ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದ ಜನರನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ. ಪಕ್ಕದ ಆಲಂದೂರಿನಲ್ಲಿ ಹಳ್ಳದ ನೀರು ನುಗ್ಗಿ ಎರಡು ಮನೆಗಳು ಸಂಪೂರ್ಣ ಜಲಾವೃತವಾಗಿದ್ದವು. ಮನೆಗಳಲ್ಲಿ ನಾಲ್ಕು ತಿಂಗಳ ಕೂಸು ಸಹಿತ ಎಂಟು ಜನರು ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ಅಕ್ಕಪಕ್ಕದ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಸೊಂಟಕ್ಕೆ ಹಗ್ಗವನ್ನು ಕಟ್ಟಿ ಮರದ ದಿಮ್ಮಿ ಮೇಲೆ ಒಬ್ಬೊಬ್ಬರನ್ನೇ ಸುರಕ್ಷಿತವಾಗಿ ಕರೆ ತಂದಿದ್ದಾರೆ. ‘ಮನೆಗಳ ಸುತ್ತ ನೀರು ಆವರಿಸಿತ್ತು. ಹಳ್ಳ ಏರುತ್ತಲೇ ಇತ್ತು. ಮಧ್ಯಾಹ್ನ 12.45ರಿಂದ ಸಂಜೆ 4.30ರವರೆಗೆ ಕಾರ್ಯಾಚರಣೆ ನಡೆಸಿ ಎಲ್ಲರನ್ನು ರಕ್ಷಿಸಿ ಗಾಂಧಿಗ್ರಾಮಕ್ಕೆ ಕರೆತಂದು ಬಿಟ್ಟಿದ್ದೇವೆ’ ಎಂದು ಎನ್. ಆರ್.ಪುರ ಅಗ್ನಿಶಾಮಕ ಠಾಣೆ ಸಹಾಯಕ ಠಾಣಾಧಿಕಾರಿ ಹೆನ್ರಿ ಡಿಸೋಜಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.