ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಶುರು

7
ದತ್ತಭಕ್ತರಿಗೆ ಮಾಲೆ ಧಾರಣೆ ಕೈಂಕರ್ಯ

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಶುರು

Published:
Updated:
Deccan Herald

ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇಗುಲದಲ್ಲಿ ಬುಧವಾರ ದತ್ತಭಕ್ತರು ಮಾಲೆ ಧಾರಣೆ ಮೂಡುವ ಮೂಲಕ ದತ್ತಮಾಲಾ ಅಭಿಯಾನ ವಿಧ್ಯುಕ್ತವಾಗಿ ಶುರುವಾಯಿತು.

ದೇಗುಲ ಆವರಣದಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಮಾಲೆ ಧಾರಣೆ ಕೈಂಕರ್ಯ ನಡೆಯಿತು. 70ಕ್ಕೂ ಹೆಚ್ಚು ಭಕ್ತರು ಮಾಲೆ ಧರಿಸಿದರು.

ಅರ್ಚಕ ರಘು ಅವಧಾನಿ ಅವರು ಪೂಜಾ ಕೈಂಕರ್ಯ ನೆರವೇರಿಸಿದರು. ಭಕ್ತರು ಭಜನೆ ಮಾಡಿ ಗುರುದತ್ತಾತ್ರೇಯ ನಾಮಸ್ಮರಣೆ ಮಾಡಿದರು. ವಿಶ್ವಹಿಂದು ಪರಿಷತ್‌, ಬಜರಂಗದಳದ ಮುಖಂಡರು, ಕಾರ್ಯಕರ್ತರು ಇದ್ದರು.

ವಿಶ್ವ ಹಿಂದು ಪರಿಷತ್‌ ಬಿ.ಎ.ಶಿವಶಂಕರ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘ದತ್ತ ಜಯಂತಿಗೆ ಪೂರ್ವಭಾವಿಯಾಗಿ ದತ್ತಭಕ್ತರು ಮಾಲೆ ಧಾರಣೆ ಮಾಡಿದ್ದಾರೆ. ಮಾಲಾಧಾರಿಗಳು ವ್ರತಾಚರಣೆ ಮಾಡಿ, ದತ್ತಜಯಂತಿಯಂದು (22ರಂದು) ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಮಾಡುವರು’ ಎಂದು ತಿಳಿಸಿದರು.

‘ಮಾಲೆ ಧಾರಣೆಯಂದೇ ಸುಧರ್ಮ ರಥಯಾತ್ರೆಗೆ ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಜಿಲ್ಲಾಡಳಿತವು 16ರಂದು ಚಾಲನೆ ನೀಡಲು ಅನುಮತಿ ನೀಡಿದೆ. ಹೀಗಾಗಿ, ಈಗಾಗಲೇ ನಿಗದಿಪಡಿಸಿದ್ದ ರಥಯಾತ್ರೆ ಸಂಚಾರ ವೇಳಾಪಟ್ಟಿಯಲ್ಲಿ ವ್ಯತ್ಯಯಗಳಾಗಲಿದೆ. ಈ ನಿಟ್ಟಿನಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಗೋರಿಗಳನ್ನು ಸ್ಥಳಾಂತರಿಸಬೇಕು ಎಂಬುದು ಸಹಿತ ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ದತ್ತಪೀಠ ಮುಕ್ತಿಗಾಗಿ ಹೋರಾಟ ಮಾಡುತ್ತೇವೆ’ ಎಂದರು.

ಬಜರಂಗದಳದ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಮಾತನಾಡಿ, ‘ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ನೀಡಬೇಕು, ಹಿಂದೂ ಅರ್ಚಕರನ್ನು ನೇಮಿಸಬೇಕು, ಗುರುದತ್ತಾತ್ರೇಯ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕು, ಔದುಂಬರ ವೃಕ್ಷಕ್ಕೆ ಅಳವಡಿಸಿರುವ ಬೇಲಿ ತೆರವುಗೊಳಿಸಬೇಕು, ಗೋರಿಗಳನ್ನು ಸ್ಥಳಾಂತರಿಸಬೇಕು ಎಂಬುದು ನಮ್ಮ ಬೇಡಿಕೆಗಳು’ ಎಂದು ಹೇಳಿದರು.

‘ಸುಧರ್ಮ ರಥಯಾತ್ರೆ ಗೆ ಹಿರೇಮಗಳೂರಿನಲ್ಲಿ ಚಾಲನೆ ನೀಡಲಾಗುವುದು. ಹೋಬಳಿ, ತಾಲ್ಲೂಕು ಕೇಂದ್ರಗಲ್ಲಿ ರಥಯಾತ್ರೆ ಸಂಚರಿಸಲಿದೆ’ ಎಂದರು.

ಬಜರಂಗದಳದ ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ಸಹಸಂಯೋಜಕ ರಘು ಸಕಲೇಶಪುರ ಮಾತನಾಡಿ, ‘ಕಾರ್ಯಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶದ ಸಂದೇಶ ಹಾಕಿರುವುದಕ್ಕೆ ಕೋಮುಸೌಹಾರ್ದ ವೇದಿಕೆಯವರು ನಮ್ಮ ಮೇಲೆ ದೂರು ನೀಡಿದ್ದಾರೆ. ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ವಿಶ್ವ ಹಿಂದು ಪರಿಷತ್‌ ಜಿಲ್ಲಾ ಉಪಾಧ್ಯಕ್ಷ ಪ್ರೇಂಕಿರಣ್‌, ಮುಖಂಡ ವರಸಿದ್ಧಿ ವೇಣುಗೋಪಾಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !