ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರಾಗಿ ಸುರೇಶ್‌, ಉಪಾಧ್ಯಕ್ಷರಾಗಿ ರಮೇಶ್‌ ಆಯ್ಕೆ

ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌
Last Updated 12 ಅಕ್ಟೋಬರ್ 2020, 15:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ ಅಧ್ಯಕ್ಷರಾಗಿ ಡಿ.ಎಸ್‌.ಸುರೇಶ್‌ ಮತ್ತು ಉಪಾಧ್ಯಕ್ಷರಾಗಿ ಟಿ.ಎಲ್‌.ರಮೇಶ್‌ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.

ಡಿಸಿಸಿ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಪ್ರಕ್ರಿಯೆ ನಡೆಯಿತು. ಎರಡೂ ಸ್ಥಾನಕ್ಕೂ ಒಬ್ಬೊಬ್ಬರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ರೇಣುಕಾ ಪ್ರಸಾದ್‌ ಅವರು ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಸುರೇಶ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಬೆಂಬಲಿತರ ತೆಕ್ಕೆಗೆ ಪಡೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ. ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ಆಡಳಿತ ನಿರ್ವಹಿಸುವ ಗುರಿ ಇಟ್ಟುಕೊಂಡಿದ್ದೇನೆ. ಜಿಲ್ಲೆಯ ಎಲ್ಲ ರೈತರಿಗೂ ಸವಲತ್ತುಗಳನ್ನು ವಿತರಿಸಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದೆ. ಈ ಅವಕಾಶ ಬಳಸಿಕೊಂಡು ಸಹಕಾರ ಬ್ಯಾಂಕ್‌, ಸಂಘಗಳ ಮೂಲಕ ರೈತರಿಗೆ ಹೆಚ್ಚಿನ ಸಾಲ ಸಾಲಭ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ’ ಎಂದು ಹೇಳಿದರು.

‘ಹಿಂದಿನ ಆಡಳಿತ ಮಂಡಳಿ ‘ತಾರತಮ್ಯ ನೀತಿ’ ಅನುಸರಿಸುತ್ತಿತ್ತು. ಅವರಿಗೆ ಬೇಕಾದ ಸಹಕಾರ ಸಂಘಗಳಿಗೆ ಮಾತ್ರ ಸಾಲ ವಿತರಿಸುತ್ತಿದ್ದರು. ಇದು ನಮಗೂ ಸ್ವತಃ ಅನುಭವವಾಗಿದೆ’ ಎಂದು ದೂಷಿಸಿದರು.

‘ಹಿಂದಿನ ‘ತಾರತಮ್ಯ ನೀತಿ’ ನಿವಾರಿಸುತ್ತೇನೆ. ಬಹಳಷ್ಟು ಸವಾಲುಗಳು ನಮ್ಮ ಮುಂದಿವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಸಾಲ ಸೌಲಭ್ಯ ಪಡೆದ ರೈತರೇ ಮತ್ತೆಮತ್ತೆ ಪಡೆದುಕೊಂಡಿದ್ದಾರೆ. ಹೊಸಬರು ಸಾಲ ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡುತ್ತೇನೆ’ ಎಂದು ಉತ್ತರಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಬೆಳ್ಳಿ ಪ್ರಕಾಶ್‌ ನಮ್ಮ ಜತೆಗಿದ್ದರು. ಕಾರ್ಯಕ್ರಮ ನಿಮಿತ್ತ ಬೇಗ ತೆರಳಿದರು ಎಂದು ಪ್ರತಿಕ್ರಿಯಿಸಿದರು.

‘ಎಲ್ಲ ರೈತ ಕುಟುಂಬ ತಲುಪಲು ಪ್ರಯತ್ನ’

ಜಿಲ್ಲೆಯ ರೈತ ಕುಟುಂಬಗಳ ಪೈಕಿ ಈವರೆಗೆ ಶೇ 30ರೈತರನ್ನು ಡಿಸಿಸಿ ಬ್ಯಾಂಕ್‌ ತಲುಪಿದೆ. ಜನಸ್ನೇಹಿ ಆಡಳಿತ ನೀಡುತ್ತೇವೆ. ಆ ಮೂಲಕ ಜಿಲ್ಲೆಯ ಎಲ್ಲ ರೈತ ಕುಟುಂಬಗಳನ್ನು ತಲುಪಲು ಪ್ರಯತ್ನಿಸುತ್ತೇವೆ ಎಂದು ನೂತನ ಉಪಾಧ್ಯಕ್ಷ ರಮೇಶ್‌ ಹೇಳಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಒದಗಿಸಿರುವ ₹ 70 ಕೋಟಿ ಅನುದಾನದಲ್ಲಿ ₹ 55 ಕೋಟಿ ವಿತರಣೆಯಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್‌) ಮೂಲಕ ಹೊಸಬರಿಗೆ ಸಾಲ ವಿತರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ. ಹೊಸ ಸದಸ್ಯರನ್ನು ವಿತರಿಸಲು ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT