ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಲ್ಲೇ ಹಣ ಸ್ವೀಕೃತಿ, ಪಾವತಿ: ಸಿ.ಟಿ.ರವಿ

ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಶಾಖೆ ಉದ್ಘಾಟನೆ
Last Updated 1 ಸೆಪ್ಟೆಂಬರ್ 2018, 13:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಂಚೆ ಇತಿಹಾಸದಲ್ಲಿ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌(ಐಪಿಪಿಬಿ) ಕ್ರಾಂತಿಕಾರಿ ಹೆಜ್ಜೆ. ಈ ವ್ಯವಸ್ಥೆಯಲ್ಲಿ ಸಾರ್ವಜನಿಕರು ಮನೆ ಬಾಗಿಲಲ್ಲೇ ಹಣ ಸ್ವೀಕೃತಿ, ಪಾವತಿ ಮಾಡಲು ಅವಕಾಶ ಇದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಧಾನ ಅಂಚೆ ಕಚೇರಿ, ರಾಮನಹಳ್ಳಿ ಉಪಅಂಚೆ ಕಚೇರಿ ಐಪಿಪಿಬಿ ಶಾಖೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 160 ವರ್ಷಗಳ ಇತಿಹಾಸ ಇರುವ ಅಂಚೆ ಇಲಾಖೆಯು ಜನರ ವಿಶ್ವಾಸ ಗಳಿಸಿ, ಮುನ್ನಡೆಯುತ್ತಿದೆ. ಈಗ ಐಪಿಪಿಬಿ ಮೂಲಕ ಹೊಸ ದಾಖಲೆಗೆ ಮುಂದಾಗಿದೆ. ಈ ವ್ಯವಸ್ಥೆಯಲ್ಲಿ ಸಾರ್ವಜನಿಕರು ಅಂಚೆಯಕ್ಕ, ಅಂಚೆಯಣ್ಣರ ಬಳಿ ಬ್ಯಾಂಕಿಂಗ್‌ ಸೇವೆಗಳನ್ನು ಪಡೆಯಬಹುದು. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ಮನೆ ಬಾಗಿಲಲ್ಲೇ ವೃದ್ಧರು, ಮಹಿಳೆಯರು ಎಲ್ಲರೂ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಅಂತರ್ಜಾಲ, ಸೆಲ್‌ಫೋನ್‌ನಿಂದಾಗಿ ಇನ್ನು ಅಂಚೆ ಇಲಾಖೆ ಕತೆ ಮುಗಿಯಿತು, ಕಾಲದಲ್ಲಿ ಲೀನವಾಗಲಿದೆ ಎಂದು ಹೇಳಲಾಗುತ್ತಿತ್ತು. ಕೇಂದ್ರ ಸರ್ಕಾರವು ಅಂಚೆ ಇಲಾಖೆ ತೆರೆಮೆರೆಗೆ ಸರಿಯದಂತೆ ಕ್ರಮ ವಹಿಸಿದೆ. ಗ್ರಾಹಕರನ್ನು ಆಕರ್ಷಿಸಲು ಸುಕನ್ಯಾ ಸಮೃದ್ಧಿ ಯೋಜನೆ ಅನುಷ್ಟಾನಗೊಳಿಸಿತು. ಈ ಜಿಲ್ಲೆಯಲ್ಲಿ 32 ಸಾವಿಕ್ಕೂ ಹೆಚ್ಚು ಸುಕನ್ಯಾ ಖಾತೆಗಳು ಆರಂಭವಾಗಿವೆ. ಈಗ ಐಪಿಪಿಬಿ ಶಾಖೆಗಳಿಗೆ ಚಾಲನೆ ನೀಡಲಾಗಿದೆ. ಇಲಾಖೆ ಮತ್ತು ಜನರಿಗೆ ಇದರಿಂದ ಬಹಳಷ್ಟು ಸಹಕಾರಿಯಾಗಲಿದೆ ಎಂದರು.

ದೂರದರ್ಶನ (ಟಿ.ವಿ) ಆವಿರ್ಭಾವದಿಂದಾಗಿ ಆಕಾಶವಾಣಿ ಮರೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಟಿ.ವಿ ವಾಹಿನಿಗಳ ಭರಾಟೆಯಲ್ಲಿ ಬಹಳಷ್ಟು ಮಂದಿ ರೇಡಿಯೊವನ್ನು ಮರೆತೇಬಿಟ್ಟಿದ್ದರು. ಆಕಾಶವಾಣಿಯಲ್ಲಿ ಪ್ರಧಾನಿ ಮೋದಿ ಅವರ ‘ಮನ್‌ ಕಿ ಬಾತ್‌’ ಕಾರ್ಯಕ್ರಮ ಶುರುವಾದಗಿನಿಂದ ಮತ್ತೆ ರೇಡಿಯೊ ಕಡೆಗೆ ಜನರ ಒಲವು ಹೆಚ್ಚಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಜಿ.ಸಿ.ಶ್ರೀನಿವಾಸ್‌ ಮಾತನಾಡಿ, ಈ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಣ ಸಂದಾಯ, ಸ್ವೀಕೃತಿ ಎಲ್ಲ ಸೌಲಭ್ಯ ಇರುತ್ತವೆ. ಆದರೆ, ಸಾಲಸೌಲಭ್ಯ ನೀಡುವುದಿಲ್ಲ।. ರಾಜ್ಯದಲ್ಲಿ 51,679 ಖಾತೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿ, ರಾಮನಹಳ್ಳಿ, ಕಬ್ಬಿನಹಳ್ಳಿ, ಕರ್ತಿಕೆರೆ, ಮುಗುಳವಳ್ಳಿಯಲ್ಲಿ ಈಗ ಶಾಖೆಗಳನ್ನು ಉದ್ಘಾಟನೆ ಮಾಡಲಾಗಿದೆ. ಡಿಸೆಂಬರ್‌ ಅಂತ್ಯದ ಹೊತ್ತಿಗೆ ಜಿಲ್ಲೆಯ ಎಲ್ಲ ಕಚೇರಿಗಳಿಗೆ ವಿಸ್ತರಿಸುವ ಉದ್ದೇಶ ಇದೆ ಎಂದರು.

ಕ್ಯುಆರ್‌ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ನಾಲ್ವರಿಗೆ ವಿತರಿಸಲಾಯಿತು.

ಚಿಕ್ಕಮಗಳೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಎನ್‌.ರಮೇಶ್‌, ಐಪಿಪಿಬಿ ವ್ಯವಸ್ಥಾಪಕ ಪ್ರವೀಣ್‌ ಇದ್ದರು.

ಐಪಿಪಿಬಿ ಸೌಲಭ್ಯಗಳು

* ಖಾತೆ ತೆರೆಯಲು ಅರ್ಜಿ ಅಗತ್ಯ ಇಲ್ಲ ಕಾಗದರಹಿತ ವ್ಯವಸ್ಥೆ
* ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ ಇದ್ದರೆ ಸಾಕು
* ಎಸ್‌ಎಂಎಸ್‌ ಮೂಲಕ ಪ್ರತಿ ವ್ಯವಹಾರದ ಮಾಹಿತಿ
* ಕನಿಷ್ಠ ಠೇವಣಿ ಇಡಬೇಕಿಲ್ಲ, ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಿಸಬೇಕಿಲ್ಲ
* ಪಾಸ್‌ಬುಕ್‌ ಇರುವುದಿಲ್ಲ
* ‘ನೆಫ್ಟ್‌’, ಆರ್‌ಟಿಜಿಎಸ್‌ ಸೌಕರ್ಯ ಲಭ್ಯ
* ಕ್ಯುಆರ್‌ (ಕ್ವಿಕ್‌ ರೆಸ್ಪಾನ್ಸ್‌) ಕಾರ್ಡ್‌ನಿಂದ ಎಲ್ಲ ಮಾಹಿತಿ ಪಡೆಯಬಹುದು
* ಅಂಚೆಯಣ್ಣ, ಅಂಚೆಯಕ್ಕನಿಗೆ ಎಸ್‌ಎಂಎಸ್‌ ಕಳಿಸಿ ಮನೆ ಬಾಗಿಲಲ್ಲೇ ಹಣ ಸ್ವೀಕೃತಿ, ಪಾವತಿ ಮಾಡಬಹುದು
* ಸಾಮಾಜಿಕ ಭದ್ರತಾ ಯೋಜನೆಗಳ ಸೌಕರ್ಯಗಳನ್ನು ಪಡೆದುಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT