ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ದತ್ತ ಜಯಂತಿ ಉತ್ಸವದಲ್ಲಿ ಅನಸೂಯ ದೇವಿ ಸಂಕೀರ್ತನೆ

ಚಿಕ್ಕಮಗಳೂರು: ನೂರಾರು ಮಹಿಳೆಯರು ಭಾಗಿ, ದತ್ತಾತ್ರೇಯ ಸ್ವಾಮಿ, ಅನಸೂಯ ದೇವಿ ಸ್ಮರಣೆ
Published 24 ಡಿಸೆಂಬರ್ 2023, 23:32 IST
Last Updated 24 ಡಿಸೆಂಬರ್ 2023, 23:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಮೊದಲ ದಿನವಾದ ಭಾನುವಾರ ಅನಸೂಯ ದೇವಿ ಸಂಕೀರ್ತನಾ ಯಾತ್ರೆ ನಡೆಯಿತು. ದೇವಾಲಯದಲ್ಲಿ ಅನಸೂಯ ದೇವಿಗೆ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು.

ನಗರದ ಬೋಳರಾಮೇಶ್ವರ ದೇವಾಲಯದ ಆವರಣದಿಂದ ಕಾಲ್ನಡಿಗೆಯಲ್ಲಿ ಹೊರಟ ಸಂಕೀರ್ತನಾ ಯಾತ್ರೆಯು ಐ.ಜಿ ರಸ್ತೆ, ರತ್ನಗಿರಿ ರಸ್ತೆಯ ಶ್ರೀರಾಮ ದೇವಸ್ಥಾನವನ್ನು ಹಾದು ಕಾಮಧೇನು ಗಣಪತಿ ದೇವಾಲಯ ತಲುಪಿತು. ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಭಕ್ತರು, ವಿವಿಧ ಸಂಘಟನೆ, ಭಜನಾ ಮಂಡಳಿಗಳ ಕಾರ್ಯಕರ್ತರು ಸಂಭ್ರಮಿಸಿದರು. ಕೊರಳಿನಲ್ಲಿ ಕೇಸರಿ ಶಾಲು, ಕೈಯಲ್ಲಿ ಅನಸೂಯ ದೇವಿಯ ಚಿತ್ರಪಟ ಇತ್ತು. ಭಜನಾ ಮಂಡಳಿಗಳ ಸದಸ್ಯೆಯರು ಭಜನೆ ಪದ ಹಾಡುತ್ತ, ದತ್ತಾತ್ರೇಯ ಸ್ವಾಮಿ ಸ್ಮರಣೆ ಮಾಡಿದರು. ಕೆಲವರ ಬಳಿ ಭಗವಾಧ್ವಜ ಮತ್ತು ದತ್ತಾತ್ರೇಯ ಸ್ವಾಮಿ ಮೂರ್ತಿಯ ಅಡ್ಡೆ ಇತ್ತು. ‘ನಮ್ಮ ನಿಮ್ಮ ಪೀಠ ದತ್ತಪೀಠ’ ‘ಭಾರತ ಮಾತಾಕೀ ಜೈ’ ಘೋಷಣೆಗಳು ಮೊಳಗಿದವು.

ವಾಹನಗಳಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಅನಸೂಯ ದೇವಿ ಪೂಜೆ, ಗಣಪತಿ ಪೂಜೆ, ದುರ್ಗಾ ಹೋಮ, ಕಲಾಶಾಭಿಷೇಕ ಮಾಡಿದರು. ದತ್ತಾತ್ರೇಯ ಸ್ವಾಮಿಯ ಪಾದುಕೆ ದರ್ಶನವೂ ಆಯಿತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಮುಖಂಡ ಸಿ.ಟಿ ರವಿ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್ ಸೇರಿದಂತೆ ಹಲವು ಪ್ರಮುಖರು ಇದ್ದರು.

ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ಅನಸೂಯ ದೇವಿ ದತ್ತಾತ್ರೇಯ ಸ್ವಾಮಿ ಭಾವಚಿತ್ರಕ್ಕೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ಪುಷ್ಪ ನಮನ ಸಲ್ಲಿಸಿದರು
ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ಅನಸೂಯ ದೇವಿ ದತ್ತಾತ್ರೇಯ ಸ್ವಾಮಿ ಭಾವಚಿತ್ರಕ್ಕೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ಪುಷ್ಪ ನಮನ ಸಲ್ಲಿಸಿದರು

ನಿಷೇಧಿತ ಪ್ರದೇಶದಲ್ಲಿ ಪಟಾಕಿ: ಎಫ್‌ಐಆರ್

ದತ್ತ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಶನಿವಾರ ನಡೆದ ಶೋಭಾ ಯಾತ್ರೆ ವೇಳೆ ನಿಷೇಧಿತ ಪ್ರದೇಶಗಳಾದ ಜಾಮಿಯಾ ಮಸೀದಿ ಮುಂಭಾಗದಲ್ಲಿ ಪಟಾಕಿಯ ಕಿಡಿ ಹಾರಿ ಡಿವೈಎಸ್‌ಪಿ ಶೈಲೇಂದ್ರ ಅವರ ಸಮವಸ್ತ್ರದ ಒಂದು ಭಾಗ ಸುಟ್ಟು ಹೋಯಿತು. ಅಂಬೇಡ್ಕರ್ ವೃತ್ತದಲ್ಲಿ ದತ್ತಾತ್ರೇಯ ಸ್ವಾಮಿಯ ವಿಗ್ರಹದ ಅಡ್ಡೆ ಹೊತ್ತಿದ್ದ ಮಾಲಾಧಾರಿಗಳು ಹೆಡ್‌ ಕಾನ್‌ಸ್ಟೆಬಲ್ ಚಂದ್ರಪ್ಪ ಅವರ ಭುಜಕ್ಕೆ ಗುದ್ದಿದ ಆರೋಪದ ಮೇಲೆ ಸುನಿಲ್ ಹಾಂದಿ ತುಡುಕೂರು ಮಂಜು ಪ್ರಜ್ವಲ್ ಸತೀಶ ಅಲಿಯಾಸ್ ದುಗ್ಗ ಹಾಂದಿ ಮಂಜು ನಾಗ ಅಲಿಯಾಸ್ ನಾಗರಾಜ ಒಳಗೊಂಡು 7 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಶೋಭಾಯಾತ್ರೆ ಇಂದು

ದತ್ತ ಜಯಂತಿ ಅಂಗವಾಗಿ ಶೋಭಾಯಾತ್ರೆ ಸೋಮವಾರ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಕಾಮಧೇನು ಗಣಪತಿ ದೇವಾಲಯದಿಂದ ಎಂ.ಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೂ ಯಾತ್ರೆ ಸಾಗಲಿದೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಬಸವಪಟ್ಟಣ ತೋಠದಾರ್ಯ ಮಠದ ಸ್ವತಂತ್ರ್ಯ ಬಸವಲಿಂಗಸ್ವಾಮೀಜಿ ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬಸವತತ್ವ ಪೀಠದ ಬಸವಮರಳ ಸಿದ್ಧಸ್ವಾಮೀಜಿ ಸೇರಿ ಹಲವರು ಭಾಗವಹಿಸಲಿದ್ದಾರೆ.

ಮೆರವಣಿಗೆ

ಮಂಡ್ಯ: ಸಂಕೀರ್ತನಾ ಯಾತ್ರೆ ಅಂಗವಾಗಿ ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲ ಬಳಿಯ ಆಂಜನೇಯಸ್ವಾಮಿ ದೇವಾಲಯದಿಂದ ರಂಗನಾಥಸ್ವಾಮಿ ದೇಗುಲದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಜಾಮಿಯಾ ಮಸೀದಿ ಬಳಿಯ ಪುರಸಭೆ ವೃತ್ತದಲ್ಲಿ ವಿವಿಧ ತಂಡಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತು ಭಜನೆ ನಡೆಸಿದವು. ನಂತರ ಮಾಲೆ ವಿಸರ್ಜನೆ ಕಾರ್ಯ ನಡೆಯಿತು.

ಅಂಜನಾದ್ರಿ: ಹನುಮ ಮಾಲೆ ವಿಸರ್ಜನೆ

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾಧಾರಿಗಳು ಭಾನುವಾರ ಮಾಲೆ ವಿಸರ್ಜನೆ ಮಾಡಿ ಸಂಭ್ರಮಿಸಿದರು.

ಶನಿವಾರ ರಾತ್ರಿಯಿಂದಲೇ ಮಾಲೆ ವಿಸರ್ಜನೆ ಆರಂಭವಾಗಿ ಭಾನುವಾರ ಸಂಜೆ ತನಕ ನಡೆಯಿತು. ಬೆಳಗಾವಿ, ಕಲಬುರಗಿ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಥರಗುಟ್ಟುವ ಚಳಿ, ದಟ್ಟ ಮಂಜಿನ ವಾತಾವರಣದ ನಡುವೆಯೂ ಜಿಲ್ಲೆ ಹಾಗೂ
ಸುತ್ತಮುತ್ತಲಿನ ಊರಿನ ಮಾಲಾಧಾರಿಗಳು ತಮ್ಮೂರಿನಿಂದ ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಬಂದಿದ್ದರು.

ಭಕ್ತರಿಗೆ ಜಿಲ್ಲಾಡಳಿತದ ವತಿಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಒಂದು ದಿನ ಮೊದಲು ಬಂದವರಿಗೆ ವಸತಿ ಸೌಲಭ್ಯ ಕೂಡ ಕಲ್ಪಿಸಲಾಗಿತ್ತು. ಮಾಲೆ ಧರಿಸಿದ್ದ ಶಾಸಕ ಜನಾರ್ದನ ರೆಡ್ಡಿ ಭಕ್ತರನಡುವೆ ಬಂದು ಮಾಲೆ ವಿಸರ್ಜನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT