ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಹುತ್ತವಿದ್ದ ಕೊಠಡಿಯೊಳಗೆ ಮಕ್ಕಳಿಗೆ ಪಾಠ, ಗೋಳು ಕೇಳುವವರಿಲ್ಲ

Published 2 ಆಗಸ್ಟ್ 2023, 5:50 IST
Last Updated 2 ಆಗಸ್ಟ್ 2023, 5:50 IST
ಅಕ್ಷರ ಗಾತ್ರ

ಕೊಪ್ಪ: ಶತಮಾನ ಕಂಡಿರುವ ತಾಲ್ಲೂಕಿನ ಬ್ರಹ್ಮನಕೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಹುತ್ತ ಬೆಳೆಯುತ್ತಿದ್ದು,  ಹುತ್ತದ ಪಕ್ಕದಲ್ಲೇ ಮಕ್ಕಳಿಗೆ ನಿತ್ಯ ಪಾಠ ನಡೆಯುತ್ತಿದೆ.

ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ  ಶಾಲೆಯ ಚಾವಣಿಯ ಪಕಾಸು, ರೀಪು, ಕಿಟಕಿ, ಬಾಗಿಲುಗಳಿಗೂ ಗೆದ್ದಲು ಹಿಡಿದಿದೆ. ಗೋಡೆಗೆ ಮೆತ್ತಿದ್ದ ಗಾರೆ ಕಿತ್ತು ಬರುತ್ತಿದೆ, ಬಿರುಕು ಬಿಟ್ಟಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂಬಂತೆ ಕಾಣುವ ಶಾಲೆಯ ಒಳಗೆ ಪ್ರವೇಶಿಸಿದಾಗಲೇ ನಿಜ ಸ್ಥಿತಿ ಅರಿವಾಗುತ್ತದೆ.

ಗ್ರಾಮದ ಬಹುತೇಕ ಮಂದಿ ಕೂಲಿ ಕಾರ್ಮಿಕರ ಮಕ್ಕಳೇ ಈ ಶಾಲೆಗೆ ಬರುತ್ತಿದ್ದಾರೆ. 1 ರಿಂದ 5ನೇ ತರಗತಿವರೆಗೆ ಒಟ್ಟು 12 ಮಂದಿ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಒಬ್ಬ ಶಿಕ್ಷಕರಿದ್ದು, ಕಲಿಕೆಗೆ ತೊಡಕಾಗಿದೆ. ಶಿಕ್ಷಕರನ್ನು ನಿಯೋಜಿಸಿ, ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಶಿಕ್ಷಕರ ಕೊರತೆ ಕಾರಣ ಇತ್ತೀಚೆಗೆ ಒಬ್ಬ ವಿದ್ಯಾರ್ಥಿ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರ್ಪಡೆಗೊಂಡಿದ್ದಾನೆ. ಪ್ರತಿದಿನ ಕೊಠಡಿಯೊಳಗೆ ಕಟ್ಟುವ ಹುತ್ತದ ಮಣ್ಣನ್ನು ತೆಗೆದು ಹೊರಗೆ ಹಾಕಲಾಗುತ್ತದೆ, ಮರುದಿನ ಬೆಳಿಗ್ಗೆ ಅದೇ ಸ್ಥಿತಿ ಮುಂದುವರಿದಿರುತ್ತದೆ. ಶಾಲಾಭಿವೃದ್ಧಿ ಸಮಿತಿಯವರು ಈ ಸಮಸ್ಯೆಗಳನ್ನು ಬಿಇಒ ಅವರ ಗಮನಕ್ಕೆ ತಂದಿದ್ದರೂ, ಅವರು ಶಾಲೆಗೆ ಭೇಟಿ ನೀಡಿಲ್ಲ, ಸಮಸ್ಯೆಗೂ ಸ್ಪಂದಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.

‘ಇಲ್ಲಿ ಬಹುತೇಕ ಕೂಲಿ ಕಾರ್ಮಿಕರ ಮಕ್ಕಳೇ ಓದುತ್ತಿದ್ದಾರೆ. ಸರ್ಕಾರ, ಶಿಕ್ಷಣ ಇಲಾಖೆ ಗಮನ ಹರಿಸಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಶ್ರಮಿಸಬೇಕು. ಹೊಸ ಕಟ್ಟಡ ನಿರ್ಮಿಸಿಕೊಡಬೇಕು’ ಎಂದು ಪೋಷಕರಾದ ಶೇಖರ್ ಎಂಬುವರು ಆಗ್ರಹಿಸಿದರು.

ಶಾಲಾ ಕೊಠಡಿಯಲ್ಲಿ ಹುತ್ತವಿರುವ ಜಾಗ
ಶಾಲಾ ಕೊಠಡಿಯಲ್ಲಿ ಹುತ್ತವಿರುವ ಜಾಗ
‘ಮಕ್ಕಳ ಭವಿಷ್ಯದ ವಿಚಾರ. ನಾವು ತಾಳ್ಮೆ ಕಳೆದುಕೊಳ್ಳುವ ಮುನ್ನ ಸ್ಪಂದಿಸಬೇಕು. ಬಿ.ಇ.ಒ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ
–ಗಜೇಂದ್ರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನೂ ಒಳಗೊಂಡಂತೆ ಇಬ್ಬರು ಶಿಕ್ಷಕರಿದ್ದಾರೆ. ಕೊಠಡಿ ದುರಸ್ತಿ ಯಾವ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಪರಿಶೀಲಿಸಬೇಕು
–ಜ್ಯೋತಿ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT