಗಳೂರು | ವರ್ಷವಿಡೀ ಮಳೆ: ಗುಂಡಿಗಳ ಪಯಣ ಉಳಿಸಿ ಹೋದ 2025

Published : 29 ಡಿಸೆಂಬರ್ 2025, 5:14 IST
Last Updated : 29 ಡಿಸೆಂಬರ್ 2025, 5:14 IST
ಫಾಲೋ ಮಾಡಿ
Comments
ಕಳಸ–ಕುದುರೆಮುಖ ರಸ್ತೆ ಸಂಪೂರ್ಣ ಹಾಳಾಗಿರುವುದು(ಸಂಗ್ರಹ ಚಿತ್ರ)
ಕಳಸ–ಕುದುರೆಮುಖ ರಸ್ತೆ ಸಂಪೂರ್ಣ ಹಾಳಾಗಿರುವುದು(ಸಂಗ್ರಹ ಚಿತ್ರ)
ಅರಣ್ಯ ಇಲಾಖೆ ಗುಂಡಿಗೆ ಬಲಿಯಾದ ಚಿರತೆ
ಅರಣ್ಯ ಇಲಾಖೆ ಗುಂಡಿಗೆ ಬಲಿಯಾದ ಚಿರತೆ
ಅಂತ್ಯ ಕಂಡ ನಕ್ಸಲ್ ಹೋರಾಟ
25 ವರ್ಷಗಳ ಹಿಂದೆ ಮಲೆನಾಡಿನಲ್ಲಿ ಆರಂಭವಾದ ನಕ್ಸಲ್ ಹೋರಾಟ 2025ರಲ್ಲಿ ಅಂತ್ಯಕಂಡಿತು. ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆ ಬಳಿಕ ತೀವ್ರತೆ ಕಳೆದುಕೊಂಡಿದ್ದ ನಕ್ಸಲ್ ಚಳವಳಿ 2025ರಲ್ಲಿ ಕೊನೆಯಾಯಿತು. ಕೊಪ್ಪ ತಾಲ್ಲೂಕಿನ ಮೇಗೂರು ಕಾಡಿನಿಂದ ಜ.8ರಂದು ಹೊರ ಬಂದ ಆರು ನಕ್ಸಲ್ ಹೋರಾಟಗಾರರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದರು. ಆ ಮೂಲಕ ನಕ್ಸಲ್ ಹೋರಾಟ ಅಂತ್ಯಗೊಂಡಿತು. ಏಕಾಂಗಿಯಾಗಿದ್ದ ಕೋಟೆಹೊಂಡ ರವಿ ಫೆ.1ರಂದು ಶರಣಾದರು. ಆ ಮೂಲಕ ಇಡೀ ನಕ್ಸಲ್ ಹೋರಾಟ ಮಲೆನಾಡಿನಲ್ಲಿ ಅಂತ್ಯವಾಯಿತು. ರಾಜ್ಯ ನಕ್ಸಲ್ ಮುಕ್ತ ನಾಡು ಎಂದು ಘೋಷಣೆಯಾಯಿತು. ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್‌) ಕೂಡ ವಿಸರ್ಜನೆಯಾಯಿತು. ನಕ್ಸಲ್ ಬಾಧಿತ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ₹9.12 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತು.
ಮಲೆನಾಡಿನಲ್ಲಿ ಆನೆ–ಮಾನವ ಸಂಘರ್ಷ
ತಾಲ್ಲೂಕು ವ್ಯಾಪ್ತಿಯಲ್ಲಿ ಈ ಹಿಂದಿಗಿಂತಲೂ ಹೆಚ್ಚಿದ ಮಾನವ ಪ್ರಾಣಿ ಸಂಘರ್ಷ ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಾನವ– ಪ್ರಾಣಿ ಸಂಘರ್ಷಕ್ಕೆ 2025 ಸಾಕ್ಷಿಯಾಯಿತು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಕೆಲ ಗ್ರಾಮಗಳಿಗೆ ಬರುತ್ತಿದ್ದ ಕಾಡಾನೆಗಳು ಎಲ್ಲೆಡೆ ಹಾವಳಿ ನಡೆಸಿದವು. ಮಡಬೂರು ಮುತ್ತಿನಕೊಪ್ಪ ಸಾತ್ಕೋಳಿ ದೊಡ್ಡಿನತಲೆ ಮಾಕೋಡು ಗೇರುಬೈಲು ಸೂಸಲವಾನಿ ಚೆನಮಣಿ ಮಳಲಿ ಬಣಗಿ ಆರಂಬಳ್ಳಿ ದ್ವಾರಮಕ್ಕಿ ರಾವೂರು ಲಿಂಗಾಪುರ ಗ್ರಾಮಗಳು ಆಡುವಳ್ಳಿ ಕರ್ಕೇಶ್ವರ ಕಾನೂರು ಸೀತೂರು ಸೇರಿ ಸುತ್ತಮುತ್ತಲ ಗ್ರಾಮಗಳಿಗೆ ಆನೆಗಳು ಬಂದವು. ರೈತರೊಬ್ಬರು ಮೃತಪಟ್ಟರೆ ಮಡಬೂರು ಗ್ರಾಮ ವ್ಯಾಪ್ತಿಯಲ್ಲಿ ರೈತರೊಬ್ಬರು ಒಂಟಿ ಸಲಗದ ದಾಳಿಗೆ ಮೃತಪಟ್ಟರು. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆ ಉಪಟಳದ ಜತೆಗೆ ಕಾಡು ಹಂದಿಗಳ ಉಪಟಳವೂ ಹೆಚ್ಚಾಯಿತು. ಉಪಟಳ ನೀಡುತ್ತಿದ್ದ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲಾಯಿತು. ಸಮಾಜವಾದಿ ಚಿಂತಕ ಎಚ್.ಟಿ.ರಾಜೇಂದ್ರ ಅವರು ಜುಲೈ 13ರಂದು ನಿಧನರಾದರು. ನರಸಿಂಹರಾಜಪುರ ಪಟ್ಟಣದ ರಸ್ತೆ ವಿಸ್ತರಣೆಗೆ ರಾಜ್ಯ ಸರ್ಕಾರ ₹60ಕೋಟಿ ಅನುದಾನ ಬಿಡುಗಡೆ ಮಾಡಿತು.
ಬಯಲು ಸೀಮೆಯಲ್ಲಿ ಹೆಚ್ಚಾದ ಚಿರತೆ ಭಯ
ಬಯಲು ಸೀಮೆಯಲ್ಲಿ ಚಿರತೆ ದಾಳಿ ಪ್ರಕರಣಗಳು 2025ರಲ್ಲಿ ಹೆಚ್ಚಾಗಿ ಜನರ ನೆಮ್ಮದಿ ಹಾಳಾಗಿದೆ. ಹಗಲು ವೇಳೆಯೇ ಚಿರತೆಗಳು ಮನೆಗಳ ಬಳಿ ಕಾಣಿಸಿಕೊಂಡು ಹಳ್ಳಿಗರ ಅತಂಕ ಹೆಚ್ಚಿಸಿವೆ. ಎಮ್ಮೆದೊಡ್ಡಿ ಪ್ರದೇಶದಲ್ಲಿ ಬೈಕ್ ಸವಾರರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿತ್ತು. ಚಿರತೆಯನ್ನು ಗ್ರಾಮಸ್ಥರು ಅಟ್ಟಾಡಿಸಿದ್ದರು. ಅದೇ ದಿನ ಕೆರೆಯಲ್ಲಿ ಚಿರತೆಯೊಂದರ ಶವ ಪತ್ತೆಯಾಗಿತ್ತು. ಎಲ್ಲೆಂದರಲ್ಲಿ ಗೋಚರಿಸುತ್ತಿರುವ ಚಿರತೆಗಳು ರಾತ್ರಿ ವೇಳೆ ಊರಿನೊಳಗೆ ನುಗ್ಗಿ ಹಸು ನಾಯಿ ಕುರಿ ಸೇರಿ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿವೆ. ಇದರಿಂದ ಜನರು ರಾತ್ರಿ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಇದರ ನಡುವೆ ತರೀಕೆರೆ ತಾಲ್ಲೂಕಿನ ಬೈರಾಪುರ ಬಳಿ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಗುಂಡಿಗೆ ಚಿರತೆ ಬಲಿಯಾಯಿತು.
ಏರಿಳಿತ ಕಂಡ ಕಾಫಿ
ಬೆಲೆ 2025ರಲ್ಲಿ ಕಾಫಿ ಬೆಲೆ ಸಾರ್ವಕಾಲಿಕ ಎತ್ತರಕ್ಕೆ ಏರಿದ್ದರಿಂದ ಕಾಫಿ ಕೃಷಿ ಭರವಸೆ ಮೂಡಿಸಿತು. ರೊಬಸ್ಟಾ ಕಾಫಿ ಬೇಳೆ ಕೆಜಿಗೆ ₹500ಕ್ಕೆ ಏರಿ ಬೆಳೆಗಾರರನ್ನು ಆಗಸದಲ್ಲಿ ತೇಲಿಸಿತ್ತು. ವರ್ಷದ ಕೊನೆಯಲ್ಲಿ ಧಾರಣೆ ಕುಸಿದು ಕೆಜಿಗೆ₹350ಕ್ಕೆ ತಲುಪಿದೆ. ಬೆಂಗಳೂರಿನ ಐಟಿ ಉದ್ಯಮದ ಉದ್ಯೋಗ ಕಡಿತದ ಪರಿಣಾಮ ಪ್ರವಾಸೋದ್ಯಮ ಕೂಡ ಕುಸಿದಿದ್ದು ವಹಿವಾಟು ಶೇ 50ರಷ್ಟು ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT