ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌ ಚಿಕಿತ್ಸೆಗೆ ಪರದಾಟ; ಸರ್ಕಾರದ ಉದಾಸೀನದ ಫಲ’

Last Updated 20 ಏಪ್ರಿಲ್ 2021, 13:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕಳೆದ ವರ್ಷದ ಅನುಭವ ಇದ್ದರೂ ಸರ್ಕಾರವು ಕೋವಿಡ್‌–19 ಎರಡನೇ ಅಲೆ ನಿರ್ವಹಣೆಗೆ ಪೂರ್ವತಯಾರಿ ಮಾಡಿಕೊಂಡಿಲ್ಲ. ಸರ್ಕಾರದ ಉದಾಸೀನದ ಫಲವಾಗಿ ಜನಸಾಮಾನ್ಯರು ಪರಿತಪಿಸುವಂತಾಗಿದೆ’ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ದೂರಿದರು.

‘ಎರಡನೇ ಅಲೆ ತೀವ್ರವಾಗಿದೆ. ಬೆಂಗಳೂರಿನಲ್ಲಿ ಒಂದು ಆಸ್ಪತ್ರೆಯನ್ನೇ ಕೋವಿಡ್‌ಗೆ ಮೀಸಲಿಡಬಹುದಿತ್ತು. ದೆಹಲಿಯಲ್ಲಿ ಕೋವಿಡ್‌ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಶೇ 80 ಹಾಸಿಗೆ ಮೀಸಲಿಡಲು ವ್ಯವಸ್ಥೆ ಮಾಡಿದ್ದಾರೆ. ಕರ್ನಾಟಕದಲ್ಲಿ ಇಂಥ ಕ್ರಮ ಯಾಕೆ ಕೈಗೊಳ್ಳತ್ತಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಆಮ್ಲಜನಕ ಸಾಕಷ್ಟು ಸಂಗ್ರಹ ಇಲ್ಲ. ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ದೂರುಗಳಿವೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಸರ್ಕಾರ ಎಚ್ಚರಿಸಿದೆ. ಈ ಎಚ್ಚರಿಕೆ ಬಾಯಿಮಾತಿಗೆ ಸೀಮಿತವಾಗಿದೆ’ ಎಂದು ಲೇವಡಿ ಮಾಡಿದರು.

ಕೋವಿಡ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ದರ ಎಂಬುದನ್ನು ನಿಗದಿಪಡಿಸಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಜನ ಹೆದರುತ್ತಾರೆ. ದರ ನಿಗದಿಪಡಿಸಿ, ಈ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕು ಎಂದು ಒತ್ತಾಯಿಸಿದರು.

‘ಚಿತ್ರಮಂದಿರಗಳಲ್ಲಿ ಶೇ 30 ಆಸನ ಮಾತ್ರ ಭರ್ತಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಸಿನಿಮಾ ಬಿಡುಗಡೆ ಮಾಡಿದ್ದವರ ಮನವಿಗೆ ಸರ್ಕಾರ ಮಣಿದು ಮಾರನೇದಿನವೇ ಶೇ 100 ಆಸನ ಭರ್ತಿಗೆ ಅವಕಾಶ ಮಾಡಿದ್ದು ಎಷ್ಟು ಸರಿ? ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಆಪಾದಿಸಿದರು.

‘ಲಾಕ್‌ಡೌನ್‌ ಮಾಡಬೇಕೇ, ಬೇಡವೇ ಎಂಬ ಪ್ರಶ್ನೆಗಳು ಎದ್ದಿವೆ. ಲಾಕ್‌ಡೌನ್‌ ಮಾಡಿದಾಕ್ಷಣ ಕೊರೊನಾ ಪೂರ್ಣ ಹತೋಟಿಗೆ ಬರುತ್ತದೆ ಎಂಬ ಖಾತ್ರಿ ಇಲ್ಲ. ಲಾಕ್‌ಡೌನ್‌ ಮಾಡುವುದಾದರೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಬೆಂಗಳೂರು ಸುರಕ್ಷಿತವಲ್ಲ ಎಂದು ಬಹಳಷ್ಟು ಮಂದಿ ಊರುಗಳಿಗೆ ವಾಪಸಾಗುವ ಸಾಧ್ಯತೆ ಇದೆ. ಹೊರಗಿನಿಂದ ಬಂದವರು ಕ್ವಾರಂಟೈನ್‌ನಲ್ಲಿ ಇರಲು ವ್ಯವಸ್ಥೆ ಮಾಡಬೇಕು. ಪ್ರವಾಸಿಗರ ತಪಾಸಣೆ ಕಟ್ಟುನಿಟ್ಟಾಗಿ ಮಾಡಬೇಕು. ಹೋಮ್‌ ಸ್ಟೆಗಳವರು ಹಣದಾಸೆಗಾಗಿ ಪ್ರವಾಸಿಗರನ್ನು 20 ದಿನಗಟ್ಟಲೇ ಇಟ್ಟುಕೊಂಡು ಜಿಲ್ಲೆಯ ವಾತಾವರಣ ಕಲುಷಿತ ಮಾಡಬಾರದು’ ಎಂದು ಮನವಿ ಮಾಡಿದರು.

‘ಮತದಾರರಿಗೆ ಎಸಗಿದ ದ್ರೋಹ’

‘ಚುನಾಯಿತ ಪ್ರತಿನಿಧಿಗಳ ಸರ್ಕಾರ ಅಸ್ತಿತ್ವದಲ್ಲಿದ್ದಾಗ ರಾಜ್ಯಪಾಲರು ಮಧ್ಯಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರವು ಮತದಾರರಿಗೆ ದ್ರೋಹ ಎಸಗಿದೆ. ಸರ್ಕಾರದ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ’ ಎಂದು ಭೋಜೇಗೌಡ ಕಿಡಿಕಾರಿದರು.

‘ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಮೂವರು ಉಪಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಈ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

ಮಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT