ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ

ಶೃಂಗೇರಿಯಲ್ಲಿ ನಿರಂತರವಾಗಿ ಕಾಡುತ್ತಿರುವ ವೋಲ್ಟೇಜ್ ಸಮಸ್ಯೆ
Last Updated 3 ಏಪ್ರಿಲ್ 2021, 4:52 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನಲ್ಲಿ ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದ್ದರೂ, ಸ್ಥಳೀಯರ ಆಕ್ಷೇಪವು ಸ್ಥಾವರ ನಿರ್ಮಾಣದ ಪ್ರಗತಿಗೆ ಹಿನ್ನಡೆಯಾಗಿದೆ.

ಗುಡ್ಡಗಾಡು ಪ‍್ರದೇಶವೇ ಹೆಚ್ಚಿರುವ ತಾಲ್ಲೂಕಿನಲ್ಲಿ ವಿದ್ಯುತ್ ಆಗಾಗ ಕೈಕೊಡುವುದು, ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆ ಹೊಸತೇನಲ್ಲ. ಶಿವಮೊಗ್ಗದಿಂದ ಚಿಕ್ಕಮಗಳೂರು –ಬಾಳೆಹೊನ್ನೂರು ಮೂಲಕ ಶೃಂಗೇರಿಗೆ 200 ಕಿ.ಮೀ ದೂರದಿಂದ ವಿದ್ಯುತ್ ಪೂರೈಕೆಯಾಗುತ್ತದೆ. ಹೊಸ ವಿದ್ಯುತ್ ಮಾರ್ಗದ ಪ್ರಸ್ತಾವದಲ್ಲಿ ಕೇವಲ 70 ಕಿ.ಮೀ ದೂರದಿಂದ ನೇರ ವಿದ್ಯುತ್ ಪಡೆಯಲು ಯೋಜನೆ ರೂಪಿಸಲಾಗಿದೆ.

ಇಲ್ಲಿಗೆ ಪೂರೈಕೆಯಾಗುತ್ತಿರುವ 33 ಕೆ.ವಿ ಸಾಮರ್ಥ್ಯದ ವಿದ್ಯುತ್ ಬಾಳೆಹೊನ್ನೂರಿನಿಂದ ಪೂರೈಕೆಯಾಗುತ್ತಿದ್ದು, ತಾಲ್ಲೂಕಿನ ಬೇಡಿಕೆಗೆ ಇದು ಸಾಕಾಗುತ್ತಿಲ್ಲ. ಬೇಸಿಗೆಯಲ್ಲಿ ಪಂಪ್‌ಸೆಟ್ ಬಳಕೆ ಹೆಚ್ಚಾಗುವುದರಿಂದಪರಿವರ್ತಕಗಳ ಮೇಲೆ ಒತ್ತಡ ಹೆಚ್ಚಾಗಿ, ಇವು ಹಾಳಾಗುತ್ತವೆ.ಐದು ವರ್ಷಗಳಿಂದ ವಿದ್ಯುತ್ ಮೋಟಾರ್ ಬಳಕೆಯೂ ಹೆಚ್ಚಿದೆ. ಪರಿವರ್ತಕಗಳ ಮೇಲಿನ ಒತ್ತಡದಿಂದ ವೋಲ್ಟೇಜ್ ಸಮಸ್ಯೆ ಬಿಗಡಾಯಿಸಿದೆ. 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ನಿರ್ಮಾಣವಾದಲ್ಲಿ ಸಮಸ್ಯೆ ಶಾಶ್ವತ ಪರಿಹಾರ ಸಿಗಬಹುದೆಂಬ ಆಶಾಭಾವ ಇದೆ.

ಉಪಕೇಂದ್ರಕ್ಕೆ ಸ್ಥಳ:ಧರೆಕೊಪ್ಪ ಗ್ರಾಮ ಪಂಚಾಯಿತಿಯ ಹೊಳೆಕೊಪ್ಪ ಗ್ರಾಮದಲ್ಲಿ ಎರಡು ಎಕರೆ ಜಾಗವನ್ನು ಗುರುತಿಸಿ ಹೊಸ ಉಪಕೇಂದ್ರ ನಿರ್ಮಾಣಕ್ಕೆ ಪ್ರಕ್ರಿಯೆಗಳು ಆರಂಭಗೊಂಡಿದ್ದವು. ವಿದ್ಯುತ್ ಮಾರ್ಗ ಹಾದು ಹೋಗುವ ಗ್ರಾಮದ ರೈತರ ಜಮೀನು,
ಮನೆ ಈ ಮಾರ್ಗದಲ್ಲಿ ಬರುವುದರಿಂದ, ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಮೆಸ್ಕಾಂ ಉಪ ವಿಭಾಗವನ್ನು ಇಲ್ಲಿಗೆ ಮಂಜೂರು ಮಾಡಿದ್ದರು. ಇಲಾಖೆ ಹೊಸ ಕಟ್ಟಡ ಹೊಂದಿದ್ದರೂ, ಕಚೇರಿಯನ್ನು ಸಂಪರ್ಕಿಸುವ ರಸ್ತೆ ನಿರ್ಮಾಣವಾಗಿಲ್ಲ.

ವಸತಿ ಗೃಹದ ಕೊರತೆ: ಮೆಸ್ಕಾಂ ಸಿಬ್ಬಂದಿಗೆ ಕೇವಲ 7 ವಸತಿಗೃಹಗಳು ಇದ್ದು, ಅವು ಸಹ ಜೀರ್ಣಾವಸ್ಥೆಯಲ್ಲಿವೆ.

ಕಚೇರಿ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಅತಿಥಿ ಗೃಹವು ಖಾಸಗಿಯವರ ಆಕ್ಷೇಪದ ಕಾರಣಕ್ಕೆ ಸ್ಥಗಿತಗೊಂಡಿದೆ.

ಕಂದಾಯ ವಿಭಾಗದಲ್ಲಿ ನಾಲ್ಕು ಹುದ್ದೆಗಳು ಖಾಲಿ ಇದ್ದು, ಇರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಮೆಸ್ಕಾಂ ಸಿಬ್ಬಂದಿ.

‘ಸಾರ್ವಜನಿಕರ ಸಹಕಾರ ಅಗತ್ಯ’
ತಾಲ್ಲೂಕಿನ ಪೂರೈಕೆ ಮತ್ತು ಬೇಡಿಕೆಯಲ್ಲಿ ವ್ಯತ್ಯಾಸ ಇರುವುದರಿಂದ ನಿರಂತರ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. 110 ಕೆ.ವಿ ಉಪಕೇಂದ್ರಕ್ಕೆ ಮಂಜೂರಾತಿ ದೊರಕಿದ್ದರೂ, ಸ್ಥಳದ ಗೊಂದಲದಿಂದ ಉಪಕೇಂದ್ರ ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಮೆಸ್ಕಾಂ ಶೃಂಗೇರಿ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ್ ತಿಳಿಸಿದರು.

ಸಾರ್ವಜನಿಕರು ಸಹಕಾರ ನೀಡಿದಲ್ಲಿ 110 ಕೆ.ವಿ ಉಪಕೇಂದ್ರ ನಿರ್ಮಾಣ ಮಾಡಬಹುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT