ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಂಡೇದಾಸರಹಳ್ಳಿ: ಅಭಿವೃದ್ಧಿ ಮರೀಚಿಕೆ

ರಸ್ತೆಗಳೇ ಇಲ್ಲ, ಇರುವ ರಸ್ತೆಗಳೂ ಗುಂಡೊಮಯ
Published 3 ಜುಲೈ 2024, 6:36 IST
Last Updated 3 ಜುಲೈ 2024, 6:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ರಸ್ತೆ ಇಲ್ಲ, ಇರುವ ರಸ್ತೆಗಳು ಗುಂಡಿಮಯ, ಹೊಸ ರಸ್ತೆಗಳಿರಲಿ ಗುಂಡಿ ಮುಚ್ಚುವ ಕೆಲಸವೂ ಆಗಿಲ್ಲ.. ಇದು ಉಂಡೇದಾಸರಹಳ್ಳಿ ಮತ್ತು ಸುತ್ತಮುತ್ತಲ ಬಡಾವಣೆಗಳು ಸ್ಥಿತಿ. ಮೂಲಸೌಕರ್ಯಗಳಿಂದ ವಂಚಿತವಾಗಿರುವ ಈ ಬಡಾವಣೆ ಅಕ್ಷರಶಃ ಶಾಪಗ್ರಸ್ತವಾಗಿದೆ.

ನಗರದ ಐ.ಜಿ.ರಸ್ತೆಯಿಂದ ಉಂಡೇದಾಸರಹಳ್ಳಿ ಕಡೆಗೆ ತಿರುವು ಪಡೆದ ಕೂಡಲೇ ಗುಂಡಿಗಳು ಎದುರಾಗುತ್ತವೆ. ಹೊಂಡದ ರೀತಿಯ ಗುಂಡಿ, ರಸ್ತೆಯ ಮೇಲೆ ತಲೆ ಎತ್ತಿ ನಿಂತಿರುವ ಒಳಚರಂಡಿ ಮ್ಯಾನ್ ಹೋಲ್ ಗಳೂ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ.

ಈ ರಸ್ತೆಯಲ್ಲೇ ಮುಂದೆ ಸಾಗಿದರೆ ಮತ್ತೊಂದು ಹೊಂಡವೇ ಎದುರಾಗುತ್ತದೆ. ಈ ಹೊಂಡ ತಪ್ಪಿಸುವುದು ವಾಹನ ಸವಾರರಿಗೆ ನಿತ್ಯ ಸಾಹಸದ ಕೆಲಸ. ಕಿರಿದಾದ ರಸ್ತೆಯಲ್ಲಿ ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ದ್ವಿಚಕ್ರ ವಾಹನ ಸವಾರರು ಬೀಳುವುದು ಸಾಮಾನ್ಯವಾಗಿದೆ.

ಈ ಅಪಾಯಗಳನ್ನು ದಾಟಿ ಸಾಗಿದರೆ ಕಿರಿದಾದ ರಸ್ತೆಯಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆಯಲ್ಲಿ ಸಿಲುಕಬೇಕು.‌ ಶಾಲೆ ಬಿಡುವ ಸಂದರ್ಭದಲ್ಲಂತೂ ವಾಹನಗಳ ಸಂಚಾರ ದುಸ್ತರ.

ಒಂದು ಶಾಲಾ ಬಸ್ ಎದುರಾದರೆ ಮುಂದೆ ಸಾಗುವುದೇ ಕಷ್ಟ. ಈ ರಸ್ತೆಗೆ ಪರ್ಯಾಯ ಮಾರ್ಗ ಇಲ್ಲದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಇಂದಾವರ ರಸ್ತೆಯಿಂದ ಉಂಡೇದಾಸರಹಳ್ಳಿಗೆ ನೇರ ರಸ್ತೆ ನಿರ್ಮಾಣ ಪ್ರಸ್ತಾಪ ಕಾಗದಗಳಲ್ಲೇ ಉಳಿದಿದೆ. ಈ ರಸ್ತೆ ಅಭಿವೃದ್ಧಿಪಡಿಸಿದರೆ ಅನುಕೂಲ ಆಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಉಂಡೇದಾಸರಹಳ್ಳಿಯ ಬಡಾವಣೆಯ ರಸ್ತೆಗಳ ಸ್ಥಿತಿ
ಉಂಡೇದಾಸರಹಳ್ಳಿಯ ಬಡಾವಣೆಯ ರಸ್ತೆಗಳ ಸ್ಥಿತಿ

ನಗರದಲ್ಲಿ ರಸ್ತೆ ಗುಂಡಿ ಮುಚ್ವುವ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ.

-ವರಸಿದ್ದಿ ವೇಣುಗೋಪಾಲ ನಗರಸಭೆ ಅಧ್ಯಕ್ಷ.

ಮಳೆ ಬಂದರೆ ಕೆಸರು ಗದ್ದೆ ಇಲ್ಲಿನ ಹೊಸ ಬಡಾವಣೆಗಳಿಗೆ ದಾರಿಯೇ ಇಲ್ಲವಾಗಿದ್ದು ಮಳೆ ಬಂದರಂತೂ ಕೆಸರು ಗದ್ದೆಗಳಾಗಿ ಬಡಾವಣೆಗಳು ಮಾರ್ಪಡುತ್ತವೆ. ನಿವಾಸಿಗಳೇ ಹಳೇ ಕಟ್ಟಡಗಳ ತ್ಯಾಜ್ಯ ತಂದು ಸುರಿದು ರಸ್ತೆಗಳನ್ನು ಸಮ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮಳೆ ಬಂದರೆ ವಾಹನ ಸಂಚಾರ ಕಷ್ಟ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯ ಪರಿಹಾರವಾಗಿಲ್ಲ ಎಂಬುದು ಸ್ಥಳೀಯರು ದೂರು.

ಆಸ್ಪತ್ರೆ ಬರುವ ವಾಹನ ರಸ್ತೆಯಲ್ಲಿ ನಿಲುಗಡೆ ಉಂಡೇದಾಸರಹಳ್ಳಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರ ವಾಹನಗಳು ರಸ್ತೆಯಲ್ಲೇ ನಿಲ್ಲುತ್ತಿದ್ದು ಇದು‌ ಕೂಡ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.  ಮೊದಲೇ ಕಿರಿದಾದ ರಸ್ತೆಯಲ್ಲಿ ಒಂದು ಬದಿ ವಾಹನಗಳು ನಿಂತರೆ ಸಂಚಾರ ಮಾಡುವುದೇ ಕಷ್ಟವಾಗುತ್ತಿದೆ. ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ನಿವಾಸಿ ಚಂದ್ರಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT