ಗುರುವಾರ , ಜುಲೈ 29, 2021
21 °C
ಚೌಳಹಿರಿಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉದಯ್

ಮನೋಸ್ಥೈರ್ಯದಿಂದ ಕೋವಿಡ್‌ ಗೆದ್ದೆ

ಬಾಲುಮಚ್ಚೇರಿ Updated:

ಅಕ್ಷರ ಗಾತ್ರ : | |

Prajavani

ಕಡೂರು: ‘ಕೋವಿಡ್‌ ಸೋಂಕು ಕಾಣಿಸಿಕೊಂಡರೆ ಭಯಪಡುವ ಅಗತ್ಯವಿಲ್ಲ. ಮಾನಸಿಕ ಸ್ಥೈರ್ಯ ಮತ್ತು ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಬೇಗ ಗುಣಮುಖರಾಗಬಹುದು’ ಎನ್ನುತ್ತಾರೆ ಕೋವಿಡ್‌ ಸೋಂಕಿಗೆ ತುತ್ತಾಗಿ ಗುಣಮುಖರಾದ ಚೌಳಹಿರಿಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉದಯ್.

‘ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡುವ ಹೊತ್ತಿನಲ್ಲಿಯೇ ಸ್ವತಃ ನನಗೆ ಪಾಸಿಟಿವ್ ಇದೆ ಎಂದು ತಿಳಿದಾಗ ಮನಸ್ಸಿಗೆ ಕಸಿಬಿಸಿಯಾಯಿತು. ಆದರೆ, ಗಾಬರಿಯಾಗಲಿಲ್ಲ. ತಂದೆ– ತಾಯಿಗೆ ವಿಷಯ ತಿಳಿಸಿದೆ. ವೈದ್ಯಕೀಯ ಶಿಕ್ಷಣ ಪಡೆಯುವಾಗ ಮೊದಲು ಕಲಿಸುವುದೇ ಮನೋಸ್ಥೈರ್ಯ. ಅದೇ ನನಗೆ ಸಹಾಯಕ್ಕೆ ಬಂದಿತು. ಅದೇ ಧೈರ್ಯದಿಂದ ಆಸ್ಪತ್ರೆಗೆ ದಾಖಲಾದೆ’ ಎನ್ನುತ್ತಾರೆ ಅವರು.

‘ಕೋವಿಡ್ ಸೋಂಕಿಗೆ ನಿರ್ದಿಷ್ಟ ಔಷಧಿಯಿಲ್ಲ. ಆದರೆ, ಅದಕ್ಕಾಗಿ ಅಧೀರರಾಗಬೇಕಿಲ್ಲ. ನಮ್ಮ ಸ್ವಯಂ ಧೈರ್ಯವೇ ನಮ್ಮನ್ನು ಅರ್ಧ ಗುಣಮುಖರನ್ನಾಗಿಸುತ್ತದೆ. ಬೇರೆ ಯಾವುದೇ ಕಾಯಿಲೆಗಿಂತ ಬಹುವೇಗವಾಗಿ ಕೊರೊನಾ ಹರಡುತ್ತದೆ. ಹಾಗಾಗಿ, ಕೂಡಲೇ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆಗೆ ಒಳಪಡಬೇಕು. ಅದು ನಮ್ಮ ಸಾಮಾಜಿಕ ಜವಾಬ್ದಾರಿಯೂ ಹೌದು. 14 ದಿನಗಳ ಕಾಲ ಒಂದೇ ಕೋಣೆಯಲ್ಲಿ ಚಿಕಿತ್ಸೆಗೊಳಪಡುವುದು ಒಂದಿಷ್ಟು ಕಷ್ಟಕರವಾದರೂ ಮನಸ್ಸನ್ನು ಬಿಗಿ ಹಿಡಿಯಬೇಕು. ಏಕೆಂದರೆ ಅಲ್ಲಿ ಒಬ್ಬರೇ ಇರುತ್ತೇವೆ. ನಮ್ಮಲ್ಲಿರುವ ಮಾರಕ ವೈರಸ್ ಅನ್ನು ಬೇರೆಯವರಿಗೆ ವರ್ಗಾಯಿಸುವುದನ್ನು ತಪ್ಪಿಸಿ, ನಾವು ಸಮಾಜಕ್ಕೆ ಮಹತ್ತರ ಕೊಡುಗೆಯೊಂದನ್ನು ನೀಡುತ್ತಿದ್ದೇವೆ ಎಂಬ ಚಿಂತನೆ ನಮಗೆ ನೈತಿಕ ಸ್ಥೈರ್ಯ ನೀಡಿ ಬೇಸರ ಕಳೆಯುತ್ತದೆ’ ಎನ್ನುತ್ತಾರೆ ಡಾ.ಉದಯ್.

‘ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಅವರಿಗೆ ಫೋನ್ ಮಾಡುವವರು ಧೈರ್ಯ ತುಂಬುವ ಕೆಲಸ ಮಾಡಬೇಕು. ಕೊರೊನಾ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಲೆಕ್ಕ ಹೇಳಿ ಹೆದರಿಸಬಾರದು. ರೋಗಿ ಹೆದರಿದರೆ ಮನಸ್ಸು ಕುಗ್ಗುತ್ತದೆ. ಅವರೊಳಗಿನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅದರ ಬದಲು ಸಕಾರಾತ್ಮಕವಾದ ಮಾತುಗಳನ್ನಾಡಿ ಅವರಲ್ಲಿ ಸ್ಫೂರ್ತಿ ತುಂಬಬೇಕು. ಕೋವಿಡ್ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆಯಿಂದ ಖಂಡಿತವಾಗಿ ಗುಣಮುಖರಾಗಿ ಹೊರಬರಬಹುದು’ ಎಂಬುದು ಅವರ ಮಾತು.

‘ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಬಂದ ನಂತರ ಮತ್ತೆ ಮೊದಲಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಜನರು ಸ್ವಯಂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಬಹುಮುಖ್ಯ’ ಎನ್ನುತ್ತಾರೆ ಉದಯ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.