ಕೇಂದ್ರ ಸಚಿವರೊಂದಿಗ ಚರ್ಚೆ; ಪರಿಹಾರಕ್ಕೆ ಯತ್ನ: ಶೋಭಾ

7
ಕಾಫಿ, ಕಾಳು ಮೆಣಸು ದರ ಕುಸಿತ

ಕೇಂದ್ರ ಸಚಿವರೊಂದಿಗ ಚರ್ಚೆ; ಪರಿಹಾರಕ್ಕೆ ಯತ್ನ: ಶೋಭಾ

Published:
Updated:
ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಕಾಫಿ, ಕಾಳು ಮೆಣಸು ದರ ಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ, ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂಸತ್‌ ಅಧಿವೇಶನ 18ರಿಂದ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷರು, ಈ ಭಾಗದ ಮುಖಂಡರೊಡಗೂಡಿ ನವದೆಹಲಿಯಲ್ಲಿ ಹಣಕಾಸು ಸಚಿವರು ಮತ್ತು ವಾಣಿಜ್ಯ ಸಚಿವರೊಂದಿಗೆ ಚರ್ಚಿಸಲಾಗುವುದು. ದರ ಕುಸಿತ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು’ ಎಂದು ಉತ್ತರಿಸಿದರು.

‘ಕಾಫಿ ಮತ್ತು ಕಾಳು ಮೆಣಸು ದರ ಕುಸಿದಿದೆ. ಹಿಂದಿನ ಯುಪಿಎ ಸರ್ಕಾರವು ಸಾರ್ಕ್‌ ರಾಷ್ಟ್ರಗಳೊಂದಿಗೆ ಮಾಡಿಕೊಂಡ ಒಪ್ಪಂದದ ಪರಿಣಾಮವಾಗಿ, ವಿದೇಶಗಳಿಂದ ಭಾರತಕ್ಕೆ ಕಾಳುಮೆಣಸು ಬರುವುದನ್ನು ತಡೆಯುವುದು ಆಗುತ್ತಿಲ್ಲ. ಯುಪಿಎ ಸರ್ಕಾರ ಮಾಡಿದ ತಪ್ಪು ಇದು’ ಎಂದು ದೂಷಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೇವಲ ವೋಟ್‌ ಬ್ಯಾಂಕ್‌ ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಿದ್ದಾರೆ. ಕರಾವಳಿ, ಮಲೆನಾಡು ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ದೂಷಿಸಿದರು.

‘ಮಳೆಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹಾನಿ ಸಂಭವಿಸಿದೆ. ಹೊಲ, ಗದ್ದೆ, ತೋಟಗಳಲ್ಲಿ ಬೆಳೆ ನಾಶವಾಗಿದೆ. ಮನೆಗಳು ಕುಸಿದಿವೆ. ಅದಕ್ಕೆ ಪರಿಹಾರ ನೀಡಲು ಗಮನ ಹರಿಸಿಲ್ಲ. ಅಧಿವೇಶನದಲ್ಲಿ ಬಜೆಟ್‌ಗೆ ಉತ್ತರ ನೀಡುವ ಸಂದರ್ಭದಲ್ಲಿಯಾದರೂ ಈ ಭಾಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಚಿಕ್ಕಮಗಳೂರಿನಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಅನ್ವರ್‌ ಕೊಲೆಯಾಗಿ 20 ದಿನಗಳಾಗಿವೆ. ಈವರೆಗೆ ಹಂತಕರನ್ನು ಹಿಡಿದು, ಶಿಕ್ಷಿಸುವ ಕೆಲಸ ಆಗಿಲ್ಲ. ತಕ್ಷಣವೇ ಕೊಲೆಗಾರರನ್ನು ಪತ್ತೆ ಹಚ್ಚಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಹಲವಾರು ಕೊಲೆಗಳಾಗಿದ್ದರೂ ತನಿಖೆ ಸರಿಯಾಗಿ ಆಗುತ್ತಿಲ್ಲ. ಪೊಲೀಸರು ಹಂತಕರನ್ನು ಹಿಡಿದು, ಜನರಲ್ಲಿ ಆಶಾಭಾವ ಮೂಡಿಸಬೇಕು. ಅಪರಾಧಿಗಳಿಗೆ ಭಯ ಹುಟ್ಟಿಸಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !