ಬುಧವಾರ, ಜನವರಿ 19, 2022
25 °C
ವಿಹಿಂಪ ಮುಖಂಡ ಆರ್.ಡಿ.ಮಹೇಂದ್ರ

ದತ್ತಮಾಲೆ, ದತ್ತ ಜಯಂತಿ: ವಿವಿಧೆಡೆ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಳೆಹೊನ್ನೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಡೆಯಲಿರುವ ದತ್ತಮಾಲೆ ಅಭಿಯಾನ ಹಾಗೂ ದತ್ತ ಜಯಂತಿ ಅಂಗವಾಗಿ ಡಿ.8ರಿಂದ 19ರವರೆಗೆ ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಸಂಘಟನೆಯ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ತಿಂಗಳ ಸ್ಕಂದ ಪಂಚಮಿಯಿಂದ ಪೌರ್ಣಿಮಿಯವರೆಗೆ ದತ್ತಮಾಲೆ, ಜಯಂತಿಯ ಕಾರ್ಯಕ್ರಮ ನಡೆಯಲಿದೆ. ಡಿ.8ರಂದು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ದತ್ತ ಭಕ್ತರು ಮಾಲಾಧಾರಣೆ ಮಾಡಲಿದ್ದಾರೆ.
ಡಿ.17, 18, 19ರಂದು ಮೂರು ದಿನಗಳ ಕಾಲ ದತ್ತಪೀಠದಲ್ಲಿ ಕಾರ್ಯಕ್ರಮಗಳು ನೆರವೇರಲಿವೆ. ಡಿ.17ರಂದು ಚಿಕ್ಕಮಗಳೂರು ನಗರದಲ್ಲಿ ಮಹಿಳೆಯರಿಂದ ಶೋಭಾ ಯಾತ್ರೆ ನಡೆಯಲಿದ್ದು, ಶೋಭಾಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡರು ಭಾಗವಹಿಸಲಿದ್ದಾರೆ. ಬಳಿಕ ಮಹಿಳೆಯರು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಮಾಡಲಿದ್ದಾರೆ’ ಎಂದು ಹೇಳಿದರು.

‘ಡಿ.18ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ವಿವಿಧೆಡೆಯ ಮಠಾಧೀಶರು ಭಾಗಿಯಾಗಲಿದ್ದಾರೆ. ಯಾತ್ರೆಯ ಬಳಿಕ ಮಂಗಳೂ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ಅಖಿಲ ಭಾರತೀಯ ವಿಹಿಂಪದ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಲಾಯನ್‌ಜಿ ಭಾಗವಹಿಸಲಿದ್ದಾರೆ. 19ರಂದು ಭಕ್ತರು ದತ್ತ ಪಾದುಕೆ ದರ್ಶನ ಮಾಡಿ, ತಾವು ತಂದ ಪಡಿ ಅರ್ಪಿಸಲಿದ್ದಾರೆ’ ಎಂದು ತಿಳಿಸಿದರು.

‘ದತ್ತ ಜಯಂತಿಯ ಪೂರ್ವಭಾವಿಯಾಗಿ ಡಿ.15ರಂದು ಬಾಳೆಹೊನ್ನೂರಿನಲ್ಲಿ ಬೃಹತ್ ಶೋಭಾ ಯಾತ್ರೆ, ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಹಿಂಪ ಪ್ರಾಂತ ಸಂಯೋಜಕ ರಘು ಸಕಲೇಶಪುರ ಭಾಗವಹಿಸಲಿದ್ದಾರೆ.
15ರಂದು ಶೃಂಗೇರಿಯಲ್ಲಿ, 16ರಂದು ಕೊಪ್ಪದಲ್ಲಿ, 17ರಂದು ಎನ್.ಆರ್.ಪುರ, ಕಳಸ ಮತ್ತು ಮೂಡಿಗೆರೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ’ ಎಂದರು.

ಬಜರಂಗದಳ ಜಿಲ್ಲಾ ಸಂಯೋಜಕ ಶಶಾಂಕ್ ಹೇರೂರು, ಸಂಘಟನೆಯ ಪ್ರಮುಖರಾದ ಬಿ.ಜಗದೀಶ್ಚಂದ್ರ, ಸಂದೀಪ್‍ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.