ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ- ಸಿಬ್ಬಂದಿ, ತರಬೇತುದಾರರ ಕೊರತೆ

Last Updated 1 ಮೇ 2022, 5:09 IST
ಅಕ್ಷರ ಗಾತ್ರ

ಕಡೂರು: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲ್ಲೂಕು ಕ್ರೀಡಾಂಗಣದಲ್ಲಿ ಮೇಲ್ನೋಟಕ್ಕೆ ಎಲ್ಲ ವ್ಯವಸ್ಥೆ ಇವೆ ಎನಿಸಿದರೂ ಹಲವು ಕೊರತೆಗಳನ್ನು ನೀಗಿಸಿಲ್ಲ.

ತಾಲ್ಲೂಕು ಕ್ರೀಡಾಧಿಕಾರಿ, ನುರಿತ ತರಬೇತುದಾರರು, ಕ್ರೀಡಾಂಗಣ ನಿರ್ವಹಣೆಗೆ ಸಿಬ್ಬಂದಿ ಇಲ್ಲ. ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಪಿಯು ಕಾಲೇಜು ಭಾಗದಲ್ಲಿ ರಕ್ಷಣಾ ಗೋಡೆಯೂ ಇಲ್ಲ. ಅಥ್ಲಿಟಿಕ್ಸ್‌ ಮೊದಲಾದ ಕ್ರೀಡೆಗಳಿಗೆ ಪೂರಕ ಟ್ರ್ಯಾಕ್‌ ಇಲ್ಲ. ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ. ಕ್ರೀಡಾಕೂಟ ಆಯೋಜಿಸಿದರೆ ಮೂಲ ಸೌಕರ್ಯ ಕಲ್ಪಿಸಲು ಪರದಾಡಬೇಕು.‘ಮಲ್ಟಿ ಜಿಂ’ ಇದೆ, ಆದರೆ ಅಗತ್ಯವಿರುವ ಮತ್ತಷ್ಟು ಪರಿಕರ ಇಡಲು ಜಾಗದ ಕೊರತೆ ಇದೆ. ವಾಲಿಬಾಲ್, ಬ್ಯಾಡ್ಮಿಂಟನ್ ಮುಂತಾದ ಆಟಗಳಿಗೆ ಕೋರ್ಟ್ ಇಲ್ಲ. ಯಾವುದೇ ಟೂರ್ನಿ ನಡೆಸಿದರೂ ತಾತ್ಕಾಲಿಕವಾಗಿ ಕೋರ್ಟ್ ನಿರ್ಮಿಸಿಕೊಳ್ಳಬೇಕಾದ ಸ್ಥಿತಿ ಇದೆ.

ಕ್ರೀಡಾಂಗಣದಲ್ಲಿ 400 ಮೀಟರ್ ಟ್ರಾಕ್ ನಿರ್ಮಿಸಲು ಸಾಕಾಗುವಷ್ಟು ಜಾಗ ಇಲ್ಲ. ಹೀಗಾಗಿ, 100 ಮೀಟರ್ ರೇಸಿಂಗ್ ಟ್ರಾಕ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ಸರ್ಕಾರಿ ಪಿಯು ಕಾಲೇಜಿನ ಪಕ್ಕದಲ್ಲಿ ಸುಮಾರು ಐದು ಎಕರೆ ವ್ಯಾಪ್ತಿಯಲ್ಲಿ ಇರುವ ಈ ಕ್ರೀಡಾಂಗಣದಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ₹ 32 ಲಕ್ಷ ಮಂಜೂರಾಗಿದೆ. ಈ ಅನುದಾನದಲ್ಲಿ ಗ್ಯಾಲರಿ, ಎರಡು ಕೊಠಡಿಗಳನ್ನು ನವೀಕರಿಸಲಾಗಿದೆ. ಪ್ರತ್ಯೇಕವಾಗಿ ಎರಡು ಶೌಚಾಲಯ ನಿರ್ಮಿಸಲಾಗಿದೆ.

ಶಾಸಕ ಬೆಳ್ಳಿ ಪ್ರಕಾಶ್ ಅವರು ಕ್ರೀಡಾಂಗಣಕ್ಕೆ ರಕ್ಷಣಾಗೋಡೆ ನಿರ್ಮಾಣಕ್ಕೆ ಕ್ರಮವಹಿಸಿ ಮೂರು ದಶಕಗಳ ಸಮಸ್ಯೆ ಪರಿಹರಿಸಿದ್ದಾರೆ. ಪುರಸಭೆಯ ವತಿಯಿಂದ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ವಾಯುವಿಹಾರಿಗಳಿಗೆ ಅನುಕೂಲವಾಗಿದೆ.

ಕ್ರೀಡಾಂಗಣದ ಒಂದು ಭಾಗದಲ್ಲಿ ಯೋಗ ಕೇಂದ್ರವೂ ಇದೆ. ರಾಘವೇಂದ್ರ ಯೋಗ ಕೇಂದ್ರದವರು ನಿರ್ವಹಣೆ ಮಾಡುತ್ತಿದೆ.ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕಡೂರು-ಬೀರೂರು ನಡುವೆ ಹತ್ತು ಎಕರೆ ಗುರುತಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜಾಗ ಒದಗಿಸಿದರೆ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಕೈಜೋಡಿಸಲು ಸಿದ್ಧ’

‘ಈಗಿರುವ ಕ್ರೀಡಾಂಗಣದ ವಿಸ್ತೀರ್ಣ ಕಡಿಮೆ ಇದೆ. ಅಲ್ಲಿ ಒಳಾಂಗಣ ಕ್ರೀಡೆಗಳಿಗೆ ಸೌಲಭ್ಯ ಕಲ್ಪಿಸಿ ಪಟ್ಟಣದ ಹೊರವಲಯದಲ್ಲಿ ಜಾಗ ಗುರುತಿಸಿ ಕ್ರಿಕೆಟ್ ಇತರ ಆಟೋಟ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟರೆ ಕ್ರೀಡಾ ಪ್ರತಿಭೆಗಳು ಬೆಳೆಯಲು ಅನುಕೂಲವಾಗುತ್ತದೆ’ ಎಂದು ಕಡೂರಿನವರೇ ಆದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾಕೃಷ್ಣಮೂರ್ತಿ ಹೇಳುತ್ತಾರೆ.

‘ಕಡೂರು ಮತ್ತು ಬೀರೂರು ನಡುವೆ ಕ್ರೀಡಾಂಗಣಕ್ಕಾಗಿ 10ಎಕರೆ ಜಾಗ ಒದಗಿಸಿ ಮೂಲ ಸೌಕರ್ಯ ಕಲ್ಪಿಸಿದರೆ, ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಕೈಜೋಡಿಸಲು ನಮ್ಮ ತಂದೆ ಕೃಷ್ಣಮೂರ್ತಿ ಉತ್ಸುಕರಾಗಿದ್ದಾರೆ. ಜೊತೆಗೆ ಕ್ರಿಕೆಟ್ ಅಕಾಡೆಮಿ ಸ್ಥಾಪನೆಯ ಚಿಂತನೆಯೂ ಇದೆ’ ಎಂದು ಅವರು ಹೇಳುತ್ತಾರೆ.

‘ಕ್ರೀಡೆಗೆ ಪ್ರೋತ್ಸಾಹಕ್ಕೆ ನಿಟ್ಟಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಅಗತ್ಯ ಇದೆ. ಕಡೂರು ತಾಲ್ಲೂಕು ಕ್ರೀಡಾಂಗಣದ ಜೊತೆ ಭಾವನಾತ್ಮಕ ಸಂಬಂಧವಿದೆ. ಚಿಕ್ಕಂದಿನಲ್ಲಿ ಬೆಳಿಗ್ಗೆ ಅಣ್ಣನ ಜೊತೆ ಕ್ರಿಕೆಟ್ ಆಡಲು ಅಂಗಳ ಹೋಗುತ್ತಿದ್ದ ನೆನಪು ಸದಾ ಹಸಿರಾಗಿದೆ’ ಎಂದು ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಜಾಗ ಗುರುತು; ಬಾಕಿ ಪ್ರಕ್ರಿಯೆ ನನೆಗುದಿಗೆ

ಅಜ್ಜಂಪುರ: ಪಟ್ಟಣವು ತಾಲ್ಲೂಕು ಕೇಂದ್ರವಾಗಿ ಕೇಂದ್ರವಾಗಿ ಘೋಷಣೆಯಾಗಿ ಐದು ವರ್ಷ ಗತಿಸಿವೆ. ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ನಿಟ್ಟಿನಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿರುವುದ ಬಿಟ್ಟರೆ ಬಾಕಿ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿವೆ.

ಕ್ರೀಡಾಂಗಣ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗ್ರಾಮದ ಹೈಸ್ಕೂಲು ಮತ್ತು ತಾಲ್ಲೂಕು ಅಭಿವೃದ್ದಿ ಮಂಡಳಿಗೆ (ಟಿಡಿಬಿ) ಸೇರಿದ ನಾಲ್ಕು ಎಕರೆ ಜಾಗವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾವವನ್ನು ದಾಖಲಾತಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಸಲ್ಲಿಸಲಾಗಿದೆ.

ತಾಲ್ಲೂಕಿನ ವಿವಿಧ ಕ್ರೀಡಾಕೂಟಗಳ ಆಯೋಜನೆಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯ ಇದೆ. ಈ ದಿಸೆಯಲ್ಲಿ ಪಟ್ಟಣದ ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂಬುದು ಕ್ರೀಡಾಸಕ್ತರು, ಸಾರ್ವಜನಿಕರ ಒತ್ತಾಯ.

‘ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ ಮಂಜೂರಾಗಿಲ್ಲ. ಹೀಗಾಗಿ, ಅನುದಾನ ಮಂಜೂರಾದರೆ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು’ ಎಂದು ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ತಿಳಿಸಿದರು.

ವರದಿ: ಬಾಲು ಮಚ್ಚೇರಿ, ಜೆ.ಒ. ಉಮೇಶ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT