ಗುರುವಾರ , ಅಕ್ಟೋಬರ್ 17, 2019
28 °C

ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟಿದ್ದ ಅಳಿಯ ಸಾವು

Published:
Updated:
Prajavani

ಹುಣಸೇಹಳ್ಳಿ (ಬಾಳೆಹೊನ್ನೂರು): ಮಾವನ ಅಂತ್ಯ ಸಂಸ್ಕಾರಕ್ಕೆ ಹೊರಟಿದ್ದ ಅಳಿಯ ರಸ್ತೆ ಅಪಘಾತದಲ್ಲಿ ಮೃತಪಟ್ಟು, ಕುಟುಂಬದ ಸದಸ್ಯರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಬಾಳೆಹೊನ್ನೂರು ಸಮೀಪದ ಹಲಸೂರು ಎಂಬಲ್ಲಿ ರಾಮೇಗೌಡ ಮೃತಪಟ್ಟಿದ್ದರು. ಮೃತರ ಅಂತಿಮ ದರ್ಶನಕ್ಕೆ ಹೊರಟ ಅವರ ಅಳಿಯ, ಆಡುವಳ್ಳಿ ಮೂಲದ ಹ್ಯಾರಂಬಿ ನಿವಾಸಿ ಸುರೇಶ್, ಅವರ ಪತ್ನಿ ಹಾಗೂ ಮಗ ಹುಣಸೆಹಳ್ಳಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಆ ವೇಳೆ ಬಾಳೆಹೊನ್ನೂರು ಕಡೆಯಿಂದ ಅತಿವೇಗದಿಂದ ಬಂದ ಕಾರು ರಸ್ತೆಯಿಂದ ಅನತಿ ದೂರದಲ್ಲಿ ನಿಂತಿದ್ದ ಸುರೇಶ್‍ಗೆ (50) ಡಿಕ್ಕಿ ಹೊಡೆದು ಸುಮಾರು 40 ಅಡಿಗಳಷ್ಟು ದೂರಕ್ಕೆ ಎಳೆದೊಯ್ದಿತು. ಕೂದಲೆಳೆಯ ಅಂತರದಲ್ಲಿ ತಾಯಿ– ಮಗ ಪಾರಾದರು. ಆದರೆ, ಗಂಭೀರ ಗಾಯಗೊಂಡ ಸುರೇಶ್‌ ಪತ್ನಿ, ಮಗನ ಎದುರಲ್ಲೇ ಮೃತಪಟ್ಟರು.

ಪಾನಮತ್ತ ಹಾಗೂ ಚಾಲನೆ ವೇಳೆ ಮೊಬೈಲ್ ಬಳಸಿದ ಆರೋಪದ ಅಡಿಯಲ್ಲಿ ಕಾರು ಚಾಲಕ ಮಾಗೋಡಿನ ಪೃಥ್ವಿರಾಜ್ ಎಂಬಾತನನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ, ಡಿವೈಎಸ್ಪಿ ರವೀಂದ್ರನಾಥ್ ಎಸ್.ಜಹಗೀರದಾರ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜು, ಠಾಣಾಧಿಕಾರಿ ತೇಜಸ್ವಿ ಸ್ಥಳಕ್ಕೆ ಭೇಟಿ ನೀಡಿದರು.

ಹೈವೇ ಪೆಟ್ರೋಲ್ ಕಾರಣ?
ಪೃಥ್ವಿರಾಜ್ ಚಲಾಯಿಸುತ್ತಿದ್ದ ವಾಹನವನ್ನು ತಪಾಸಣೆಗಾಗಿ ಹೈವೇ ಪೆಟ್ರೋಲ್ ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆತ ಇದನ್ನು ಗಮನಿಸಿ ಗಾಬರಿಗೊಂಡು ವಾಹನದ ವೇಗವನ್ನು ಹೆಚ್ಚಿಸಿದ್ದಾನೆ. ಆ ವೇಳೆ ಅಪಘಾತ ಸಂಭವಿಸಿದೆ ಎನ್ನುತ್ತಾರೆ ಸ್ಥಳೀಯರು. ಆದರೆ, ಹೈವೇ ಪೆಟ್ರೋಲ್ ವಾಹನ ಸೋಮವಾರ ರಾತ್ರಿ ಚಿಕ್ಕಮಗಳೂರಿಗೆ ತೆರಳುತ್ತಿತ್ತು ಎನ್ನುವುದು ಪೊಲೀಸರ ಸ್ಪಷ್ಟನೆ.

Post Comments (+)