ಬುಧವಾರ, ನವೆಂಬರ್ 13, 2019
23 °C

ಜಮೀನು ಹದ್ದುಬಸ್ತಿಗೆ ಹೈಕೋರ್ಟ್ ಆದೇಶ: ಎಚ್.ಎಂ.ರೇಣುಕಾರಾಧ್ಯ

Published:
Updated:
Prajavani

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಕಲ್ಮನೆ ಗ್ರಾಮದ ಲೋಕೇಶ್ ಅವರ ಜಮೀನಿಗೆ ಹದ್ದುಬಸ್ತು ಮಾಡಿಕೊಡಲು ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ ಎಂದು ಸಿಪಿಐ ಜಿಲ್ಲಾ ಸಂಚಾಲಕ ಎಚ್.ಎಂ.ರೇಣುಕಾರಾಧ್ಯ ಇಲ್ಲಿ ಶನಿವಾರ ತಿಳಿಸಿದರು.

ಕಲ್ಮನೆ ಗ್ರಾಮದ ಸರ್ವೆ ನಂ. 49ರಲ್ಲಿ ಲೋಕೇಶ್ ಅವರ ತಂದೆ ಸಿದ್ದಯ್ಯ ಅವರಿಗೆ ಐದು ಎಕರೆ, ತಾಯಿ ಜನಕಮ್ಮ ಅವರಿಗೆ ಎರಡು ಎಕರೆ ದರ್ಖಾಸ್ತು ಜಮೀನು ಮಂಜೂರಾಗಿತ್ತು. ಮಂಜೂರಾತಿ ನಕ್ಷೆ ಸಹಿತ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡಿ, ಹದ್ದುಬಸ್ತು ಮಾಡಿಕೊಡಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಈ ಜಮೀನಿನ ಒಡೆತನದ ವಿಚಾರವಾಗಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಲೋಕೇಶ್ ನಡುವೆ ಹಲವಾರು ಬಾರಿ ಮಾತಿನ ಚಕಮಕಿ ನಡೆದಿದ್ದವು. ಶಾಸಕರ ಬೆಂಬಲಿಗರು ಈ ಜಮೀನಿನಲ್ಲಿ ಬೆಳೆದಿದ್ದ ಕಾಫಿ ಬೀಜಗಳನ್ನು ಅಕ್ರಮವಾಗಿ ಕೊಯ್ಲು ಮಾಡಿದ್ದರು ಎಂದು ಆಪಾದಿಸಿದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ‘ಅಧಿಕಾರಿಗಳು ನಿಸ್ಪಕ್ಷಪಾತವಾಗಿ, ಒತ್ತಡಕ್ಕೆ ಮಣಿಯದೇ ಕಾರ್ಯನಿರ್ವಹಿಸಬೇಕು. ಲೋಕೇಶ್ ಅವರಿಗೆ ನ್ಯಾಯ ಒದಗಿಸಬೇಕು’ ಎಂದರು.

ದ್ವೇಷ ರಾಜಕೀಯ: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಟೆಂಡರ್ ಆಹ್ವಾನಿಸಬೇಕಾದ, ಕಾರ್ಯಾದೇಶ ನೀಡಲು ಬಾಕಿ ಇರುವ ಕಾಮಗಾರಿಗಳಿಗೆ ತಡೆಹಿಡಿಯುವಂತೆ ಆದೇಶ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದ್ವೇಷ ರಾಜಕೀಯ ಮಾಡುತ್ತಿದ್ದಾರೆ. ಆದರೆ, ಅತಿವೃಷ್ಟಿಯಿಂದಾಗಿ ರಸ್ತೆ, ಸೇತುವೆಗಳು ಹಾಳಾಗಿವೆ. ಗ್ರಾಮೀಣ ಪ್ರದೇಶದ ಜನರು ಪರಿತಪಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಆದೇಶ ಹಿಂಪಡೆಯಬೇಕು ಎಂದು ದೇವರಾಜ್‌ ಒತ್ತಾಯಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಪ್ಪ ತಾಲ್ಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡುವ ಮೂಲಕ ವ್ಯಕ್ತಿ ಆರಾಧನೆಗೆ ಒತ್ತು ನೀಡಿದ್ದಾರೆ. ಆದರೆ, ಅತಿವೃಷ್ಟಿ ಪ್ರದೇಶಗಳಿಗೆ, ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡುವ ಸೌಜನ್ಯ ತೋರಲಿಲ್ಲ. ನಿರಾಶ್ರಿತರ ಕೇಂದ್ರದಲ್ಲಿ ಮಹಿಳೆಯರ ಪರಿಸ್ಥಿತಿ ಹೇಳತೀರದು’ ಎಂದರು.

‘2009ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಅಂದು ಕರ್ನಾಟಕದ ಅತಿವೃಷ್ಟಿ ನಿರ್ವಹಣೆಗೆ ಮೊದಲ ಕಂತಾಗಿ ₹2 ಸಾವಿರ ಕೋಟಿ, ಎರಡನೇ ಕಂತಾಗಿ ₹5 ಸಾವಿರ ಕೋಟಿ ಅನುದಾನ ನೀಡಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯವನ್ನು ನಿರ್ಲಕ್ಷಿಸಿದ್ದಾರೆ’ ಎಂದು ದೂಷಿಸಿದರು.

ಸಿಪಿಐ ಪದಾಧಿಕಾರಿ ರಾಧಾ ಸುಂದರೇಶ್ ಇದ್ದರು.

 

ಪ್ರತಿಕ್ರಿಯಿಸಿ (+)