ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

99 ಕೇಂದ್ರಗಳಲ್ಲಿ ಏಕಕಾಲದಲ್ಲಿ ಲಸಿಕೆ ವಿತರಣೆ: ಸಚಿವ ಶ್ರೀನಿವಾಸ ಪೂಜಾರಿ ಚಾಲನೆ

ಕೋವಿಡ್–19 ತಡೆ ಲಸಿಕೆ ನೀಡುವ ಜಿಲ್ಲಾಮಟ್ಟದ ಮಹಾಮೇಳ
Last Updated 22 ಜೂನ್ 2021, 1:29 IST
ಅಕ್ಷರ ಗಾತ್ರ

ಪುತ್ತೂರು: ‘ಜಿಲ್ಲೆಯ 78 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ಸಮುದಾಯ ಆರೋಗ್ಯ ಕೇಂದ್ರಗಳು, 4 ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು, ವೆನ್ಲಾಕ್ ಆಸ್ಪತ್ರೆ, 3 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 99 ಕೇಂದ್ರಗಳಲ್ಲಿ ಏಕಕಾಲದಲ್ಲಿ ಜನರಿಗೆ ಕೋವಿಡ್‌–19 ತಡೆ ಲಸಿಕೆ ಮಹಾಮೇಳದಲ್ಲಿ ನೀಡಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪುತ್ತೂರಿನ ಪುರಭವನದಲ್ಲಿ ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪುತ್ತೂರು ತಾಲ್ಲೂಕು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಸೋಮವಾರ ನಡೆದ ಕೋವಿಡ್ ತಡೆ ಲಸಿಕಾ ಜಿಲ್ಲಾ ಮಟ್ಟದ ಮಹಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಸ್ತುತ ಜಿಲ್ಲೆಯಲ್ಲಿ 18 ಲಕ್ಷ ಮಂದಿ ಲಸಿಕೆಗಾಗಿ ಸರದಿಯಲ್ಲಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಈತನಕ 6,23,000 ಮಂದಿಗೆ ಕೋವಿಡ್ ತಡೆ ಲಸಿಕೆ ನೀಡಲಾಗಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭ ಇಡೀ ದಿನ ಜಿಲ್ಲೆಯಲ್ಲಿ 39 ಸಾವಿರ ಮಂದಿಗೆ ಲಸಿಕೆ ನೀಡಲಾಗುತ್ತಿದೆ. 4,90,000 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 1,30,000 ಮಂದಿಗೆ 2ನೇ ಡೋಸ್ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 73 ಶೇ ಸಾಧನೆಯಾಗಿದೆ’ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಕೋವಿಡ್ ಇಡೀ ಜಗತ್ತಿಗೆ ಬಂದ ದೊಡ್ಡ ಸವಾಲು. ಈ ನಡುವೆಯೂ ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆಗಳನ್ನು ಉಚಿತವಾಗಿ ನೀಡಿದ ದೇಶ ಭಾರತ. ಆದರೂ ಸರ್ಕಾರದ ಮೇಲೆ ಟೀಕೆಗಳು ಬಂದಿವೆ. ಲಸಿಕೆ ಬಂದ ಮೇಲೂ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯಿತು’ ಎಂದು ಟೀಕಿಸಿದರು.

‘ಡಿಸೆಂಬರ್ ವೇಳೆಗೆ ದೇಶದಲ್ಲಿ ಶೇ 100 ಲಸಿಕೆ ನೀಡುವ ಭರವಸೆ ನಮ್ಮಲ್ಲಿದೆ. ಈಗ 9000 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸಲಾಗುತ್ತಿದೆ. ದಿನಕ್ಕೆ 20 ಲಕ್ಷ ಜನರ ಪರೀಕ್ಷೆ ನಡೆಯುತ್ತಿದೆ. 16 ಲಕ್ಷ ಹಾಸಿಗೆಗಳು, 10 ಲಕ್ಷ ವೆಂಟಿಲೇಟರ್‌ಗಳಿವೆ. ರಾಜ್ಯದಲ್ಲಿದ್ದ 4,000 ವೆಂಟಿಲೇಟರ್‌ಗಳ ಸಂಖ್ಯೆ ಈಗ 16 ಸಾವಿರಕ್ಕೇರಿದೆ’ ಎಂದರು.

ಶಾಸಕ ಸಂಜೀವ ಮಠಂದೂರು ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ತಹಶೀಲ್ದಾರ್ ರಮೇಶ್ ಬಾಬು, ಸರ್ಕಾರಿ ಆಸ್ಪತೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿದರು. ಆರೋಗ್ಯ ಇಲಾಖೆಯ ಪದ್ಮಾವತಿ ವಂದಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಡಾ. ಆಶಾ ಪುತ್ತೂರಾಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಯನ್ನು ಸೇವಾ ಭಾರತಿ ವತಿಯಿಂದ ಗೌರವಿಸಲಾಯಿತು. ಸೇವಾ ಭಾರತಿಯ ಮುರಳಿಕೃಷ್ಣ ಹಸಂತಡ್ಕ ಇದ್ದರು.

‘ಅನ್‌ಲಾಕ್‌ ಮಾರ್ಗಸೂಚಿ– ಎಚ್ಚರಿಕೆಯಿಂದ ತಯಾರಿ’

‘ಮೊದಲ ಹಂತದ ಅನ್‌ಲಾಕ್‌ ಮಾರ್ಗಸೂಚಿ ಸೂತ್ರಗಳನ್ನು ಸಾಕಷ್ಟು ಎಚ್ಚರ ವಹಿಸಿಯೇ ರಚಿಸಲಾಗಿದೆ. ಈ ವಿಚಾರದಲ್ಲಿ ಜನ ಗೊಂದಲಕ್ಕೀಡಾಗಬಾರದು. ಮೊದಲ ಹಂತದಲ್ಲೇ ಎಲ್ಲ ಮಳಿಗೆಗಳನ್ನು ತೆರೆದರೆ ಕೋವಿಡ್ ನಿಯಂತ್ರಣದ ಉದ್ದೇಶ ದಿಕ್ಕು ತಪ್ಪಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಆರಂಭದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆ ಇತ್ತು. ನಂತರ ದಿನವೊಂದಕ್ಕೆ 14 ಸಾವಿರಕ್ಕೇರಿದೆ. ಭಾನುವಾರ 10 ಸಾವಿರ ಮಂದಿಯ ಪರೀಕ್ಷೆ ಮಾಡಲಾಗಿದ್ದು, 500ಕ್ಕೂ ಅಧಿಕ ಪಾಸಿಟಿವ್ ಬಂದಿದೆ. ಬಟ್ಟೆ ಅಂಗಡಿ, ಚಪ್ಪಲಿ, ಬ್ಯಾಗ್ ಇತ್ಯಾದಿ ಮಳಿಗೆಗಳನ್ನು ಕೂಡ ತೆರೆಯುವ ಬೇಡಿಕೆ ಇದೆ. ಆದರೆ, ಒಮ್ಮೆಲೆ ಎಲ್ಲವನ್ನೂ ತೆರೆದರೆ ಪಾಸಿಟಿವಿಟಿ ದರ ಜಾಸ್ತಿ ಆಗಬಹುದು ಎಂದು ಆರೋಗ್ಯ ಇಲಾಖೆ ನೀಡಿದ ಎಚ್ಚರಿಕೆಯನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗಿದೆ’ ಸ್ಪಷ್ಟಪಡಿಸಿದರು.

‘ಕೋವಿಡ್ 3ನೇ ಅಲೆ ಬರುವ ಬಗ್ಗೆ ಮತ್ತು ಅದು ಮಕ್ಕಳನ್ನು ಹೆಚ್ಚಾಗಿ ಬಾಧಿಸುವ ಬಗ್ಗೆ ಭೀತಿ ಇದೆ. ಇದನ್ನು ತಡೆಯಲು ಜಿಲ್ಲಾಡಳಿತ ಸಜ್ಜಾಗಿದೆ. ಲಸಿಕೆಯ ಮೇಲೆ ಆರಂಭದಲ್ಲಿ ಇದ್ದ ಒತ್ತಡ ಈಗ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT