ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಕಟ್ಟಿದ ನುಡಿ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಪುರುಷನಾಮ ಏಕೆ’ (ವಾ.ವಾ., ಮಾ.6) ಎಂಬ ಪತ್ರದಲ್ಲಿ ವಿನುತ ಅವರು ‘ಸ್ತ್ರೀಯರ ಹೆಸರಿನ ಮುಂದೆ ಪುರುಷನಾಮ ಯಾಕೆ? ಪುರುಷರ ಹೆಸರಿನ ಮುಂದೆ ಸ್ತ್ರೀನಾಮ ಇಲ್ಲವೇಕೆ’ ಎಂದು ಪ್ರಶ್ನಿಸುತ್ತಾ, ಹೆಸರಿನ ಈ ಬಗೆಯ ಬಳಕೆಗೆ ಕಾರಣವೇನೆಂಬುದನ್ನು ತಿಳಿಯುವ ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣ ತಿಳಿಯಬೇಕಾದರೆ ಮಾನವ ಸಮುದಾಯದಲ್ಲಿ ಭಾಷೆಯು ಬಳಕೆಗೊಳ್ಳುತ್ತಿರುವ ಸಮಾಜದ ರಚನೆಯ ಸ್ವರೂಪವನ್ನು ಅರಿಯಬೇಕು. ಜಗತ್ತಿನಲ್ಲಿ ಗಂಡಸರ ಮತ್ತು ಹೆಂಗಸರ ಜನಸಂಖ್ಯೆಯ ಪ್ರಮಾಣವು ತುಸು ಹೆಚ್ಚುಕಡಿಮೆ ಸಮವಾಗಿದ್ದರೂ, ಮಾನವ ಸಮುದಾಯದ ಬದುಕನ್ನು ನಿರ್ದೇಶಿಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಧರ್ಮ, ರಾಜಕಾರಣ, ತತ್ವಜ್ಞಾನ, ಕಾನೂನು, ವಿದ್ಯೆ, ವಾಣಿಜ್ಯ... ಇನ್ನಿತರ ಸಾಮಾಜಿಕ ಸಂಸ್ಥೆಗಳೆಲ್ಲವೂ ಬಹುಪಾಲು ಗಂಡಸರಿಂದಲೇ ರಚನೆಗೊಂಡಿವೆ ಮತ್ತು ಗಂಡಸರಿಂದಲೇ ತುಂಬಿವೆ.

ಮಾತಿನ ಸನ್ನಿವೇಶದಲ್ಲಿ ಪಾಲುಗೊಳ್ಳುವ ಗಂಡಸರಿಗೆ ಮತ್ತು ಹೆಂಗಸರಿಗೆ ಬೇರೆ ಬೇರೆ ಬಗೆಯ ಕಟ್ಟುಪಾಡುಗಳನ್ನು ಹಾಕಲಾಗಿದೆ. ಉದಾಹರಣೆಗೆ, ಸಾರ್ವಜನಿಕ ವ್ಯವಹಾರದ ಮಾತುಕತೆಗಳಲ್ಲಿ ಹೆಣ್ಣು ಹೆಚ್ಚಾಗಿ ತೊಡಗುವಂತಿಲ್ಲ. ಹೆಚ್ಚು ಮಾತನಾಡುವ ಹೆಂಗಸಿಗಿಂತ ಕಡಿಮೆ ಮಾತನಾಡುವ ಇಲ್ಲವೇ ಸುಮ್ಮನಿರುವ ಹೆಂಗಸು ಒಳ್ಳೆಯವಳು ಎಂಬ ನಿಲುವು ಜನಮನದಲ್ಲಿದೆ. ಸಭೆ– ಸಮಾರಂಭಗಳಲ್ಲಿ ಹೆಂಗಸರು ಜತೆಗೂಡಿದಾಗ ಸಹಜವಾಗಿ ಮಾತಿನಲ್ಲಿ ತೊಡಗಿದ್ದರೂ, ಅದನ್ನು ಗಮನಿಸುವ ಗಂಡಸರು ‘ಹೆಂಗಸರೇ ಹೀಗೆ… ವಿಪರೀತ ಮಾತನಾಡುತ್ತಾರೆ’ ಎಂದು ಗೊಣಗುತ್ತಾರೆ.

ಈ ಬಗೆಯ ನಿಲುವನ್ನೇ ಬಹುತೇಕ ಹೆಂಗಸರೂ ಹೊಂದಿದ್ದಾರೆ. ಈ ರೀತಿ ಪುರುಷ ಪ್ರಧಾನ ಸಮಾಜದ ಮೌಲ್ಯಗಳು ಭಾಷೆಯ ಬಳಕೆಯಲ್ಲಿ ಹಾಸುಹೊಕ್ಕಾಗಿವೆ. ಆದ್ದರಿಂದ ಭಾಷೆಯನ್ನು ‘ಗಂಡು ಕಟ್ಟಿದ ನುಡಿ‘ (ಮ್ಯಾನ್ ಮೇಡ್ ಲಾಂಗ್ವೇಜ್) ಎಂದು ಆಸ್ಟ್ರೇಲಿಯಾದ ಸ್ತ್ರೀವಾದಿ ಲೇಖಕಿಯೊಬ್ಬರು ಹೆಸರಿಸಿದ್ದಾರೆ.

ವಿದ್ಯಾವಂತೆಯರಾದ ಹೆಂಗಸರಲ್ಲಿ ಹಲವರು ತಮ್ಮ ಹೆಸರಿನ ಮುಂದೆ ಗಂಡನ ಇಲ್ಲವೇ ತಂದೆಯ ಹೆಸರನ್ನು ಹಾಕಿಕೊಳ್ಳುತ್ತಾರೆ. ಗಂಡನ ಹೆಸರನ್ನು ಹಾಕಿಕೊಳ್ಳುವ ಹೆಂಗಸರು, ತಾವು ‘ಇಂತಹ ಗಂಡಸಿಗೆ ಸೇರಿದ ಆಸ್ತಿ ಇಲ್ಲವೇ ವಸ್ತು’ ಎಂಬುದನ್ನು ಸಮಾಜಕ್ಕೆ ಈ ಮೂಲಕ ತಿಳಿಸುತ್ತಾರೆ. ತಂದೆಯ ಹೆಸರನ್ನು ಹಾಕಿಕೊಳ್ಳುವ ಹೆಂಗಸರು ತಮ್ಮ ತಂದೆಯು ಸಾಮಾಜಿಕ ರಂಗದಲ್ಲಿ ಮಾಡಿರುವ ಒಳ್ಳೆಯ ಕೆಲಸ ಮತ್ತು ಗಳಿಸಿರುವ ಕೀರ್ತಿಯ ಹಿನ್ನೆಲೆಯಲ್ಲಿ ತಮ್ಮನ್ನು ಸಮಾಜ ಗುರುತಿಸುವಂತಾಗಲಿ ಎಂಬ ಉದ್ದೇಶವನ್ನು ಹೊಂದಿರುತ್ತಾರೆ.

ಸಾವಿರಾರು ವರ್ಷಗಳಿಂದಲೂ ಮಾನಸಿಕವಾಗಿ ಗಂಡಿನಅಡಿಯಾಳಾಗಿ ಬಾಳುತ್ತಿರುವ ಹೆಣ್ಣು, ಇತ್ತೀಚಿನ ಕಾಲಮಾನದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಓದಿನ ಮೂಲಕ ಸಮಾಜದ ಎಲ್ಲಾ ರಂಗಗಳಿಗೆ ಅಡಿಯಿಡುತ್ತಿದ್ದರೂ ಗಂಡಸಿನ ಹೆಸರನ್ನು ತನ್ನ ಹೆಸರಿನೊಡನೆ ಹಾಕಿಕೊಳ್ಳುವುದರ ಮೂಲಕ ತನ್ನ ಸಾಮಾಜಿಕ ಇರುವಿಕೆಯನ್ನು ಮತ್ತು ಸಾಮಾಜಿಕ ಅಂತಸ್ತನ್ನು ಗಂಡಿನ ನೆರಳಿನಲ್ಲಿಯೇ ಪಡೆಯುತ್ತಿರುವುದನ್ನು ಇಂತಹ ನುಡಿಚಹರೆಗಳು ಸೂಚಿಸುತ್ತವೆ.

– ಸಿ.ಪಿ. ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT