ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ | ದಶಕ ಕಳೆದರೂ ಲಭಿಸದ ಹಕ್ಕುಪತ್ರ: ಸರ್ಕಾರದ ಸೌಲಭ್ಯ ಪಡೆಯಲು ಅಡ್ಡಿ

Published 12 ಮಾರ್ಚ್ 2024, 6:55 IST
Last Updated 12 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಹಲವು ಬಡಾವಣೆಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ಹಲವು ದಶಕಗಳಿಂದ ವಾಸವಿರುವ ಅನೇಕ ಮಂದಿಗೆ ಇನ್ನೂ ಹಕ್ಕುಪತ್ರ ಲಭಿಸಿಲ್ಲ.

ಪಟ್ಟಣದ ವಾರ್ಡ್ ನಂ 7ರ ವ್ಯಾಪ್ತಿಗೆ ಬರುವ ಗ್ರಾಮಠಾಣಾ ಪ್ರದೇಶವಾದ ಅಂಬೇಡ್ಕರ್ ನಗರದಲ್ಲಿ 67 ಕುಟುಂಬಗಳು, ಹಿಳುವಳ್ಳಿ ಗ್ರಾಮದ ಸರ್ವೆ ನಂ 200ರಲ್ಲಿ 58 ಕುಟುಂಬಗಳು, ವಾರ್ಡ್ ನಂ 3ರ ಪೌರಕಾರ್ಮಿಕ ಕಾಲೊನಿಯಲ್ಲಿ 33 ಕುಟುಂಬಗಳು ಹಕ್ಕುಪತ್ರ ಇಲ್ಲದೆ ವಾಸಿಸುತ್ತಿವೆ. ಬೆಟಗೆರೆ, ಬಾವಿಹಟ್ಟಿ, ಮೇದಾರಬೀದಿ, ವಡ್ಡರ ಕಾಲೊನಿ, ಹೆಬ್ಬೆ ರಸ್ತೆ ಪ್ರದೇಶಗಳು ಕಾಫಿ ಖರಾಬು, ಬಂಜರು ಜಾಗವಾಗಿದ್ದು ಇಲ್ಲೂ ಮನೆ ನಿರ್ಮಿಸಿಕೊಂಡು ಮನೆ ನಿರ್ಮಿಸಿಕೊಂಡಿರುವ ಹಲವು ಕುಟುಂಬಗಳಿಗೆ ಹಕ್ಕುಪತ್ರ ಲಭಿಸಿಲ್ಲ. ವಾರ್ಡ್ ನಂ8ರ ವ್ಯಾಪ್ತಿಗೆ ಬರುವ ಮಾರಿಗದ್ದಿಗೆ ರಸ್ತೆ, ಆಚಾರ್ ಕಾಲೊನಿಯಲ್ಲಿ 19ಕ್ಕೂ ಹೆಚ್ಚು ಕುಟುಂಬಗಳು ಹಕ್ಕು ಪತ್ರ ಇಲ್ಲದೆ ಐದು ದಶಕಗಳಿಂದ ವಾಸವಾಗಿವೆ.

ಹಕ್ಕುಪತ್ರ ಇಲ್ಲದ ಕುಟುಂಬಗಳಲ್ಲಿ ಹೆಚ್ಚಿನವರು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಬಡತನ ರೇಖೆಗಿಂತ ಕೆಳಗಿನವರಿದ್ದಾರೆ. ಈ ಬಡಾವಣೆಗಳಿಗೆ ಕುಡಿಯುವ ನೀರು, ಬೀದಿದೀಪ, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯವೂ ಸಮರ್ಪಕವಾಗಿಲ್ಲ. ಹಕ್ಕು ಪತ್ರ ಇಲ್ಲದಿರುವುದು ಇಲ್ಲಿನ ನಿವಾಸಿಗಳಿಗೆ ಸರ್ಕಾರದ ಸೌಲಭ್ಯ ಪಡೆಯಲು ಅಡ್ಡಿಯಾಗಿದೆ.

ಹಕ್ಕು ಪತ್ರ ಇಲ್ಲದ ಕಾರಣ ಸುಸಜ್ಜಿತ ಮನೆ ನಿರ್ಮಿಸಿಕೊಳ್ಳಲು ಅಥವಾ ಆಶ್ರಯಯೋಜನೆಯಡಿ ಸಾಲ ಪಡೆಯಲು ತೊಂದರೆಯಾಗಿದೆ. ಬಹುತೇಕರು ಸೂಕ್ತ ಅಡಿಪಾಯವಿಲ್ಲದ ಕಚ್ಚಾ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಈ ಮನೆಗಳು ಭಾಗಶಃ ಅಥವಾ ಪೂರ್ಣವಾಗಿ ಕುಸಿಯುವುದು ಸಾಮಾನ್ಯ ಸಂಗತಿಯಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಇದನ್ನು ವಾಪಸ್ಸು ಕಳಿಸಿದ್ದಾರೆ. ಹಕ್ಕು ಪತ್ರ ವಿತರಿಸುವ ಬಗ್ಗೆ ಪುನರ್ ಪರಿಶೀಲಿಸುವ ಬಗ್ಗೆ ಪ್ರಸ್ತುತ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಹೇಳಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಠಾಣಾ ಮತ್ತು ಕಾಫಿ ಖರಾಬು, ಬಂಜರು ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ನಗರ ಆಶ್ರಯ ಸಮಿತಿ ಸಭೆಯ ನಡಾವಳಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಸಭೆಯಲ್ಲಿ ಸೂಚನೆಯಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಸದರಿ ಮನವಿಯನ್ನು ಪರಿಶೀಲಿಸಿರುವ ಜಿಲ್ಲಾಧಿಕಾರಿ ಪಟ್ಟಣ ಪಂಚಾಯಿತಿಗೆ ಪತ್ರ ಬರೆದು ಪಟ್ಟಣದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಾಗಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ನಿಮ್ಮಹಂತದಲ್ಲಿಯೇ ಕ್ರಮ ಕೈಗೊಳ್ಳಬೇಕೆಂದು ಪ್ರಸ್ತಾವನೆಯನ್ನು ಹಿಂದಿರುಗಿಸಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ತಿಳಿಸಿದರು.

‘ಸಮಸ್ಯೆ ಬಗೆಹರಿಸಲಾಗುವುದು’

ಪಟ್ಟಣದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ 94ಸಿಸಿ ಅಡಿ ಹಕ್ಕು ಪತ್ರ ಕೊಡಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಜಾಗದ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರ ಸಮಸ್ಯೆಯನ್ನು ಬಗೆಹರಿಸಿ ಹಕ್ಕು ಪತ್ರ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಪ್ರಜಾವಾಣಿ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT